ಮಂಗಳೂರು, ಮೇ 11: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು.
ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾದ ಮತಗಟ್ಟೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ಅಂಚೆ ಮತಪತ್ರಗಳನ್ನು ರವಾನಿಸಲಾಗಿದೆ. ಈಗಾಗಲೇ 5,000ಕ್ಕೂ ಅಧಿಕ ಮಂದಿ ಅಂಚೆ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು. 12,837 ಮತಗಟ್ಟೆ ಅಧಿಕಾರಿಗಳು, 1,295 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, 43 ಮಂದಿ ಚುನಾವಣಾ ಕರ್ತವ್ಯ ನಿಯೋಜಿತ ವಾಹನ ಚಾಲಕ/ನಿವಾರ್ಹಕರು ಮತ್ತು ಕ್ಲೀನರ್‌ರಿಗೆ ಅಂಚೆ ಮತಪತ್ರ ರವಾನಿಸಲಾಗಿದೆ. ಈಗಾಗಲೇ ಸುಮಾರು 5,900ರಷ್ಟು ಸಿಬ್ಬಂದಿಯಿಂದ ಅಂಚೆ ಮತದಾನ ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿ ಪ್ರಚಾರ, ಅಪಪ್ರಚಾರ ಸೇರಿದಂತೆ ಪಾರದರ್ಶಕ ಮತದಾನ ಹಾಗೂ ಮತದಾರರಿಗೆ ತೊಂದರೆ ಆಗುವಂತಹ ಯಾವುದೇ ರೀತಿಯ ವಿಷಯಗಳನ್ನು ಪ್ರಚಾರ ಪಡಿಸುವುದರ ಬಗ್ಗೆ ನಿಗಾ ಇರಿಸಲಾಗಿದೆ. ಇಂತಹ ಕುಕೃತ್ಯಗಳನ್ನು ಎಸಗುವವರನ್ನು ಪತ್ತೆ ಹಚ್ಚಲು ಕ್ರಮ ವಹಿಸಲಾಗಿದ್ದು, ಜೈಲು ಶಿಕ್ಷೆಗೂ ಗುರಿಪಡಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
13,176 ಮತಗಟ್ಟೆ ಸಿಬ್ಬಂದಿಯ ನೇಮಕ ; ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಒಟ್ಟು 13,176 ಮತಗಟ್ಟೆ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಇದರೊಂದಿಗೆ ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗೆ ತಲುಪಿಸಿ ಚುನಾವಣಾ ಕರ್ತವ್ಯ ಮುಕ್ತಾಯವಾದ ಬಳಿಕ ಡಿ ಮಸ್ಟರಿಂಗ್ ಕೇಂದ್ರಕ್ಕೆ ಕರೆತರಲು ಒಟ್ಟು 648 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಬಸ್ ಸಂಪರ್ಕ ಇಲ್ಲದ 33 ಪ್ರದೇಶಗಳಿಗೆ ಕೆಎಸ್ಸಾರ್ಟಿಸಿ ಮತದಾನದ ದಿನ ವಿಶೇಷ ಸೇವೆ ಒದಗಿಸಲಿದೆ. ವಿಶೇಷವಾಗಿ ಸುಳ್ಯ, ಬೆಳ್ತಂಗಡಿ, ಪುತ್ತೂರಿನಲ್ಲಿ ಮತಗಟ್ಟೆ ಸಿಬ್ಬಂದಿ ಮತ್ತು ಮತ ಯಂತ್ರಗಳನ್ನು ಸಾಗಿಸಲು 160 ಬಸ್‌ಗಳನ್ನು ಬಳಸಲಾಗುತ್ತಿದೆ. ಬಿಡುವಿನ ಅವಧಿಯಲ್ಲಿ ಅಗತ್ಯವಿರುವ ಕಡೆ ಈ ಬಸ್‌ಗಳು ಕನಿಷ್ಠ ಮೂರು ಟ್ರಿಪ್‌ಗಳ ಉಚಿತ ಸೇವೆ ನೀಡಲು ಅಧಿಕಾರವನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾನದ ದಿನದಂದು ಬೆಳಗ್ಗೆ ಮತಗಟ್ಟೆ ಪ್ರವೇಶಿಸುವ ಪೋಲಿಂಗ್ ಏಜೆಂಟ್‌ಗಳನ್ನು ಅಪರಾಹ್ನ 3ರವರೆಗೆ ಮಾತ್ರ ಬದಲಾಯಿಸಲು ಅವಕಾಶವಿರುತ್ತದೆ. 