ಕರಾವಳಿ

ಮನೆಗೆ ಬಂದ ಡಾನ್ ಬನ್ನಂಜೆಯಿಂದ ಪೂಜೆ: ತಾಯಿ ಹಾಗೂ ಕುಟುಂಬದವರ ಜೊತೆ ರಾಜಾ ಮಾತುಕತೆ (Exclusive)

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅನುಮತಿಯಂತೆ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಬೆಳಗಾವಿಯ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜನನ್ನು ಪೊಲೀಸರು ನಿನ್ನೆ (ಭಾನುವಾರ) ಬಿಗಿ ಭದ್ರತ್ರೆಯಲ್ಲಿ ಉಡುಪಿಗೆ ಕರೆ ತಂದಿದ್ದು ರಾತ್ರಿ ಉಡುಪಿ ನಗರ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಬನ್ನಂಜೆ ರಾಜನನ್ನು ಉಳಿಸಿಕೊಂಡು ಇಂದು (ಸೋಮವಾರ) ಬೆಳಗ್ಗೆ ೯ ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮಲ್ಪೆ ಸಮೀಪದ ಕಲ್ಮಾಡಿಯಲ್ಲಿರುವ ತಾಯಿಯೊಂದಿಗೆ ಇರಲು ನ್ಯಾಯಾಲಯ ಮಾನವೀಯತೆಯ ನೆಲೆಯಲ್ಲಿ ಅವಕಾಶ ಕಲ್ಪಿಸಿದೆ.

p

ತಾಯಿಯ ನೋಡುವ ಇಂಗಿತ…
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಬನ್ನಂಜೆ ರಾಜ ವೀಡಿಯೊ ಕಾನ್ಫೆರೆನ್ಸ್ ಮೂಲಕ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಅನುವು ಮಾಡಿಕೊಡಬೇಕೆಂದು ನ್ಯಾಯಾಧೀಶ ವೆಂಕಟೇಶ್ ನಾಯ್ಕ ಅವರಲ್ಲಿ ಮನವಿ ಮಾಡಿದರು. ಅದರಂತೆ ಬನ್ನಂಜೆ ರಾಜ ಪರ ವಕೀಲ ಉಡುಪಿಯ ಶಾಂತಾರಾಮ್ ಶೆಟ್ಟಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ತಾಯಿಯೊಂದಿಗೆ ಇರಲು ಬನ್ನಂಜೆ ರಾಜನಿಗೆ ಅನುಮತಿ ನೀಡಿ ನ್ಯಾಯಾಧೀಶರು ಜು.5ರಂದು ಆದೇಶ ನೀಡಿದರು. ಇದಕ್ಕಾಗಿ ಸಾರಿಗೆ ಹಾಗೂ ಭದ್ರತೆಗೆ ತಗಲುವ ವೆಚ್ಚವನ್ನು ಬನ್ನಂಜೆ ರಾಜನೇ ಪೊಲೀಸ್ ಇಲಾಖೆಗೆ ಭರಿಸಬೇಕು ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಸೂಚಿಸಿತ್ತು.

ಕಲ್ಮಾಡಿಯ ಮನೆಗೆ ಬಂದ ಬನ್ನಂಜೆ..
ಅದರಂತೆ ಬೆಳಗಾವಿಗೆ ತೆರಳಿದ ಉಡುಪಿ ನಗರ ಠಾಣಾಧಿಕಾರಿ ಸುನೀಲ್ ಕುಮಾರ್ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡ ನಿನ್ನೆ ಸಂಜೆಯ ಹೊತ್ತಿಗೆ ಉಡುಪಿಗೆ ಕರೆ ತಂದಿದ್ದರು. ಇಂದು ಬೆಳಗ್ಗೆ ಮತ್ತೇ ಬನ್ನಂಜೆ ರಾಜನನ್ನು ಬಿಗಿ ಭದ್ರತೆಯಲ್ಲಿ ಪೋಲಿಸ್ ವಾಹನದ ಮೂಲಕ ಕಲ್ಮಾಡಿಯ ತಾಯಿಯ ಮನೆಗೆ ರಾಜನನನ್ನು ಕರೆ ತಂದಿದ್ದಾರೆ.

