ಕರಾವಳಿ

ಹುಸೈನಬ್ಬರ ಮೇಲೆ ಹಲ್ಲೆ ನಡೆದಿಲ್ಲ : ಉಡುಪಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ; ಸಂಸದೆ ಶೋಭಾ ಕರಂದ್ಲಾಜೆ ಆರೋಪ

Pinterest LinkedIn Tumblr

ಮಂಗಳೂರು, ಜೂನ್. 5: ಜೋಕಟ್ಟೆ ನಿವಾಸಿ ಉಡುಪಿ ಪೆರ್ಡೂರಿನ ದನದ ವ್ಯಾಪಾರಿ ಹುಸೈನಬ್ಬ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಸಂಘಪರಿವಾರದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ರಾಜ್ಯ ಸರಕಾರದ ಕುಮ್ಮಕ್ಕಿನ ಮೇರೆಗೆ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿ ಬಂಧಿಸಲಾಗುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಕಾರ್ಪಿಯೋ ವಾಹನದಲ್ಲಿ ದನ ಕಳ್ಳ ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಕರ್ತವ್ಯವನ್ನು ಅವರು ಮಾಡಿದ್ದಾರೆ.

ಕಾರ್ಯಕರ್ತರು ಪೊಲೀಸರಿಗೆ ಹುಸೈನಬ್ಬರನ್ನು ಒಪ್ಪಿಸಿದ ಬಳಿಕ ಸುಮಾರು 15- 20 ನಿಮಿಷಗಳ ಬಳಿಕ ಪೊಲೀಸ್ ವಾಹನದಲ್ಲಿ ಠಾಣೆಗೆ ಬರುವ ದಾರಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಹಾಗಾಗಿ ಅವರು ಹೃದಯಾಘಾತದಿಂದ ನಿಧನ ಹೊಂದಿರುವರೇ? ಅವರಿಗೆ ಯಾವುದೇ ಕಾಯಿಲೆ ಇತ್ತೇ ಎಂಬ ಬಗ್ಗೆ ತನಿಖೆಯಾಗಬೇಕು. ಫಾರೆನ್ಸಿಕ್ ವರದಿಯನ್ನು ಯಥಾ ಪ್ರಕಾ ಜನರ ಮುಂದಿಡಬೇಕು. ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ, ಪೊಲೀಸರ ಪಾತ್ರದ ಬಗ್ಗೆ ಕೂಲಕುಂಶ ತನಿಖೆಯಾಗಬೇಕು ಎಂದು ಹೇಳಿದರು.

ಸ್ಕಾರ್ಪಿಯೋದಲ್ಲಿ ದನಗಳ ಸಾಗಾಟ ಮಾಡುವ ಬಗ್ಗೆ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಗೋಸಾಗಾಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗಿನ ಜಾವ 4 ಗಂಟೆಯವರೆಗೂ ಪೊಲೀಸರು ಕಾದು ನಿಂತಿದ್ದರು. ಪೊಲೀಸರನ್ನು ಕಂಡು ಸ್ಕಾರ್ಪಿಯೋ ವಾಹನ ಪರಾರಿಯಾಗಲು ಪ್ರಯತ್ನಿಸಿದೆ. ಪೊಲೀಸರು ಬೆನ್ನಟ್ಟಿ ವಾಹನ ಅಡ್ಡಗಟ್ಟಿದ ಸಂದರ್ಭದಲ್ಲಿ ದನಸಾಗಾಟದ ವಾಹನ ರಿವರ್ಸ್ ಹೋಗಿ ಅಪಘಾತ ಸಂಭವಿಸಿದೆ. ಘಟನೆ ನಡೆದ ವೇಳೆ ಸ್ಕಾರ್ಪಿಯೋ ವಾಹನದಲ್ಲಿದ್ದ ಮೂವರು ಪರಾರಿಯಾಗಿದ್ದರು. ಹುಸೇನಬ್ಬ ಮಾತ್ರ ಸಿಕ್ಕಿಬಿದ್ದಿದ್ದರು. ಅವರ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿಲ್ಲ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.

ಘಟನೆ ಸಂದರ್ಭದಲ್ಲಿ ಸೆರೆಸಿಕ್ಕ ಹುಸೇನಬ್ಬ ಪೊಲೀಸ್ ಜೀಪಿನಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸ್ ವಾಹನ ಏರಿದ ಬಳಿಕ ಸಾವು ಸಂಭವಿಸಿರುವುದಾಗಿ ಎಸ್ಪಿಯವರು ತಮಗೆ ಹೇಳಿಕೆ ನೀಡಿದ್ದಾರೆ.. ಅದನ್ನು ಕಾರ್ಯಕರ್ತರು ಪೊಲೀಸರಿಗೆ ತಿಳಿಸಿದ್ದಾರೆ.

ಉಡುಪಿಯಲ್ಲಿ ಯಾವುದೇ ರೀತಿಯ ಕಾರ್ಯಾಚರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಬೇಕೇ ಹೊರತು ಇತರ ಯಾವುದೇ ರೀತಿಯಲ್ಲಿ ಮುಂದುವರಿಯಬಾರದು ಎಂಬುದಾಗಿ ನಮ್ಮ ಸಭೆಯಲ್ಲಿ ನಿರ್ಧಾರವಾಗಿದೆ. ಹಾಗಾಗಿ ಹುಸೈನಬ್ಬ ಸಾವಿಗೆ ಪೊಲೀಸರೇ ಕಾರಣ.ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಹೇಳಿದರು.

ಉಡುಪಿಯಲ್ಲಿ ಸಂಘಪರಿವಾರದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪೆರ್ಡೂರು ಠಾಣೆಯಲ್ಲಿದ್ದ ಎಸ್‌ಐ ರಫೀಕ್ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರನ್ನು ದ್ವೇಷಿಸುತ್ತಿದ್ದ ಆರೋಪವಿತ್ತು. ಇದೀಗ ಆತನನ್ನೇ ಅಲ್ಲಿ ನಿಯೋಜಿಸಲಾಗಿದೆ.ಈ ಎಲ್ಲ ವಿಷಯಗಳ ವಿರುದ್ಧ ನಾಳೆ (ಜೂ. 6ರಂದು) ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

Comments are closed.