ಕರಾವಳಿ

ಮಂಗಳೂರು :ಅಪಾರ್ಟ್‌ಮೆಂಟ್‌‌ನ 8ನೇ ಮಹಡಿಯಿಂದ ಕೆಳಗೆ ಬಿದ್ದು ಐದೂವರೆ ವರ್ಷದ ಮಗು ಮೃತ್ಯು

Pinterest LinkedIn Tumblr

ಮಂಗಳೂರು : ಐದೂವರೆ ವರ್ಷದ ಮಗುವೊಂದು ವಸತಿಸಮುಚ್ಛಯದ 8ನೇ ಮಹಡಿಯಿಂದ ಕೆಳಗೆ ಬಿದ್ದು, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬುಧವಾರ ಶಕ್ತಿನಗರದಲ್ಲಿ ಸಂಭವಿಸಿದೆ. ಮನೆಗೆ ಸರಿಯಾದ ಸುರಕ್ಷತಾ ಕ್ರಮಗಳನ್ನು ಅಳವಡಿಸದ ಕಾರಣ ಮಗು ವರಾಂಡದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಶಕ್ತಿನಗರದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ ಇರುವ ‘ಕ್ಲಾಸಿಕ್‌ ಸಫಾಯರ್‌’ ಹೆಸರಿನ ಅಪಾರ್ಟ್‌ ಮೆಂಟ್‌ ನ 8ನೇ ಮಹಡಿಯ ಫ್ಲ್ಯಾಟ್‌ ನಲ್ಲಿ ಬಾಡಿಗೆಗೆ ವಾಸವಾಗಿದ್ದ ವಿಲ್ಸನ್‌ ಸೆಬಾಸ್ಟಿಯನ್‌ ಡಿ’ಸೋಜಾ ಮತ್ತು ಅಲಿಶಾ ಡಿ’ಸೋಜಾ ದಂಪತಿಯ ಏಕೈಕ ಪುತ್ರಿ ಶಾನೆಲ್‌ ಜೆನಿಶಿಯಾ ಡಿ’ಸೋಜಾ ಮೃತ ಬಾಲಕಿ.

ವಿಲ್ಸನ್‌ ಸೆಬಾಸ್ಟಿಯನ್‌ ದುಬ್ಯಾಯಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ಅಲಿಶಾ ಮತ್ತು ಪುತ್ರಿ ಶಾನೆಲ್‌ ಜೆನಿಶಿಯಾ ಈ ಫ್ಲ್ಯಾಟ್‌ ನಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಗ್ಗೆ 8.45ರ ವೇಳೆಗೆ ಶಾನೆಲ್‌ ಮಲಗಿದ್ದಾಗ ಅಲಿಶಾ ಉಪಾಹಾರಕ್ಕಾಗಿ ತಿಂಡಿ ತರ‌ಲು ಸಮೀಪದ ಹೊಟೇಲ್‌ಗೆ ತೆರಳಿದ್ದರು. ಇದೇ ವೇಳೆ ಶಾನೆಲ್‌ ಗೆ ಎಚ್ಚರವಾಗಿದ್ದು, ತಾಯಿಯನ್ನು ಕಾಣದೆ ವರಾಂಡದ ಗ್ರಿಲ್ಸ್‌ನ ಮೇಲೆ ಹತ್ತಿ ಸ್ಲೈಡರ್ ಕಿಟಿಕಿಯ ಮೂಲಕ ಹೊರಗೆ ಇಣುಕಿದಳು. ಅಷ್ಟರಲ್ಲಿ ಆಯತಪ್ಪಿ ನೇರವಾಗಿ 2ನೇ ಅಂತಸ್ತಿನಲ್ಲಿರುವ ಖಾಲಿ ವರಾಂಡದ ಮೇಲೆ ಬಿದ್ದ ಪರಿಣಾಮ ತಲೆಗೆ ಮತ್ತು ಎದೆಯ ಭಾಗಕ್ಕೆ ತೀವ್ರ ಗಾಯಗಳಾದವು. ಬಿದ್ದ ಶಬ್ದ ಕೇಳಿದ ಎರಡನೇ ಮಹಡಿಯ ನಿವಾಸಿ, ವಿದ್ಯಾರ್ಥಿ ನಾಸಿರ್‌ ಅವರು ಮಗುವನ್ನು ಎತ್ತಿಕೊಂಡು ಅಕ್ಕಪಕ್ಕದವರ ಸಹಾಯದಿಂದ ಕೂಡಲೇ ಖಾಸಗಿ ಆಸ್ಪತ್ರೆಗೆ ಧಾವಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಬುಧವಾರ ಸಂಜೆ 5ರ ವೇಳೆಗೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ವಿಲ್ಸನ್‌ ಸೆಬಾಸ್ಟಿಯನ್‌ ಅವರು ಮೂಲತಃ ನಗರದ ಪಡೀಲ್‌ ನಿವಾಸಿ. 13 ವರ್ಷಗಳಿಂದ ದುಬಾೖಯ ಯುಎಇ ಎಕ್ಸ್‌ಚೇಂಜ್‌ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, 2010ರ ಅಕ್ಟೋಬರ್‌ 10ರಂದು ಅಲಿಶಾ ಜತೆ ವಿವಾಹವಾಗಿದ್ದರು. 2012ರ ಡಿ. 12ರಂದು ದಂಪತಿಗೆ ಮಗುವಾಗಿತ್ತು. 2017ರ ಡಿಸೆಂಬರ್‌ನಲ್ಲಿ ಪುತ್ರಿ ಶಾನೆಲ್‌ ಜೆನಿಶಿಯಾಳ 5ನೇ ಜನ್ಮದಿನ ಆಚರಿಸಲಾಗಿತ್ತು. ಈ ಸಮಾರಂಭಕ್ಕಾಗಿಯೇ ವಿಲ್ಸನ್‌ ಅವರು ಡಿ. 23ರಂದು ದುಬ್ಯಾಯಿಂದ ಊರಿಗೆ ಬಂದಿದ್ದು, 2018ರ ಜನವರಿ 3ರಂದು ಹಿಂದಿರುಗಿದ್ದರು. ಘಟನೆ ಮಾಹಿತಿ ಅರಿತ ವಿಲ್ಸನ್‌ ಅವರು ಬುಧವಾರ ಮಧ್ಯಾಹ್ನವೇ ದುಬ್ಯಾಯಿಂದ ಹೊರಟು ಮಂಗಳೂರಿಗೆ ತಲುಪುವಷ್ಟರಲ್ಲಿ ಪುತ್ರಿ ಸಾವನ್ನಪ್ಪಿದ್ದಳು.

