ಕರಾವಳಿ

ಎರಡು ವಾಟರ್ ಐಡಿ ಹೊಂದಿದ್ದ ಯುವತಿ ವಿರುದ್ಧ ಮಂಗಳೂರಿನ ಕದ್ರಿ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು

Pinterest LinkedIn Tumblr

ಮಂಗಳೂರು: ಒಂದೇ ವ್ಯಕ್ತಿಯ ಹೆಸರಲ್ಲಿ ಎರಡು ಮತದಾರರ ಗುರುತಿನ ಚೀಟಿಯ ಮೂಲಕ ಚುನಾವಣೆಯಲ್ಲಿ ಅಕ್ರಮ ಮತ ಚಲಾಯಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಮೂಲದ ಯುವತಿ ವಿರುದ್ಧ ಮಂಗಳೂರು ಪೂರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು ದಕ್ಷಿಣ ಹಾಗೂ ಕೇರಳದಲ್ಲಿ ಅಕ್ರಮ ಮತದಾರ ಚೀಟಿ ಹೊಂದಿರುವುದರ ಬಗ್ಗೆ ಮೂಲತಃ ಕೇರಳದ ಸದ್ಯ ಮಂಗಳೂರಿನಲ್ಲಿ ವಾಸವಿರುವ “ಕುಮಾರಿ ದೀನಾ ಶಾಜಿ” ಎಂಬುವವರ ವಿರುದ್ಧ ಮಂಗಳೂರಿನ ಬಲ್ಮಠ ನಿವಾಸಿ ಪ್ರವೀಣ್ ಶೇಟ್ ಎನ್ನುವವರು ದೂರು ನೀಡಿದ್ದಾರೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಮಾರಿ ದೀನಾ ಶಾಜಿ ಎಂಬವರು ಎರಡು ಮತದಾರರ ಚೀಟಿಗಳನ್ನು ಹೊಂದಿದ್ದಾರೆ. ಒಂದು ಚೀಟಿಯಲ್ಲಿ ಮಂಗಳೂರಿನ ಬಲ್ಮಠ ಎಂದು ವಿಳಾಸ ನಮೂದಿಸಿ ಕ್ಷೇತ್ರದ 153ನೇ ವಿಭಾಗದಲ್ಲಿ ನೋಂದಾಯಿಸಿ ಕೊಂಡಿದ್ದಾರೆ. ಅದೇರೀತಿ ಇನ್ನೊಂದು ಮತದಾರರ ಚೀಟಿಯನ್ನು ಹೊಂದಿದ್ದು ಅದು ಕೇರಳ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿದೆ. ಹೀಗಾಗಿ ದೀನಾ ಶಾಜಿಯವರು ಉದ್ದೇಶಪೂರ್ವಕವಾಗಿ ಚುನಾವಣೆಯಲ್ಲಿ ಅಕ್ರಮ ಎಸಗಲು ಕಾನೂನು ಬಾಹಿರ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆಸುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಸಲುವಾಗಿ ಪ್ರತಿಯೊಂದು ಬೂತ್ ಗಳ ಮೇಲೆಯೂ ವಿಶೇಷ ನಿಗಾ ವಹಿಸಿರುವುದಾಗಿ ಕೆಲ ದಿನಗಳ ಹಿಂದೆಯೇ ಬಿಜೆಪಿ ಯುವ ಮೋರ್ಚಾ ಎಚ್ಚರಿಸಿತ್ತು. ಅದರನ್ವಯ ನಡೆದ ಕಾರ್ಯಾಚರಣೆಯಲ್ಲಿ ಕದ್ರಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಮತದಾರ ಚೀಟಿ ಹೊಂದಿರುವುದರ ಬಗ್ಗೆ ಮೊದಲ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರದಲ್ಲಿ ಇನ್ನೂ ಇಂತಹ ಹಲವಾರು ಅಕ್ರಮ ಮತದಾರರು ಇರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿದ್ದು ಅವರ ಮೇಲೂ ಸಹ ಗಮನ ಇರಿಸಲಾಗಿದೆ. ಅವರ ವಿರುದ್ಧ ಸೂಕ್ತ ಸಾಕ್ಷ್ಯಧಾರ ಕೂಡಾ ಲಭ್ಯವಾಗಿದ್ದು ಮತದಾನದ ದಿನ ಅವರು ಅಕ್ರಮವಾಗಿ ಮತ ಚಲಾಯಿಸಿದ್ದೇ ಆದಲ್ಲಿ ಕೂಡಲೇ “ಪ್ರಜಾಪ್ರತಿನಿಧಿ ಕಾಯ್ದೆ”ಯಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಯಾರದ್ದೋ ರಾಜಕೀಯ ಹಿತಾಸಕ್ತಿಗಾಗಿ ತಮ್ಮ ಸುಂದರ ಭವಿಷ್ಯ ಹಾಳು ಮಾಡಿಕೊಳ್ಳಬಾರದೆಂದು ಈ ಮೂಲಕ ಮತ್ತೊಮ್ಮೆ ಎಚ್ಚರಿಸಲಾಗುತ್ತಿದೆ ಎಂದು ದೂರುದಾರರ ಪರವಾಗಿ ಬಿಜೆಪಿ ಯುವ ಮೋರ್ಚಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.