ಪೂಜೆ ಮಾಡಿದ ಡಾನ್..!
ಮನೆಗೆ ಆಗಮಿಸುತ್ತಲೇ ಮನೆ ಸಮೀಪದ ಗುಡಿಗಳಿಗೆ ಕೈ ಮುಗಿದ ಬನ್ನಂಜೆ ರಾಜ ಪೂಜೆ ನಡೆಸಿ ತಾಯಿಯ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾನೆ. ಬನ್ನಂಜೆ ರಾಜಾ ಪತ್ನಿ ಹಾಗೂ ಮಕ್ಕಳು ಕೂಡ ಕಲ್ಮಾಡಿ ನಿವಾಸಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇವರ ಜೊತೆ ಮತ್ತು ಒಡಹುಟ್ಟಿದವರ ಜೊತೆ ಬನ್ನಂಜೆ ಮಾತುಕತೆ ನಡೆಸುತ್ತಿದ್ದಾನೆ.  ನಗುಮುಖದಲ್ಲಿ ಅಕ್ಕಪಕ್ಕ ನೆರದವರಿಗೆ ಕೈಬೀಸಿದ್ದ ಬನ್ನಂಜೆ ಬಳಿಕ ಮನೆಯೊಳಕ್ಕೆ ತೆರಳಿದ್ದಾರೆ.

ತಾಯಿಯನ್ನು ನೋಡಲು ಲಕ್ಷ ಖರ್ಚು.?!
ಒಂದು ದಿನದ ಅನುಮತಿ ನೀಡಿದ ಕೋರ್ಟ್ ಇದಕ್ಕೆ ತಗಲುವ ಭದ್ರತೆ, ಸಾರಿಗೆ ವೆಚ್ಚವನ್ನು ಬನ್ನಂಜೆ ರಾಜಾ ಬರಿಸಬೇಕೆಂದು ತಿಳಿಸಿದ್ದು ಮೂಲಗಳ ಪ್ರಕಾರ ಒಂದೂವರೆ ಲಕ್ಷ ಅಂದಾಜು ಹಣವನ್ನು ಬನ್ನಂಜೆ ಸಂಬಂದಪಟ್ಟಲ್ಲಿ ಸಂದಾಯ ಮಾಡಿದ್ದಾನೆ ಎಂಬ ಮಾಹಿತಿಯಿದೆ.

ಬಿಗುಬಂದೋಬಸ್ತ್
ಬನ್ನಂಜೆ ಆಗಮನದ ಹಿನ್ನಲೆ ಮನೆಯನ್ನು ಸಂಪೂರ್ಣ ಶೋಧ ಹಾಗೂ ಪರಿಶೀಲನೆ ನಡೆಸಿದ್ದು ಪೊಲೀಸರು ಮನೆಯ ಸುತ್ತ ಬಿಗಿ ಭದ್ರತೆಯನ್ನು ಒದಗಿಸಿದ್ದರು. ಬನ್ನಂಜೆ ರಾಜ ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ತಾಯಿ ಹಾಗೂ ಕುಟುಂಬಿಕರ ಜೊತೆಗೆ ಮಾತ್ರ ಇರಲು ಅನುಮತಿ ನೀಡಲಾಗಿದ್ದು, ಉಳಿದಂತೆ ಸ್ನೇಹಿತರು, ಸಹಚರರಿಗೆ ಯಾರಿಗೂ ಮನೆ ಒಳಗೆ ಪ್ರವೇಶ ನಿರ್ಬಂದಿಸಲಾಗಿದೆ. ಮನೆಯ ಸುತ್ತಾ ಸಿಸಿ ಟಿವಿ ಕ್ಯಾಮರಗಳನ್ನು ಅಳವಡಿಸಿದ್ದು ಮನೆಯ ಸುತ್ತಾಮುತ್ತಾ ಪೋಲಿಸರು ಹದ್ದಿನ ಕಣ್ಣು ಇರಿಸಿದ್ದಾರೆ. ಬನ್ನಂಜೆ ರಾಜ ಉಳಿದುಕೊಂಡಿರುವ ಉಡುಪಿ ನಗರ ಪೊಲೀಸ್ ಠಾಣೆಯ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದ್ದು, ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿತ್ತು. ಸುಮಾರು 35 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಬನ್ನಂಜೆ ರಾಜನನ್ನು ಇಂದು (ಸೋಮವಾರ) ಸಂಜೆ ಮತ್ತೆ ನಗರ ಠಾಣೆಗೆ ಕರೆ ತರಲಿರುವ ಪೊಲೀಸರು ಲಾಕಪ್‌ನಲ್ಲಿ ಇರಿಸಿಕೊಂಡು ಜು.10ರಂದು ಬೆಳಗ್ಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯ ಕೀಯ ಪರೀಕ್ಷೆಗೆ ಒಳಪಡಿಸಿ ಬೆಳಗಾವಿ ಜೈಲಿಗೆ ಕರೆದೊಯ್ಯಲಿದ್ದಾರೆ ಎಂಬ ಮಾಹಿತಿಯಿದೆ.

(ವರದಿ-ಯೋಗೀಶ್ ಕುಂಭಾಸಿ, ಉಡುಪಿ)

Comments are closed.