ಕರಾವಳಿ

ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳೀಪಟ : ಮಂಗಳೂರಿನಲ್ಲಿ ಮೋದಿ ಘರ್ಜನೆ – ತುಳುವಿನಲ್ಲಿ ಭಾಷಣ ಆರಂಭಿಸಿದ ಪ್ರಧಾನಿ

Pinterest LinkedIn Tumblr

ಮಂಗಳೂರು, ಮೇ.05 : ಕಾಂಗ್ರೆಸ್ ಒಂದರ ಹಿಂದೆ ಒಂದು ಸೋಲು ಕಾಣುತ್ತಿದ್ದು, ಈಗಾಗಲೇ ಹೆಚ್ಚಿನ ರಾಜ್ಯಗಳಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಮುಂದಿನ ಸರದಿ ಕರ್ನಾಟಕದಾಗಿದ್ದು, ಇಲ್ಲಿ ಕೂಡ ಕಾಂಗ್ರೆಸ್ ದಯನೀಯ ಸೋಲು ಕಾಣಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳೂರಿನ ಕೇಂದ್ರ ಮೈದಾನದಲ್ಲಿ ಇಂದು ಸಂಜೆ ಬಿಜೆಪಿಯ ಬೃಹತ್ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಭವಿಷ್ಯದಲ್ಲಿ ರಾಜ್ಯದಲ್ಲಿ ಉತ್ತಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮರಳು ಮಾಫಿಯಾ, ಶಿಕ್ಷಣ ಮಾಫಿಯಾ, ಇವರ ಎಲ್ಲ ಅಂಗಡಿಗಳು ಬಂದ್ ಆಗಲಿದೆ ಎಂದು ಹೇಳಿದರು.

ಅಪಾರ ಸಂಖ್ಯೆಯಲ್ಲಿ ಸೇರಿರುವ ಪಕ್ಷದ ಕಾರ್ಯಕರ್ತರ ಬೃಹತ್ ಜನಸಮೂಹದ ಮಧ್ಯೆ ತುಳುವಿನಲ್ಲಿ ಭಾಷಣ ಆರಂಭಿಸಿದ ಮೋದಿಯವರು, ಕೋಟಿ ಚನ್ನಯ್ಯ, ಅಬ್ಬಕ್ಕ, ಧರ್ಮಸ್ಥಳ, ನಾರಾಯಣಗುರುಗಳ ಹೆಸರನ್ನು ಉಲ್ಲೇಖಿಸಿದರು. ತ್ರಿಶಂಕು ಸರ್ಕಾರ ಎಂದು ಹೇಳಿದವರು ಈ ಜನರನ್ನು ನೋಡಿ ಮತ್ತೆ ಹೇಳಲಿ. ಮೇ 15ರಂದು ನಮ್ಮ ಪೂರ್ಣ ಸರ್ಕಾರದ ಬರಲಿದೆ. ಸೋತ ಸಂದರ್ಭದಲ್ಲಿ ಇವಿಎಂ ಲೋಪದ ನೆಪ ಹಾಕಲು ರಾಹುಲ್ ಶುರು ಮಾಡಿದ್ದಾರೆ. ಎನರ್ಜಿ, ವೈಬ್ರೇಷನ್, ಮೋಟಿವೇಶನ್ – ಇವಿಎಂ ಇಲ್ಲಿ ನಾನು ಕಾಣುತ್ತಿದ್ದೇನೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಕೊಡುತ್ತೇನೆ. ರಾತ್ರಿ ಒಂದು ಗಂಟೆಗೆ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದೀರಿ. ಅದನ್ನು ಎಂದೂ ಮರೆಯಲಾರೆ. ಸಜ್ಜಿಗೆ ಬಜಿಲ್, ನೀರು ದೋಸೆ, ಮೂಡೆ ನಾನು ಮರೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು. ನಾನು ಜನರ ಹೃದಯ ಖರೀದಿಸಲು ಬಯಸುತ್ತೇನೆ. ನನಗೆ ಇಲ್ಲಿನ ಜನರೇ ಕುಟುಂಬ, ಪರಿವಾರ. ಸರ್ದಾರ್ ವಲ್ಲಭಭಾಯ್, ಸುಭಾಶ್, ನಿಜ ಲಿಂಗಪ್ಪ, ಒಂದು ಪರಿವಾರಕ್ಕಾಗಿ ಇಡೀ ದಿಗ್ಗಜರನ್ನು ವಿರೋಧಿಸಿತ್ತು. ದೇವರಾಜ ಅರಸು ಬಿಟ್ಟರೆ ಲೋಕಸಭೆಗೆ ತಲುಪುತ್ತಿರಲಿಲ್ಲ. ನೀವು ರಾಜ್ಯಕ್ಕೆ ಏನು ನೀಡಿದ್ದೀರಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.