3 ಗಂಟೆಯ ಬಳಿಕ ಮತದಾನದ ಮುಕ್ತಾಯದವರೆಗೆ ಏಜೆಂಟ್ ಬದಲಾವಣೆ ಮಾಡುವಂತಿಲ್ಲ. ಮತಗಟ್ಟೆಗೆ 6 ಗಂಟೆಯವರೆಗೆ ಆಗಮಿಸುವ ಎಲ್ಲಾ ಮತದಾರರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಮಹಿಳಾ ಮತದಾರರೇ ಅಧಿಕ : ದ.ಕ. ಜಿಲ್ಲೆಯ ಒಟ್ಟು ಎಂಟು ಕ್ಷೇತ್ರಗಳಲ್ಲಿ 17,11,848 ಮತದಾರರಿದ್ದು, ಇವರಲ್ಲಿ ಮಹಿಳಾ ಮತದಾರರೇ ಅಧಿಕ. ಒಟ್ಟು ಮತದಾರರಲ್ಲಿ 8,70,675 ಮಹಿಳಾ ಮತದಾರರು ಹಾಗೂ 8,41,073 ಮಂದಿ ಪುರುಷ ಮತದಾರರಾಗಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆಗೆ ನಿಷೇಧ : ಮೇ 12ರ ಬೆಳಗ್ಗೆ 7 ಗಂಟೆಯಿಂದ ಸಂಜೆ 6:30ರವರೆಗೆ ಸಮೀಕ್ಷೆ ನಡೆಸುವುದನ್ನು ನಿಷೇಧಿಸಲಾಗಿದ್ದು, ಮತದಾನದ 48 ಗಂಟೆಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯನ್ನೂ ನಿಷೇಧಿಸಲಾಗಿದೆ. ರಾಜಕೀಯ ಪಕ್ಷಗಳು ಅಥವಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಅವರ ಬೆಂಬಲಿಗರು ಚುನಾವಣಾ ಪ್ರಚಾರಕ್ಕಾಗಿ ಮೇ 11ರಂದು ಮತ್ತು 12ರಂದು ನೀಡುವ ಜಾಹೀರಾತುಗಳನ್ನು ಜಿಲ್ಲೆ/ರಾಜ್ಯ ಮಟ್ಟದ ಚುನಾವಣಾ ಸಮಿತಿಯಿಂದ ಪರಿಶೀಲಿಸಿ ಅನುಮತಿ ಪಡೆಯದೆ ಪ್ರಕಟಿಸಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಈ ಸಂದರ್ಭ ಸ್ಪಷ್ಟಪಡಿಸಿದರು.
ಮತದಾನಕ್ಕೆ ಅಡ್ಡಿಪಡಿಸುವರ ವಿರುದ್ಧ ಕಠಿಣ ಕ್ರಮ: ಎಸ್ಪಿ, ಕಮಿಷನರ್ ಎಚ್ಚರಿಕೆ
ಮಂಗಳೂರು ನಗರ ಹಾಗೂ ದ.ಕ. ಜಿಲ್ಲಾದ್ಯಂತ ಮತದಾನ ಪ್ರಕ್ರಿಯೆ ಸುಗಮ ಹಾಗೂ ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಎಲ್ಲಾ ರೀತಿಯ ಬಂದೋಬಸ್ತ್‌ಗಳನ್ನು ಮಾಡಿದೆ. ಶಾಂತಿಯುತ ಮತದಾನಕ್ಕೆ ಅಡ್ಡಿಪಡಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಅಪರ ಜಿಲ್ಲಾಧಿಕಾರಿ ವೈಶಾಲಿ, ಡಿಸಿಪಿ ಹನುಮಂತರಾಯ ಉಪಸ್ಥಿತರಿದ್ದರು.







Comments are closed.