ಕರಾವಳಿ

ವಾಟ್ಸಪ್‌ನಲ್ಲಿ ಹುಡುಗಿ ಹೆಸರಿನಲ್ಲಿ ಪರಿಚಯ : ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪಿಗೆ 7 ವರ್ಷ ಶಿಕ್ಷೆ ಪ್ರಕಟ

Pinterest LinkedIn Tumblr

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ವಾಟ್ಸಪ್‌ನಲ್ಲಿ ಹುಡುಗಿ ಹೆಸರಿನಲ್ಲಿ ಪರಿಚಯಿಸಿಕೊಂಡು ಬಳಿಕ ಅಪಹರಿಸಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ಅಪರಾಧ ಸಾಬೀತಾಗಿದ್ದು, ಆರೋಪಿಗೆ ನ್ಯಾಯಾಲಯವು 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿದೆ.

ಬಂಟ್ವಾಳ ತಾಲೂಕು ಪಾಂಡವರಕಲ್ಲು ಕೂಮಿನಡ್ಕ ನಿವಾಸಿ ಇರ್ಷಾದ್ (27) ಶಿಕ್ಷೆಗೊಳಗಾದ ಅಪರಾಧಿ. ಈತನ ವಿರುದ್ಧ ದಾಖಲಾದ ಎಲ್ಲ 4 ಪ್ರಕರಣಗಳು ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈ ಮೇಲಿನಂತೆ ತೀರ್ಪು ಪ್ರಕಟಿಸಿದೆ.

ಈತ ನಗರದ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳನ್ನು ವಂಚಿಸಿ, ಅಪಹರಿಸಿ, ದಿಗ್ಭಂಧನದಲ್ಲಿಟ್ಟು ಅತ್ಯಾಚಾರ ಮಾಡಿದ್ದ. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಬಂಟ್ವಾಳ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಡಿ.ಟಿ. ಪುಟ್ಟರಂಗಸ್ವಾಮಿ, ಆರೋಪಿಗೆ ಅಪಹರಣ (ಐಪಿಸಿ ಸೆಕ್ಷನ್ 366) ಪ್ರಕರಣದಲ್ಲಿ 3 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ.ದಂಡ. ದಂಡ ತೆರಲು ತಪ್ಪಿದರೆ ಮತ್ತೆ 2 ತಿಂಗಳು ಸಾದಾ ಜೈಲು ಶಿಕ್ಷೆ, ಅತ್ಯಾಚಾರ (ಐಪಿಸಿ ಸೆಕ್ಷನ್ 376) ಪ್ರಕರಣದಲ್ಲಿ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದರೆ 3 ತಿಂಗಳು ಸಾದಾ ಶಿಕ್ಷೆ, ಅಕ್ರಮ ಬಂಧನ (ಐಪಿಸಿ ಸೆಕ್ಷನ್ 342) ಪ್ರಕರಣದಲ್ಲಿ 3 ತಿಂಗಳು ಹಾಗೂ ಬೆದರಿಕೆ (ಐಪಿಸಿ ಸೆಕ್ಷನ್ 506) ಪ್ರಕರಣದಲ್ಲಿ 4 ತಿಂಗಳು ಸಾದಾ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.

ಈ ಪ್ರಕರಣದಲ್ಲಿ ಲಾಡ್ಜ್ ದಾಖಲೆ ಮತ್ತು ಸಿಬ್ಬಂದಿ ಸಾಕ್ಷಿ, ವೈದ್ಯರ ವರದಿಗಳು ಸೇರಿದಂತೆ ಒಟ್ಟು 22 ಸಾಕ್ಷಿಗಳನ್ನು ಪರಿಗಣಿಸಲಾಗಿದೆ. ಸರ್ಕಾರದ ಪರವಾಗಿ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.

ಪ್ರಕರಣದ ವಿವರ :

ನಗರದ ಕಾಲೇಜುವೊಂದರಲ್ಲಿ ಓದುತ್ತಿದ್ದ 18 ವರ್ಷದ ವಿದ್ಯಾರ್ಥಿನಿಯನ್ನು ಆಕೆಯ ಗೆಳತಿಯೊಬ್ಬಳು ವಾಟ್ಸಪ್ ಗ್ರೂಪ್‌ಗೆ ಸೇರ್ಪಡೆ ಮಾಡಿದ್ದಳು. ಅದೇ ಗ್ರೂಪ್‌ನಲ್ಲಿ ವಿದ್ಯಾರ್ಥಿನಿಗೆ ರಫಾ ಎಂಬ ಹೆಸರಿನ ವಿದ್ಯಾರ್ಥಿನಿಯ ಪರಿಚಯವಾಗಿತ್ತು. ವಿದ್ಯಾರ್ಥಿನಿ ವಾಟ್ಸಪ್ ಗ್ರೂಪ್‌ನಿಂದ ಹೊರಬಂದಿದ್ದರೂ ರಫಾ ವಾಟ್ಸಪ್‌ನಲ್ಲಿ ಮೆಸೇಜ್ ಮಾಡುತ್ತಲೇ ಇರುತ್ತಿದ್ದಳು. ವಿದ್ಯಾರ್ಥಿನಿ ಕೂಡಾ ಆ ಮೆಸೇಜ್ ಪ್ರತಿಕ್ರಿಯೆ ನೀಡುತ್ತಿದ್ದಳು.

