ಕರಾವಳಿ

ಮಂಗಳೂರಿನಲ್ಲಿ ಬೀದಿ ವ್ಯಾಪಾರ ಮುಕ್ತ ರಸ್ತೆಗೆ ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಸೂಚನೆ

Pinterest LinkedIn Tumblr

ಮಂಗಳೂರು : ಶಿವಮೊಗ್ಗ ಗಾಂಧಿ ಬಜಾರ್ ಮಾದರಿಯಲ್ಲಿ ಮಂಗಳೂರಿನಲ್ಲೂ ಕೂಡಾ ಬೀದಿ ವ್ಯಾಪಾರ ಮುಕ್ತ ರಸ್ತೆ ಯನ್ನಾಗಿಸಲಾಗು ವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಇಂಗಿತ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಬೀದಿ ವ್ಯಾಪಾರ ಮುಕ್ತ ರಸ್ತೆ ಯಶಸ್ವಿಯಾಗಿದೆ. ನಗರದ ಲೇಡಿಗೋಶನ್‌ನಿಂದ ಸೆಂಟ್ರಲ್ ಮಾರುಕಟ್ಟೆಗೆ ಹೋಗುವ ರಸ್ತೆಯನ್ನು ಬೀದಿ ವ್ಯಾಪಾರ ರಸ್ತೆಯನ್ನಾಗಿಸಬಹುದಾಗಿದೆ. ಬೀದಿ ವ್ಯಾಪಾರಿಗಳಿಗೆ ಗುರುತಿಸಿದ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಿ ಈ ಯೋಜನೆ ಅನುಷ್ಠಾನ ಮಾಡುವ ಚಿಂತನೆಯನ್ನು ಇಲಾಖೆ ಹೊಂದಿದೆ ಎಂದರು. ಅಲ್ಲದೆ ಈ ಬಗ್ಗೆ ಸಮರ್ಪಕ ಸಮೀಕ್ಷೆ ನಡೆಸುವಂತೆ ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿಗೆ ಆಯುಕ್ತರು ಸೂಚಿಸಿದರು.

ಮಂಗಳೂರು ನಗರದಲ್ಲಿ 70ರ ದಶಕದಲ್ಲಿ 15 ನಿಮಿಷಕ್ಕೊಂದು ಕಾರು, ಬಸ್‌ಗಳು ಓಡಾಡುತ್ತಿದ್ದವು. ಇದೀಗ ರಸ್ತೆ ದಾಟಲು 15-20 ನಿಮಿಷ ಕಾಯುವ ಸ್ಥಿತಿ ಬಂದಿದೆ. ನಗರದ ಒಳಗಡೆ ರಸ್ತೆ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ ಶಾಸಕರು, ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಬೇಕು ಎಂದು ಕುತ್ತಾರ್‌ನ ವ್ಯಕ್ತಿಯೊಬ್ಬರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಟಿ.ಆರ್.ಸುರೇಶ್ ಇದೇ ತಿಂಗಳಲ್ಲಿ ಸಭೆ ನಡೆಸುವುದಾಗಿ ಪ್ರತಿಕ್ರಿಯಿಸಿದರು.

ಮೂಡುಬಿದಿರೆಯಲ್ಲಿ ಟೂರಿಸ್ಟ್ ಟ್ಯಾಕ್ಸಿ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿಯವರು ಪಾರ್ಕಿಂಗ್ ಮಾಡುತ್ತಿದ್ದಾರೆ. ಪ್ರಶ್ನಿಸಲು ಹೋದರೆ ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದು ಟ್ಯಾಕ್ಸಿ ಚಾಲಕರೊಬ್ಬರು ದೂರಿದರು. ಟ್ಯಾಕ್ಸಿ ನಿಲ್ದಾಣದಲ್ಲಿ ಯಾರಿಗೂ ದಿನವಿಡೀ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ. ಹಲ್ಲೆಗೆ ಮುಂದಾದರೆ ದೂರು ನೀಡಬಹುದು ಎಂದು ಆಯುಕ್ತರು ಸಲಹೆ ನೀಡಿದರು.

ನಗರದಲ್ಲಿ ಸಂಚರಿಸುವ 61 ಹಾಗೂ 10ಎ ಸಿಟಿ ಬಸ್‌ಗಳಲ್ಲಿ ಶಾಲಾ ಮಕ್ಕಳಿಗೆ ರಿಯಾಯಿತಿ ನೀಡುವುದಿಲ್ಲ. 10 ರೂ. ನೀಡಿದರೆ ಚಿಲ್ಲರೆ ಹಿಂತಿರುಗಿಸುವುದಿಲ್ಲ ಎಂದು ಕಪಿತಾನಿಯಾದ ಮಹಿಳೆಯೊಬ್ಬರು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಸಿಟಿ ಬಸ್‌ಗಳಲ್ಲಿ ಪಾಸ್ ಹೊಂದಿದ್ದರೆ ಶೇ.60ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದರು.

ಬೆಂದೂರ್‌ವೆಲ್‌ನಲ್ಲಿ ಶಾಲೆ ಬಿಡುವಾಗ ಪೊಲೀಸರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರೊಬ್ಬರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಈ ಬಗ್ಗೆ ಶಾಲಾಡಳಿತ ಮಂಡಳಿ ಗಮನಿಸಬೇಕು. ಭದ್ರತಾ ಸಿಬ್ಬಂದಿ ನೇಮಿಸಿ ಮಕ್ಕಳನ್ನು ರಸ್ತೆ ದಾಟಿಸಲು ಕ್ರಮಕೈಗೊಳ್ಳಬೇಕು ಎಂದರಲ್ಲದೆ, ಪೊಲೀಸರನ್ನು ಕೂಡಾ ನಿಯೋಜಿಸಲಾಗುವುದು ಎಂದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಕುಮಾರಸ್ವಾಮಿ ಉಪಸ್ಥಿತರಿದ್ದರು.

Comments are closed.