
ಮಂಗಳೂರು, ಮೇ 14: ವಿಧಾನ ಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ಮೇ 14ರ ರಾತ್ರಿ 12 ಗಂಟೆಯಿಂದ 16ರ ರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಮತ್ತು ಮಂಗಳೂರು ಪೊಲೀಸ್ ಕಮೀಷನರ್ ವಿಫುಲ್ ಕುಮಾರ್ ನಡೆಸಿದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯು ಕೋಮು ಸೂಕ್ಷ್ಮ ಜಿಲ್ಲೆಯಾಗಿ ರುವುದರಿಂದ ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಲ್ಲಿ ಎರಡು ದಿನಗಳ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯ ಆರಂಭದಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿದ ಮತದಾರರು, ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಅವಧಿಯಲ್ಲಿ ಮತ ಎಣಿಕೆ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಕಾನೂನು ಬಾಹಿರವಾಗಿ ಗುಂಪು ಸೇರುವುದು, ವಿಜಯೋತ್ಸವ ಮಾಡುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸುವ ಸಲುವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಹೇಳಿದರು.
ಮೇ 15ರಂದು ಬೆಳಗ್ಗೆ 8 ಗಂಟೆಯಿಂದ ಬೊಂದೇಲ್‌ನ ಮಹಾತ್ಮಗಾಂಧಿ ಶತಾಬ್ಧಿ ಹಿ. ಪ್ರಾ. ಶಾಲೆ/ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿವಿಧ ಕೊಠಡಿಗಳಲ್ಲಿ ಮತ ಎಣಿಕೆ ಆರಂಭಗೊಳ್ಳಲಿದೆ. ಹಂತ ಹಂತವಾಗಿಯೇ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯೊಳಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಯಾವುದೇ ರೀತಿಯ ಅನುಚಿತ ವರ್ತನೆಗೆ ಅವಕಾಶವಿಲ್ಲ. ಸಾರ್ವಜನಿಕರು ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.
ಮದ್ಯಮಾರಾಟ ನಿಷೇಧ :
14ನೇ ತಾರೀಖು ಮಧ್ಯರಾತ್ರಿ ಯಿಂದ 16ನೇ ತಾರೀಖು ಮಧ್ಯರಾತ್ರಿ ತನಕ ಎರಡು ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಇಂದು ಮಧ್ಯ ರಾತ್ರಿಯಿಂದ ನಾಳೆ ಮಧ್ಯರಾತ್ರಿ ತನಕ ಮದ್ಯಮಾರಾಟ ನಿಷೇಧ ಮಾಡಲಾಗಿದೆ. ಮೇ 14ರ ಸಂಜೆ 6 ಗಂಟೆಯಿಂದ 15ರ ರಾತ್ರಿ 12 ಗಂಟೆಯವರೆಗೆ ಮದ್ಯಪಾನ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲಾಧಿಕಾರಿ ತಿಳಿಸಿದರು.
Comments are closed.