ದಿನ ಕಳೆದಂತೆ ವಿದ್ಯಾರ್ಥಿನಿಯ ಹುಟ್ಟು ಹಬ್ಬಕ್ಕೆ ರಫಾ ವಿಷ್ ಮಾಡುತ್ತಾಳೆ, ಮಾತ್ರವಲ್ಲದೆ ತನ್ನ ಸಂಬಂಧಿಕರೊಬ್ಬನ ಬಳಿ ಹೂಗುಚ್ಛ ಕಳುಹಿಸಿಕೊಡು ಬಗ್ಗೆ ತಿಳಿಸುತ್ತಾಳೆ. ಅದರಂತೆಯೇ ಕಾಲೇಜಿಗೆ ಬಂದು ಇರ್ಷಾದ್ ವಿದ್ಯಾರ್ಥಿನಿಗೆ ಹೂಗುಚ್ಛ ನೀಡಿ ವಿಷ್ ಮಾಡಿ ಹಿಂದಿರುಗುತ್ತಾನೆ.

ಕೆಲವು ದಿನಗಳ ಬಳಿಕ ವಿದ್ಯಾರ್ಥಿನಿ ತನ್ನ ಊರಿನಿಂದ ಕಾಲೇಜಿಗೆ ತೆರಳಲು ವಿಳಂಬ ಆಗುತ್ತಿದ್ದು, ತರಗತಿಗೆ ಹಾಜರಾಗಲು ಲೇಟ್ ಆಗುವ ಬಗ್ಗೆ ಹೇಳಿಕೊಳ್ಳುತ್ತಾಳೆ. ಅದಕ್ಕೆ ರಫಾ ಪ್ರತಿಕ್ರಿಯಿಸಿ ನನಗೆ ನಾಳೆ ಮಂಗಳೂರಿಗೆ ಹೋಗಲಿಕ್ಕಿದ್ದು, ನಿನ್ನನ್ನೂ ಜೊತೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸುತ್ತಾಳೆ. ವಿದ್ಯಾರ್ಥಿನಿ ಗೆಳತಿಯ ಮಾತನ್ನು ನಂಬುತ್ತಾಳೆ. 2015ರ ಜೂ. 20ರಂದು ಬೆಳಗ್ಗೆ 7:30ಕ್ಕೆ ವಿದ್ಯಾರ್ಥಿನಿ ಕಾಯುತ್ತಿದ್ದಲ್ಲಿಗೆ ಕಾರೊಂದು ಬರುತ್ತದೆ. ಆ ಕಾರನ್ನು ಇರ್ಷಾದ್ ಚಾಲನೆ ಮಾಡುತ್ತಿದ್ದ. ಕಾರಿನಲ್ಲಿ ಯುವಕನನ್ನು ನೋಡಿದ ವಿದ್ಯಾರ್ಥಿನಿ ರಫಾ ಎಲ್ಲಿ ಎಂದು ಪ್ರಶ್ನಿಸುತ್ತಾಳೆ. ರಫಾ ಮುಂದೆ ಕಾರಿಗೆ ಹತ್ತುತ್ತಾಳೆ ಎಂದು ಇರ್ಷಾದ್ ಉತ್ತರಿಸುತ್ತಾನೆ.

