ಕರಾವಳಿ

ಮಂಗಳೂರಿನ ಕಾಲೇಜಿನಲ್ಲಿ ಮತ್ತೆ ಸ್ಕಾರ್ಫ್ ವಿವಾದ : ವಿದ್ಯಾರ್ಥಿನಿಯರಿಂದ ರಸ್ತೆಗಿಳಿದು ಪ್ರತಿಭಟನೆ

Pinterest LinkedIn Tumblr

ಮಂಗಳೂರು ಜೂನ್ 25: ಮಂಗಳೂರಿನ ಕಾಲೇಜೊಂದರಲ್ಲಿ ಮತ್ತೆ ಸ್ಕಾರ್ಫ್ ವಿವಾದ ತಲೆದೋರಿದ್ದು, ಕಾಲೇಜಿನ ಕ್ರಮವನ್ನು ಖಂಡಿಸಿ ಸಿಎಫ್‌ಐ ನೇತೃತ್ವದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.

ನಗರದ ಬೆಂದೂರ್‌ವೆಲ್ ಸಂತ ಆಗ್ನೆಸ್ ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ನಿರ್ಭಂದಿಸಿದ ಆಡಳಿತ ಮಂಡಳಿಯ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಸ್ಕಾರ್ಫ್ ಅಥವಾ ಹಿಜಾಬ್ ಧರಿಸುವ ಹಕ್ಕು ನೀಡಬೇಕೆಂದು ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಶೈಕ್ಷಣಿಕ ವರ್ಷದ ಆರಂಭದಲ್ಲೇ ನಮ್ಮನ್ನು ಸ್ಕಾರ್ಫ್ ಹಾಕದಂತೆ ತಡೆಯೊಡ್ಡುವ ಪ್ರಯತ್ನ ನಡೆಯಿತು. ಆದರೆ ನಾವು ಅದನ್ನು ವಿರೋಧಿಸುತ್ತಲೇ ಬಂದೆವು. ಶಿಕ್ಷಣ ಸಂಸ್ಥೆಯ ನಿಯಮಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ದಂಡ ವಿಧಿಸುವ ಎಚ್ಚರಿಕೆ ನೀಡಿದರು. ಆ ಹಿನ್ನೆಲೆಯಲ್ಲಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದೆವು. ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿನಿಯರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡು ದೌರ್ಜನ್ಯ ನಡೆಸುತ್ತಿದೆ ಎಂದು ಪ್ರತಿಭಟನೆ ನಿರತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಈ ಮಧ್ಯೆ ವಿದ್ಯಾರ್ಥಿನಿಯರು ಹಾಗೂ ಸಿಎಫ್‌ಐ ಮುಖಂಡರ ಸಮ್ಮುಖದಲ್ಲಿ ಕಾಲೇಜಿನ ಪ್ರಾಂಶುಪಾಲರು ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂತ ಆಯಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಜೆಸ್ವಿನಾ ಎ.ಸಿ., “ಸಂತ ಆಯಗ್ನೆಸ್ ಕಾಲೇಜು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ನಾವು ಗೌರವಿಸುತ್ತೇವೆ. ವಿದ್ಯಾರ್ಥಿಗಳ ಯಾವುದೇ ಸಮಸ್ಯೆಯಿದ್ದಲ್ಲಿ, ಆಡಳಿತವು ವಿದ್ಯಾರ್ಥಿಗಳ ಪೋಷಕರೊಂದಿಗೆ ಹಾಗು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಪರಿಹರಿಸುತ್ತದೆ” ಎಂದು ಹೇಳಿದ್ದಾರೆ.

Comments are closed.