ಕರಾವಳಿ

ಸಂಸದ ನಳಿನ್ ಕುಮಾರ್‌ರಿಂದ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಪರಿಶೀಲನೆ : ತ್ವರಿತ ಕಾಮಗಾರಿಗೆ ಸೂಚನೆ

Pinterest LinkedIn Tumblr

ಮಂಗಳೂರು, ಜುಲೈ. 6: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆಮೆಗತಿಯಲ್ಲಿ ನಡೆಯುತ್ತಿರುವ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಸಹಿತ ತಲಪಾಡಿಯಿಂದ ಸುರತ್ಕಲ್ ತನಕದ ಕಾಮಗಾರಿಯ ಪರಿಶೀಲನೆ ನಡೆಸಿದರು.ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರ ನವಯುಗ ಕಂಪನಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ರಾ.ಹೆ.66ರ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಮುಗಿಯುವ ತನಕ ಮಂಗಳೂರಿನ ಕೆಎ 19 ನಂಬರ್ ಪ್ಲೇಟಿನ ಎಲ್ಲ ಖಾಸಗಿ ವಾಹನಗಳಿಗೆ ತಲಪಾಡಿ ಟೋಲ್‌ಗೇಟ್‌ನಲ್ಲಿ ಯಾವುದೇ ಶುಲ್ಕ ಸ್ವೀಕಾರ ಮಾಡಬಾರದು ಎಂದು ಸೂಚನೆ ನೀಡಿದರು.

ಹೆಜಮಾಡಿ ಟೋಲ್‌ನಲ್ಲಿ ಕೆಎ 20 ಮತ್ತು ಎನ್‌ಐಟಿಕೆ ಟೋಲ್‌ನಲ್ಲಿ ಕೆಎ 19 ನಂಬರ್ ಪ್ಲೇಟ್‌ನ ವಾಹನಗಳಿಗೆ ಶುಲ್ಕ ಪಡೆಯುತ್ತಿಲ್ಲ. ಅದೇ ಮಾದರಿಯಲ್ಲಿ ಇನ್ನು ತಲಪಾಡಿ ಟೋಲ್‌ನಲ್ಲಿ ಕಮರ್ಷಿಯಲ್ ವಾಹನ ಬಿಟ್ಟು ಉಳಿದ ಕೆಎ 19 ನಂಬರ್ ಪ್ಲೇಟ್‌ನ ವಾಹನಗಳಿಗೆ ಶುಲ್ಕ ವಸೂಲಿ ಮಾಡಬಾರದು ಎಂದು ನಳಿನ್ ಸೂಚಿಸಿದರು.

ತಲಪಾಡಿಯಿಂದ ಕುಂದಾಪುರ ತನಕದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯು ಎಂಟು ವರ್ಷದಿಂದ ನಡೆಯುತ್ತಿದೆ. ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಫ್ಲೈ ಓವರ್ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಸರ್ವಿಸ್ ರಸ್ತೆ, ಚರಂಡಿಯ ಸಮಸ್ಯೆ ತಲೆದೋರಿದೆ. ನವಯುಗ ಕಂಪನಿಯ ವೈಯಕ್ತಿಕ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ. ಇದೀಗ ನಿರಂತರ ಸಭೆಗಳನ್ನು ನಡೆಸಿ, ತಕ್ಷಣ ಕಾಮಗಾರಿಯ ವೇಳಾಪಟ್ಟಿ ರಚಿಸಿ ಕೊಡಲು ಸೂಚಿಸಲಾಗಿದೆ ಎಂದು ನಳಿನ್ ತಿಳಿಸಿದರು.

ತೊಕ್ಕೊಟ್ಟು ಮೇಲ್ಸೇತುವೆ ಡಿಸೆಂಬರ್ ಮತ್ತು ಪಂಪ್‌ವೆಲ್ ಮೇಲ್ಸೇತುವೆ ಜನವರಿ ಅಂತ್ಯಕ್ಕೆ ಕಾಮಗಾರಿ ಮುಗಿಸುತ್ತೇವೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ವೇಳಾಪಟ್ಟಿಯಂತೆ 15 ದಿನಗಳಲ್ಲಿ ಕಾಮಗಾರಿ ಪ್ರಗತಿ ತೋರಿಸದಿದ್ದಲ್ಲಿ ತಲಪಾಡಿ ಟೋಲ್ ಬಂದ್ ಮಾಡಿ, ಹಣ ವಸೂಲಿ ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ನಳಿನ್ ಉತ್ತರಿಸಿದರು.

ಇಲ್ಲಿ ಎದುರಾದ ಶಾಶ್ವತ ಸಮಸ್ಯೆಗಳ ಪರಿಹಾರಕ್ಕೆ 6-7 ತಿಂಗಳು ಬೇಕಿದೆ. ಅದಕ್ಕಿಂತ ಮುಂಚೆ ಎರಡೂ ಫ್ಲೈ ಓವರ್‌ಗಳು ಮತ್ತು ನಂತೂರು ಸಮೀಪದ ಸರ್ವಿಸ್ ರಸ್ತೆಗಳನ್ನು ದುರಸ್ತಿ ಮಾಡಿ ಅಗಲಗೊಳಿಸಲು, ಚರಂಡಿಗಳನ್ನು ಸರಿಪಡಿಸಲು ಸೂಚಿಸಲಾಗಿದೆ. ನವಯುಗದ ವಿಳಂಬ ನೀತಿ ಬಗ್ಗೆ ಈಗಾಗಲೇ ಎರಡು ಬಾರಿ ಹೆದ್ದಾರಿ ಸಚಿವಾಲಯದ ಗಮನ ಸೆಳೆಯಲಾಗಿದೆ. ಕಂಪನಿಗೆ 1.5 ಕೋ.ರೂ. ದಂಡ ಹಾಕಲಾಗಿದೆ. ಆದರೂ ಕಂಪನಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಆದಾಗ್ಯೂ ಕೊನೆಯ ಬಾರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಅದಕ್ಕೂ ಸ್ಪಂದಿಸದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ನಳಿನ್ ಹೇಳಿದರು.

ತಲಪಾಡಿ ಟೋಲ್ ಬಳಿಯ ಅವೈಜ್ಞಾನಿಕ ಚರಂಡಿ, ಕಸದ ರಾಶಿ, ರಿಲಯನ್ಸ್ ಪೆಟ್ರೋಲ್ ಬಂಕ್ ಸಮೀಪದ ಅಂಡರ್ ಪಾಸ್ ಬಳಿ ನೀರು ಹರಿಯಲು ತಡೆ, ಬೀರಿ ಜಂಕ್ಷನ್, ತೊಕ್ಕೊಟ್ಟು ಫ್ಲೈಓವರ್ ಪಕ್ಕದ ಚರಂಡಿಗಳು, ಜಪ್ಪಿನಮೊಗರು, ಪಂಪ್‌ವೆಲ್, ನಂತೂರು, ಕೊಟ್ಟಾರ, ಕೂಳೂರು, ಬೈಕಂಪಾಡಿ, ಸುರತ್ಕಲ್‌ನ ಹೆದ್ದಾರಿ ಅವ್ಯವಸ್ಥೆಯನ್ನು ಸಂಸದರು ವೀಕ್ಷಿಸಿದರು.

ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಲಹೆಗಾರರಾದ ಅಜಿತ್ ಕುಮಾರ್ ಜೈನ್, ರವಿಕುಮಾರ್, ನವಯುಗದ ಚೀಫ್ ಪ್ರಾಜೆಕ್ಟ್ ಮ್ಯಾನೇಜರ್ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Comments are closed.