ಕರಾವಳಿ

ವಿದ್ಯಾರ್ಥಿನಿಯರಿಗೆ ಋತುಸ್ರಾವದ ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ : ಜುಲೈಯಿಂದ ‘ಸ್ವಚ್ಛ ಗೆಳತಿ’ ಜಾಗೃತಿ ಅಭಿಯಾನ

Pinterest LinkedIn Tumblr

ಮಂಗಳೂರು, ಜೂನ್.23: ಜುಲೈ ತಿಂಗಳಿನಿಂದ ದ.ಕ. ಜಿಲ್ಲೆಯ ಶಾಲೆಗಳಲ್ಲಿ ‘ಸ್ವಚ್ಛ ಗೆಳತಿ’ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ದ.ಕ. ಜಿಲ್ಲಾ ವ್ಯಾಪ್ತಿಯ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಋತುಸ್ರಾವದ ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಈ ಅಭಿಯಾನದಲ್ಲಿ ಮಾಹಿತಿ ಒದಗಿಸಲಾಗುವುದು ದ.ಕ. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಮಾಹಿತಿ ನೀಡಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು ಸ್ವಚ್ಛ ಭಾರತ್ ಮಿಷನ್, ಜಿಲ್ಲಾ ನೆರವು ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸುಮಾರು 10 ತಿಂಗಳ ಕಾಲ ಈ ಅಭಿಯಾನ ನಡೆಯಲಿದ್ದು, ಜಿಲ್ಲೆಯ 6 ಮತ್ತು 7ನೇ ತರಗತಿಯ ಶಾಲಾ ಮಕ್ಕಗಳನ್ನು ಗುರಿಯಾಗಿರಿಸಿ ಈ ಅಭಿಯಾನ ನಡೆಯಲಿದೆ ಎಂದು ಹೇಳಿದರು.

ಜಿಲ್ಲೆಯ 1,182 ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಈ ತರಗತಿಯ ಒಟ್ಟು ವಿದ್ಯಾರ್ಥಿನಿಯರ ಸಂಖ್ಯೆ 30,734. ಈ ಮಕ್ಕಳನ್ನು 10ರಿಂದ 25 ಮಕ್ಕಳ ತಂಡಗಳಾಗಿಸಿ ಒಟ್ಟು 1,604 ತಂಡಗಳಿಗೆ ಅಷ್ಟೇ ಸಂಖ್ಯೆಯ ಎನ್,ಎಸ್,ಎಸ್, ಕಾರ್ಯಕರ್ತರಿಂದ ಆಪ್ತ ಸಮಾಲೋಚನೆಯ ಮೂಲಕ ಋತುಸ್ರಾವದ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಋತುಸ್ರಾವದ ಸಂದರ್ಭ ಬಳಸಲಾಗುವ ಪ್ಯಾಡ್ ಅಥವಾ ನ್ಯಾಪ್‌ಕಿನ್‌ಗಳಲ್ಲಿ ಜಿಲ್ಲೆಯಲ್ಲಿ ಶೇ. 18.55ರಷ್ಟು ಮಣ್ಣಿನಲ್ಲಿ ಹೂಳಲಾಗುತ್ತದೆ. ಶೇ. 24.84ರಷ್ಟು ತ್ಯಾಜ್ಯ ವಿಲೇವಾರಿ ವಾಹನಕ್ಕೆ ಹಾಕಲಾಗುತ್ತದೆ. ಶೇ.14.03 ಶೌಚಾಲಯದ ಗುಂಡಿಗೆ ಹಾಕಲಾಗುತ್ತದೆ. ಶೇ.29.52ರಷ್ಟು ಮಂದಿ ಬಚ್ಚಲು ಮನೆಯ ಒಲೆಯಲ್ಲಿ ಸುಡುತ್ತಾರೆ. ಶೇ.13.01ರಷ್ಟು ಮಂದಿ ತೋಡು ಅಥವಾ ರಸ್ತೆ ಬದಿಗಳಲ್ಲಿ ಬಿಸಾಕುತ್ತಾರೆ. ಇವೆಲ್ಲವೂ ತ್ಯಾಜ್ಯ ನಿರ್ವಹಣೆಯ ವೈಜ್ಞಾನಿಕ ವಿಧಾನವಲ್ಲದಿದ್ದರೂ, ಸುಡುವುದು ಮತ್ತು ಹೂಳುವುದನ್ನು ಸದ್ಯದ ಮಟ್ಟಿಗೆ ಪ್ರಸ್ತುತವೆನ್ನಲಾಗುತ್ತಿದೆ. ಆದರೆ ಈ ಸುಡಲು ಬಳಸಲಾಗುವ ಇನ್ಸಿನೆರೇಟರ್‌ಗಳು ದುಬಾರಿಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 140 ಶಾಲೆಗಳಿಗೆ ಈ ಇನ್ಸಿನೆರೇಟರ್‌ಗಳನ್ನು ಒದಗಿಸಲಾಗಿದೆ. ಮನೆಗಳಲ್ಲಿ ಈ ವ್ಯವಸ್ಥೆಗೆ ಸರಕಾರ ಸಬ್ಸಿಡಿ ಮೂಲಕ ವ್ಯವಸ್ಥೆ ಕಲ್ಪಿಸಿದರೆ ಉತ್ತಮ ಎಂದು ಡಾ.ಎಂ.ಆರ್. ರವಿ ಅಭಿಪ್ರಾಯಿಸಿದರು.