ಇರ್ಷಾದ್‌ನ ಮಾತನ್ನು ನಂಬಿದ ವಿದ್ಯಾರ್ಥಿನಿ ಕಾರನ್ನು ಹತ್ತುತ್ತಾಳೆ. ಬಳಿಕ ಇರ್ಷಾದ್ ವಿದ್ಯಾರ್ಥಿನಿಯನ್ನು ಬೆದರಿಸಿ ಅಪಹರಣ ಮಾಡಿ ಧಾರವಾಡಕ್ಕೆ ಕರೆದೊಯ್ಯುತ್ತಾನೆ. ಇತ್ತ ಸಂಜೆಯಾದರೂ ವಿದ್ಯಾರ್ಥಿನಿ ಮನೆಗೆ ತಲುಪದಿರುವುದನ್ನು ಗಮನಿಸಿದ ಪೋಷಕರು ಆತಂಕಗೊಂಡು ಬಂಟ್ವಾಳ ಠಾಣೆಯಲ್ಲಿ ದೂರು ನೀಡುತ್ತಾರೆ. ಇದೇ ಸಂದರ್ಭದಲ್ಲಿ ಇರ್ಷಾದ್ ಕುಟುಂಬ ಕೂಡ ಇರ್ಷಾದ್ ನಾಪತ್ತೆಯಾದ ಬಗ್ಗೆ ಪ್ರತ್ಯೇಕ ದೂರು ದಾಖಲಿಸುತ್ತದೆ.

ವಿದ್ಯಾರ್ಥಿನಿಯನ್ನು ಧಾರವಾಡಕ್ಕೆ ಕರೆದೊಯ್ದು ಇರ್ಷಾದ್ ಅಲ್ಲಿ ಲಾಡ್ಜ್‌ನಲ್ಲಿ ಕೊಠಡಿಯನ್ನು ಪಡೆದು ಆಕೆಯ ಮೇಲೆ ಅತ್ಯಾಚಾರ ಎಸಗುತ್ತಾನೆ. ಅಲ್ಲದೆ, ಮರುದಿನ ಆಕೆಯನ್ನು ಗದಗ, ಹುಬ್ಬಳ್ಳಿಗೆ ಕರೆದೊಯ್ದು ಅಲ್ಲೂ ಅತ್ಯಾಚಾರ ಮಾಡುತ್ತಾನೆ ಎಂದು ಆರೋಪಿಸಲಾಗಿತ್ತು.

ಸತ್ಯ ಬಿಚ್ಚಿಟ್ಟ ಆರೋಪಿ ಇರ್ಷಾದ್‌ :

ಇರ್ಷಾದ್ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಮುಂದೆ ಸತ್ಯವನ್ನು ಬಿಚ್ಚಿಟ್ಟುತ್ತಾನೆ. ”ರಫಾ ಎನ್ನುವ ಹೆಸರಿನಲ್ಲಿ ವಾಟ್ಸ್‌ಆಯಪ್‌ಗೆ ಸಂದೇಶ ಕಳುಹಿಸುತ್ತಿದ್ದದ್ದು ನಾನೇ ಎಂದು ಒಪ್ಪಿಕೊಳ್ಳುತ್ತಾನೆ. ಇದರಿಂದ ವಿದ್ಯಾರ್ಥಿನಿಗೆ ತಾನು ವಂಚನೆಗೊಳಗಾಗಿರುವ ಬಗ್ಗೆ ಗೊತ್ತಾಗುತ್ತದೆ. ನಾಪತ್ತೆ ಪ್ರಕರಣವನ್ನು ಬೆಂಬತ್ತಿದ್ದ ಪೊಲೀಸರು ಜೂ. 25ರಂದು ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ವಿದ್ಯಾರ್ಥಿನಿಯನ್ನು ಮಂಗಳೂರಿಗೆ ಕರೆದುಕೊಂಡು ಬಂದ ಪೊಲೀಸರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಪರೀಕ್ಷೆಗೊಳಪಡಿಸುತ್ತಾರೆ. ಅಲ್ಲಿ ಅತ್ಯಾಚಾರ ಮಾಡಿರುವುದು ಸಾಬೀತಾಗಿದೆ. ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿರುವಾಗ ಆರೋಪಿ ಇರ್ಷಾದ್‌ಗೆ ಬೇರೆ ಮದುವೆಯಾಗಿರುವ ಬಗ್ಗೆ ವಿಷಯ ತಿಳಿಯುತ್ತದೆ. ಇದರಿಂದ ವಿದ್ಯಾರ್ಥಿನಿ ಆಘಾತಕ್ಕೊಳಗಾಗುತ್ತಾಳೆ.

ಇರ್ಷಾದ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದು, ಆತನ ಮೇಲೆ ಅಪಹರಣ (366), ಅತ್ಯಾಚಾರ (376), ಅಕ್ರಮ ಬಂಧನ (342), ಬೆದರಿಕೆ (506) ಪ್ರಕರಣ ದಾಖಲಾಗುತ್ತದೆ. ಬಂಟ್ವಾಳ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಡಿ.ಟಿ. ಪುಟ್ಟರಂಗಸ್ವಾಮಿ ಅವರು ಎಲ್ಲ ಆರೋಪಗಳನ್ನು ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.

Comments are closed.