ಪಡೀಲ್‌ನಲ್ಲಿ ತಾಯಿ ಮತ್ತು ಮಗು ಇಬ್ಬರೇ ವಾಸವಾಗಿದ್ದು, ಸುಸಜ್ಜಿತ ವ್ಯವಸ್ಥೆ ಇದೆ ಎಂಬ ಕಾರಣಕ್ಕಾಗಿ ಶಕ್ತಿನಗರದ ಈ ಫ್ಲ್ಯಾಟ್‌ ನಲ್ಲಿ ವಾಸವಾಗಿದ್ದರು. ಮೇ 29ರಂದು ನಗರದಲ್ಲಿ ಧಾರಾಕಾರ ಮಳೆ ಬಂದ ಹಿನ್ನೆಲೆಯಲ್ಲಿ ಅಲಿಶಾ ಅವರು ಮನೆಯಿಂದ ಹೊರಬಂದಿರಲಿಲ್ಲ. ಹಾಗಾಗಿ ಪುತ್ರಿ ಏಳುವಷ್ಟರಲ್ಲಿ ತಿಂಡಿ ತಂದು ಬಿಡುವ ಎಂದು ಫ್ಲ್ಯಾಟ್‌ ಕೆಳಗಿರುವ ಹೊಟೇಲ್‌ ಗೆ ತೆರಳಿದ್ದರು. ಅವರು ಹಿಂತಿರುಗಿ ಮನೆಗೆ ಬರುವಷ್ಟರಲ್ಲಿ ಈ ದುರಂತ ನಡೆದು ಹೋಗಿದೆ.

ಘಟನೆಗೆ ಸಂಬಂಧಿಸಿ ಫ್ಲ್ಯಾಟ್‌ ನ ಮಾಲಕಿ ವೀಣಾ ಎಲಿಸಾ ಸಲ್ದಾನ್ಹಾ ಹಾಗೂ ಅದರ ಪವರ್‌ ಆಫ್‌ ಅಟಾರ್ನಿ (ಜಿ.ಪಿ.ಎ.) ಹೊಂದಿರುವ ವಲೇರಿಯನ್‌ ಮೊಂತೇರೊ ಅವರ ವಿರುದ್ಧ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಫ್ಲ್ಯಾಟ್‌ ಮಾಲಕರು ಫ್ಲ್ಯಾಟ್‌ ಅನ್ನು ಬಾಡಿಗೆಗೆ ನೀಡುವಾಗ ಬೆಡ್‌ ರೂಂನ ವರಾಂಡದ ಕಿಟಿಕಿಗೆ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ಸರಳುಗಳನ್ನು ಅಳವಡಿಸದೆ ನಿರ್ಲಕ್ಷ್ಯ ತೋರಿರುವುದು ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.