ಕರಾವಳಿ

ಹಿಂದೂ ಯುವತಿಯನ್ನು ಮೋಸದಿಂದ ಮದುವೆಯಾಗಿದ್ದ ಅನ್ಯ ಕೋಮಿನ ಯುವಕನಿಗೆ ಪತ್ನಿಯಿಂದಲೇ ಹಲ್ಲೆ : ವೀಡಿಯೋ ವೈರಲ್

Pinterest LinkedIn Tumblr

ಮಂಗಳೂರು, ಜೂನ್.13: ತಾನು ಹಿಂದೂ ಎಂದು ಸುಳ್ಳು ಹೇಳಿ ಹಿಂದು ಧರ್ಮಿಯ ಯುವತಿಯನ್ನು ಮದುವೆಯಾಗಿದ್ದ ಅನ್ಯಧರ್ಮಿಯ ಯುವಕನೊಬ್ಬ ಮತ್ತೆ ಯುವತಿ ಮನೆಗೆ ಬಂದು ಪುಸಲಾಯಿಸಲು ತೊಡಗಿದಾಗ ಆತನ ಪತ್ನಿಯೇ ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳೂರಿನ ಹೊರವಲಯದ ತೊಕ್ಕೊಟ್ಟು ಬಳಿಯ ಕುಂಪಲದ ಚಿತ್ರಾಂಜಲಿ ನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಸುಳ್ಯ ಮೂಲದ ಸೈಯದ್ ಎಂಬಾತ ಮಂಗಳೂರಿನಲ್ಲಿ ತನಗೆ ಪರಿಚಯವಾದ ಉಳ್ಳಾಲ ಠಾಣಾ ವ್ಯಾಪ್ತಿಯ ಚಿತ್ರಾಂಜಲಿ ನಗರದ ಯುವತಿಯ ಬಳಿ ತನ್ನನ್ನು ಅರುಣ್ ಪೂಜಾರಿ ಎಂದು ಪರಿಚಯಿಸಿಕೊಂಡು ಎರಡುವರೆ ವರ್ಷದ ಹಿಂದೆ ವಿವಾಹವಾಗಿದ್ದ ಎನ್ನಲಾಗಿದೆ.

ಆರು ತಿಂಗಳ ಹಿಂದೆ ಈತನ ಬಗ್ಗೆ ಸಂಶಯಗೊಂಡ ಯುವತಿ ಹಾಗೂ ಯುವತಿಯ ಮನೆಯವರು ಅನ್ಯ ಕೋಮಿನ ಯುವಕನೋರ್ವ ಹಿಂದೂ ಯುವತಿಯನ್ನು ಯಾಮಾರಿಸಿ ವರಿಸಿರುವ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಈತನ ಮೋಸದ ಬಗ್ಗೆ ತಿಳಿದ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪತಿ-ಪತ್ನಿ ಪರಸ್ಪರ ದೂರವಾಗಿದ್ದರು.

ಈ ಮಧ್ಯೆ ಬುಧವಾರ ಅನಿರೀಕ್ಷಿತವಾಗಿ ಯುವತಿಯ ಮನೆಗೆ ಬಂದ ಸೈಯದ್ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಲು ತೊಡಗಿದ್ದಾನೆ ಎನ್ನಲಾಗಿದ್ದು, ಈ ವೇಳೆ ಯುವತಿ ( ಈತನ ಪತ್ನಿ) ಸೈಯದ್ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉಳ್ಳಾಲ ಪೊಲೀಸರು ಸೈಯದ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ತನ್ಮಧ್ಯೆ ಯುವತಿ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Comments are closed.