ಮೋದಿ ಸತ್ಯ ಹೇಳುತ್ತಾರೆ. ಆದರೆ ಅದನ್ನು ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ರಾಜ್ಯದಲ್ಲಿ ಅಪರಾಧದ ಕೋಮುವಾದೀಕರಣವಾಗಿದೆ. 2 ಡಜನ್ ಕಾರ್ಯಕರ್ತರನ್ನು ಬಲಿ ಪಡೆಯಲಾಗಿದೆ. ನಿಮ್ಮ ಪಾಪಗಳಿಗೆ ಜನ ತೀರ್ಪು ನೀಡಲಿದೆ. ಕಾನೂನು ತನ್ನ ಕೆಲಸ ಮಾಡಲಿದೆ. ಜನರಿಗೆ ಶಕ್ತಿ ನೀಡಲು ನಮ್ಮ ಸರ್ಕಾರ ಬದ್ಧವಾಗಲಿದೆ ಎಂದು ಮೋದಿ ಹೇಳಿದರು.

ಸ್ವಚ್ಛ ಭಾರತ್, ಶೌಚಾಲಯದ ಸಂದರ್ಭದಲ್ಲೂ ಅವರು ನನಗೆ ತಮಾಷೆ ಮಾಡಿದರು. ಅವರಿಗೆ ನಾನು ಏನು ಮಾಡಿದರೂ ಆಗಲ್ಲ. ಯೋಗ ಮಾಡಿದರೂ ಅವರಿಗೆ ಕಷ್ಟವಾಗಿದೆ. ನೋಟ್ ಬಂದಿ ಬಳಿಕ ಕಾಂಗ್ರೆಸ್‌ ನಾಯಕರ ನೋಟು ಹೊರಗೆ ಬರುತ್ತಿದೆ ಎಂದು ಮೋದಿ ಹೇಳಿದರು.

ಕೇಂದ್ರದ ಸಹಾಯಕ ಸಚಿವ ಉತ್ತರ ಪ್ರದೇಶದ ಡಾ. ಮಹೇಂದ್ರ ಸಿಂಗ್ ಚೌಹಾಣ್, ಮಡಿಕೇರಿ ಶಾಸಕ ಅಪ್ಪಚ್ಚುರಂಜನ್, ಕೋಟಾ ಶ್ರೀನಿವಾಸ ಪೂಜಾರಿ, ರುಕ್ಮಯ ಪೂಜಾರಿ, ಅಂಗಾರ, ಬೋಪಯ್ಯ, ರಾಜೇಶ್ ನಾಯ್ಕಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಸಂತೋಷ್ ಕುಮಾರ್ ರೈ, ಡಾ. ಭರತ್ ಶೆಟ್ಟಿ, ಸಂಜೀವ ಮಠಂದೂರು, ಮೀನಾಕ್ಷಿ ಶಾಂತಿಗೋಡು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ವೇದಿಕೆಯಲ್ಲಿದ್ದು ಮಾತನಾಡಿದರು.

Comments are closed.