ಕರಾವಳಿ

ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಗೆ ಸಿಸಿಬಿ ದಾಳಿ : ಕೊಲೆ, ದರೋಡೆ ಪ್ರಕರಣದ ಆರೋಪಿ ಮಹಿಳಾ ಪಿಂಪ್ ಸಹಿತಾ ಇಬ್ಬರ ಸೆರೆ

Pinterest LinkedIn Tumblr

 

ಮಂಗಳೂರು, ಜುಲೈ.13: ನಗರದಲ್ಲಿ ಬಾಡಿಗೆ ಮನೆ ಹಾಗೂ ಅಪಾರ್ಟ್‌ಮೆಂಟ್ ಮೂಲಕ ವೇಶ್ಯಾವಾಟಿಕೆ ನಡೆಸುವ ಜಾಲ ಸಕ್ರಿಯವಾಗಿದ್ದು, ಇಂತಹ ಇನ್ನೊಂದು ಜಾಲವನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿ ಮಹಿಳಾ ಪಿಂಪ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ,ಇಬ್ಬರು ಯುವತಿಯರನ್ನು ರಕ್ಷಿಸಿದಾರೆ.

ಪಡುಬಿದ್ರಿ ಮುದರಂಗಡಿಯ ನಿವಾಸಿ ಸಜಿತ್ ಶೇಖರ್ (30) ಮತ್ತು ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮಹಿಳಾ ಪಿಂಪ್ ಕೊಟ್ಟಾರ ಸಮೀಪದ ಕೋಡಿಕಲ್‌ನ ಶನತಾ ( ಹೆಸರು ಬದಲಾಯಿಸಲಾಗಿದೆ) ಬಂಧಿತ ಆರೋಪಿಗಳು. ಇವರಿಂದ 5 ಮೊಬೈಲ್ ಫೋನ್, 15,240ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕೊಟ್ಟಾರ ಚೌಕಿಯ ಮನೆಯೊಂದನ್ನು ಬಾಡಿಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಕೊಟ್ಟಾರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸಜಿತ್ ಶೇಖರ್ ಹಾಗೂ ಮಹಿಳಾ ಪಿಂಪ್ ಅನ್ನು ಮಂಗಳೂರು ಸಿಸಿಬಿ ಪೊಲೀಸರು ಮತ್ತು ಕಾವೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈ ಸಂದರ್ಭ ವೇಶ್ಯಾವಾಟಿಕೆ ದಂಧೆಗೆ ಬಳಸಲು ಕರೆ ತಂದಿದ್ದ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.

ಆರೋಪಿ ಸಜಿತ್ ಶೇಖರ್ ಈ ಮನೆಯನ್ನು ಬಾಡಿಗೆಗೆ ಪಡೆದು ಮಹಿಳಾ ಪಿಂಪ್ ಜೊತೆ ಸೇರಿಕೊಂಡು ಯುವತಿಯರನ್ನು ಈ ಮನೆಯಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣಗಳಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಶ್ಯಾಮ್ ಸುಂದರ್ ಮತ್ತು ಸಿಬ್ಬಂದಿ ಹಾಗೂ ಕಾವೂರು ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಆರ್. ನಾಯಕ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಮಹಿಳಾ ಪಿಂಪ್ ಕೊಲೆ, ದರೋಡೆ ಪ್ರಕರಣದ ಹಳೆ ಆರೋಪಿ:

ಬಂಧಿತ ಮಹಿಳಾ ಪಿಂಪ್ ಹಳೆ ಆರೋಪಿಯಾಗಿದ್ದು, ಈ ಹಿಂದೆ ತ್ರಿಕೋನ ಪ್ರೇಮಕ್ಕೆ ಸಂಬಂಧಿಸಿ 2012ರ ಡಿ.22ರಂದು ನಗರದ ಬಂದರು ಪ್ರದೇಶದಲ್ಲಿ ನಡೆದ ಗಿರೀಶ್ ಪುತ್ರನ್ ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿರುತ್ತಾಳೆ. ಕೊಲೆಯಾದ ಜೆಡಿಎಸ್ ಮುಖಂಡ ಗಿರೀಶ್ ಪುತ್ರನ್ ಶವ ಡಿ.23ರಂದು ಬಜಪೆ ಸಮೀಪದ ಪೆರ್ಮುದೆಯಲ್ಲಿ ಪತ್ತೆಯಾಗಿತ್ತು. ಕೊಲೆ ಕೃತ್ಯದ ಬಳಿಕ ಆರೋಪಿಗಳು ಗಿರೀಶ್ ಬಳಿ ಇದ್ದ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕೊಲೆ ಹಾಗೂ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳನ್ನು 2013 ಎ.11ರಂದು ಪೊಲೀಸರು ಬಂಧಿಸಿದ್ದರು.

Comments are closed.