ಕರಾವಳಿ

ಮಂಗಳೂರಿನಲ್ಲಿ ಕೃತಕ ನೆರೆ ಹಿನ್ನೆಲೆ : ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮನಪಾದಿಂದ ರಾಜ ಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ

Pinterest LinkedIn Tumblr

ಮಂಗಳೂರು, ಜೂನ್.4: ನಗರದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ನಗರದಲ್ಲಿ ಪ್ರವಾಹದ ವಾತಾವರಣ, ಕೃತಕ ನೆರೆ ಸಂಭವಿಸಲು ನಗರದ ರಾಜಕಾಲುವೆಗಳ ಒತ್ತುವರಿ ಕೂಡ ಒಂದು ಕಾರಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಂಗಳೂರು ಮಹಾನಗರ ಪಾಲಿಕೆಯು ರಾಜ ಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ.

ಈ ನಿಟ್ಟಿನಲ್ಲಿ ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಕೊಟ್ಟಾರದ ಮಹೇಶ್ ಪಿಯು ಕಾಲೇಜು ಬಳಿ ಜೇಸಿಬಿ ಬಳಸಿ ಒತ್ತುವರಿ ತೆರವು ಕಾರ್ಯಾಚರಣೆ ಬಿರುಸಿನಿಂದ ನಡೆದಿದೆ. ಕಳೆದ ವಾರ ಸುರಿದ ಮಹಾಮಳೆಗೆ ಮಂಗಳೂರು ನಗರ ಅಕ್ಷರಶಃ ಮುಳುಗಡೆಯಾಗಿತ್ತು. ಇದಕ್ಕೆ ಕೃತಕ ನೆರೆ ಕಾರಣವಾಗಿತ್ತು. ಈ ಬಗ್ಗೆ ಅವಲೋಕನ ನಡೆಸಲು ಜಿಲ್ಲಾಧಿಕಾರಿ ರಚಿಸಿದ್ದ ಸಮಿತಿ ನೀಡಿದ್ದ ವರದಿಯ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕೊಟ್ಟಾರದ ರಾಜಕಾಲುವೆಯ ಕೆಲವೆಡೆ ಒತ್ತುವರಿ ಮಾಡಿದ್ದ ಕಾರಣ ಮಳೆ ನೀರು ಸರಾಗವಾಗಿ ಹರಿಯಲಾಗದೆ ಕೃತಕ ನೆರೆಗೆ ಕಾರಣವಾಗುತ್ತಿತ್ತು. ನೀರು ಹರಿದುಹೋಗುವ ತೋಡಿನ ಮೇಲೆಯೇ ಕಾಂಕ್ರೀಟ್ ಹಾಕಿ ಮುಚ್ಚಿದ್ದ ಕಾರಣ ತೋಡಿನ ಕೆಸರು, ಹೂಳು ತೆರವು ಮಾಡಲು ಕೂಡಾ ಮನಪಾಕ್ಕೆ ಅಸಾಧ್ಯವಾಗಿತ್ತು.

ಸೋಮವಾರ ಬೆಳಗ್ಗೆ ನಗರದ ಕೊಟ್ಟಾರ ಚೌಕಿ ಬಳಿಯಿಂದ ಆರಂಭಗೊಂಡ ರಾಜಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ನಗರದ ಕೊಟ್ಟಾರ ಮಾಲೆಮಾರ್ ರಸ್ತೆಯಲ್ಲಿರುವ ಕೆಲವು ಶಾಲಾ ಕಾಲೇಜು ಸಹಿತ ಖಾಸಗಿ ವಾಣಿಜ್ಯ ಕಟ್ಟಡಗಳು, ಮನೆಗಳು ಅಕ್ರಮವಾಗಿ ತೋಡಿನ ಮೇಲೆ ಹಾಕಲಾಗಿದ್ದ ಕಾಂಕ್ರೀಟ್ ಕಾಮಗಾರಿಯನ್ನು ತೆರವುಗೊಳಿಸಲಾಯಿತು.

ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್‌ರವರ ಆದೇಶದ ಮೇರೆಗೆ ಪಾಲಿಕೆಯ ಸಹಾಯಕ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಆರ್. ಗಣೇಶ್ ಹಾಗೂ ರವಿಶಂಕರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಪಾಲಿಕೆ ನಗರ ಯೋಜನಾಧಿಕಾರಿ ಬಾಲಕೃಷ್ಣ ಗೌಡ, ಸಹಾಯಕ ನಗರಯೋಜನಾಧಿಕಾರಿ ಶಿವರಾಜ್, ಸಹಾಯಕ ಇಂಜಿನಿಯರ್ ಲತಾ ಹಾಗೂ ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಾಚರಣೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಜೆಸಿಬಿ, ಬ್ರೇಕರ್, ಹಿಟಾಚಿ, ಟಿಪ್ಪರ್‌ಗಳನ್ನು ಬಳಸಲಾಗಿದೆ.ಕೊಟ್ಟಾರ ಬಳಿ ತೋಡಿಗೆ ನಿರ್ಮಿಸಲಾಗಿದ್ದ ಕಾಂಕ್ರೀಟ್ ಕಾಮಗಾರಿಯನ್ನು ಕಾರ್ಯಾಚರಣೆ ವೇಳೆ ತೆರವುಗೊಳಿಸಲಾಗಿದೆ. ಮಹೇಶ್ ಕಾಲೇಜಿನ ಗೇಟಿನ ಎರಡೂ ಬದಿಗಳಲ್ಲಿ ತೋಡಿನ ಮೇಲೆ ಕಾಂಕ್ರೀಟ್ ಶೀಟ್‌ಗಳನ್ನು ನಿರ್ಮಿಸಲಾಗಿತ್ತು.

ಕಟ್ಟಡಗಳು ಹಾಗೂ ಸಾರ್ವಜನಿಕ ರಸ್ತೆ ಮಧ್ಯೆ ತೋಡು ಇರುವಾಗ ಕಟ್ಟಡಕ್ಕೆ ಸಂಪರ್ಕ ಕಲ್ಪಿಸಲು ಗೇಟ್‌ನ ಪ್ರವೇಶ ದ್ವಾರದ ಬಳಿ ಮಾತ್ರವೇ ಕಾಂಕ್ರೀಟ್ ಹಾಕಿ ರಸ್ತೆ ಮಾಡಲು ಅವಕಾಶವಿದೆ. ಮನಪಾ ವತಿಯಿಂದ ನಡೆದ ತೆರವು ಕಾರ್ಯಾಚರಣೆ ವೇಳೆ ಕಾಲೇಜಿನ ಪ್ರವೇಶ ದ್ವಾರವನ್ನು ಹೊರತುಪಡಿಸಿ ಉಳಿದೆಡೆ ಹಾಕಲಾಗಿದ್ದ ಕಾಂಕ್ರೀಟ್ ಕಾಮಗಾರಿಯನ್ನು ತೆರವುಗೊಳಿಸಲಾಯಿತು.

Comments are closed.