ದ.ಕ. ಜಿಲ್ಲೆಯಲ್ಲಿ 2011ರ ಜನಗಣತಿಯ ಪ್ರಕಾರ ಒಟ್ಟು ಮಹಿಳೆಯರ ಸಂಖ್ಯೆ 10,54,935. 11ರಿಂದ 49 ವರ್ಷ ಪ್ರಾಯದ ಮಹಿಳೆಯ ಸಂಖ್ಯೆ 4,76,800. ಪ್ರತಿ ತಿಂಗಳು ವಿದ್ಯಾರ್ಥಿಗಳು ಸೇರಿದಂತೆ ಪ್ಯಾಡ್/ನ್ಯಾಪ್‌ಕಿನ್ ಬಳಸುವವರ ಸಂಖ್ಯೆ 3,81,440. ಪ್ರತಿ ತಿಂಗಳು ಜಿಲ್ಲೆಯಲ್ಲಿ ಉಪಯೋಗಿಸಲಾಗುವ ಸರಾಸರಿ ಪ್ಯಾಡ್ ಮತ್ತು ನ್ಯಾಪ್‌ಕಿನ್‌ಗಳ ಸಂಖ್ಯೆ 30,51,520.

ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಾಗಾರ ಉದ್ಘಾಟಿಸಿ, ಋತುಸ್ರಾವದ ಸಂದರ್ಭ ಹೆಣ್ಣು ಮಕ್ಕಳು ಮಾನಸಿಕ ಖಿನ್ನತೆ ಅಥವಾ ವಿವಿಧ ರೀತಿಯ ರೋಗಗಳಿಗೆ ತುತ್ತಾಗುವ ಸಂದರ್ಭಗಳಿವೆ. ಈ ಬಗ್ಗೆ ಜಾಗೃತಿ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷೆ ಅನಿತಾ ಹೇಮಾನಾಥ ಶೆಟ್ಟಿ ‘ಸ್ವಚ್ಛ ಗೆಳತಿ’ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯರಾದ ಮಮತಾ ಗಟ್ಟಿ, ಮಂಜುಳಾ ಮಾವೆ, ಶಾಹುಲ್ ಹಮೀದ್, ಸುಚರಿತ ಶೆಟ್ಟಿ, ವಿನೋದ್ ಬೊಳ್ಳೂರು, ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಮೀಳಾ ಶೇಖರ್, ಡಾ. ಪೂರ್ಣಿಮಾ ಭಟ್, ಡಾ. ಶ್ರೀನಿವಾಸ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಜಿ.ಪಂ.ನ ಉಪ ಕಾರ್ಯದರ್ಶಿ ಎಂ.ವಿ. ನಾಯಕ್ ಸ್ವಾಗತಿಸಿದರು.

ಈ ಸಂದರ್ಭ ಅಭಿಯಾನ ಅಂಗವಾಗಿ ಆಯೋಜಿಸಲಾದ ಸ್ವಚ್ಛತಾ ಘೋಷಣಾ ಸ್ಪರ್ಧೆ ಹಾಗೂ ಸ್ವಚ್ಛತಾ ಗೀತ ರಚನೆ ಮತ್ತು ಗಾಯನ ಸ್ಪರ್ಧೆಯ ವಿಜೇತರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ವರದಿ ಕೃಪೆ : ವಾಭಾ

Comments are closed.