ಮಂಗಳೂರು, ಮೇ 29: ಮಂಗಳೂರಿನಾದ್ಯಂತ ಮಂಗಳವಾರ ಸುರಿದ ಭಾರೀ ಮಳೆಗೆ ಹಲವು ನಗರ ಪ್ರದೇಶಗಳು ಜಲಾವೃತಗೊಂಡಿದ್ದು, ಹಲವೆಡೆ ಕೃತಕ ನೆರೆ ಉಂಟಾಗಿದೆ.ಮಾತ್ರವಲ್ಲದೇ ಭಾರೀ ಮಳೆಗೆ ಜಿಲ್ಲೆಯಲ್ಲಿ ಸಾವು ನೋವು ಸಂಭವಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (NDRF) 38 ಸಿಬ್ಬಂದಿಗಳು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳವಾರ ಮಂಗಳೂರಿನಲ್ಲಿ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ಮುಂದಿನ ಮುಂಜಾಗೃತ ಕ್ರಮವಾಗಿ ರಾಷ್ಟ್ರೀಯ ವಿಫತ್ತು ನಿರ್ವಾಹಣ ತಂಡವನ್ನು ಕರೆಸಿಕೊಳ್ಳಲಾಗಿದ್ದು, ತಂಡವು ಬೆಂಗಳೂರಿನಿಂದ ಹೊರಟಿದೆ. ಮಂಗಳೂರಿಗೆ ಮಂಗಳವಾರ ಮಧ್ಯ ರಾತ್ರಿ ತಲುಪಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಶಿಕಾಂತ್ ಸೆಂತಿಲ್ ಅವರು ಮಂಗಳವಾರ ಬೆಳಿಗ್ಗೆ ಮಾಹಿತಿ ನೀಡಿದ್ದರು.
ಮಂಗಳೂರಿನಲ್ಲಿ ಭಾರೀ ಮಳೆ ಪರಿಣಾಮ ಜಿಲ್ಲೆಯಲ್ಲಿ 68 ಮನೆಗಳಿಗೆ ಹಾನಿ, ಮಳೆಯಿಂದಾಗಿ ಎರಡು ಸಾವು, 12 ಜನರಿಗೆ ಗಾಯವಾಗಿದೆ. ಜಿಲ್ಲಾಡಳಿತದಿಂದ ಮೃತಪಟ್ಟ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಮಳೆಯಿಂದ ಹಾನಿಯಾದ ಮನೆಗಳಿಗೂ ಸೂಕ್ತ ಪರಿಹಾರವಾಗಿ ಜಿಲ್ಲಾಡಳಿತದಿಂದ ತುರ್ತು ಪರಿಹಾರ ವಿತರಣೆ ರಾತ್ರಿಯೂ ನಡೆಯಲಿದ್ದು, ಅಗತ್ಯ ಕಾರ್ಯಾಚರಣೆಗೆ ರೆಸ್ಕ್ಯೂ ತಂಡ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವೈದ್ಯಕೀಯ ನೆರವಿಗಾಗಿ ಇಲ್ಲಿ ಸಂಪರ್ಕಿಸಿ :
ಮಂಗಳೂರು ನಗರದಾದ್ಯಂತ ನೆರೆ ನೀರಿನಿಂದ ಸಾರ್ವಜನಿಕರು ತೊಂದರೆಗೊಳಗಾಗಿರುವುದರಿಂದ ನಗರವಾಸಿಗಳಿಗೆ ತುರ್ತು ಔಷಧಿಗಳು ಅಥವಾ ವೈದ್ಯಕೀಯ ನೆರವಿನ ಅಗತ್ಯವನ್ನು ಪೂರೈಸಲು ಟೀಂ ಹೆಲ್ತ್ –ಇ ಎಂಬ ಉತ್ಸಾಹಿಗಳ ತಂಡವು ಯಾವುದೇ ಸರ್ವಿಸ್ ಚಾರ್ಜ್ ಇಲ್ಲದೇ ನಿಮ್ಮ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುವ ಉತ್ತಮ ಕಾರ್ಯವನ್ನು ಮಾಡುತ್ತಿದೆ.
ದಯವಿಟ್ಟು ಈ ಸೇವೆಯ ಸದುಪಯೋಗವನ್ನು ಮಂಗಳೂರು ನಗರವಾಸಿಗಳು ಪಡೆದುಕೊಳ್ಳಿ, ನೀವು ಮಾಡಬೇಕಾಗಿರುವುದಿಷ್ಟೇ : ತುರ್ತು ಔಷಧಿಗಳಿಗೆ ನಿಮ್ಮ ಬಳೀಯಿರುವ ಮೆಡಿಕಲ್ ಪ್ರಿಸ್ಕ್ರಿಪ್ಷನ್ ಅನ್ನು 9148247777 ಸಂಖ್ಯೆಗೆ ವಾಟ್ಸ್ಯಾಪ್ ಮಾಡಿ ನೀರವ್ ಭಂಡಾರಿ ಎಂಬವರನ್ನು ಸಂಪರ್ಕ ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬಾರೀ ಮಳೆಯ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಞೆಗಳನ್ನು ಮಂದೂಡಲಾಗಿದೆ. ಈಗಾಗಲೇ ನಗರದ ಐದು ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
Comments are closed.