ಕರಾವಳಿ

ಬಿಜೆಪಿ : ಕಗ್ಗಂಟಾಗಿದ್ದ ಮೂರು ಕ್ಷೇತ್ರಗಳ ಹೆಸರು ಪ್ರಕಟ : ಮಂಗಳೂರು ದಕ್ಷಿಣಕ್ಕೆ ವೇದವ್ಯಾಸ್ ಕಾಮಾತ್‌ – ಉತ್ತರದಲ್ಲಿ ಪಾಲೆಮಾರ್‌ಗೆ ಕೈತಪ್ಪಿದ್ದ ಟಿಕೇಟ್

Pinterest LinkedIn Tumblr

ಮಂಗಳೂರು, ಎಪ್ರಿಲ್,20 : ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಬಿಜೆಪಿ ತನ್ನ ಆಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಮೂರನೇ ಪಟ್ಟಿಯಲ್ಲಿ ರಾಜ್ಯದ 59 ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು, ಕಗ್ಗಂಟಾಗಿ ಉಳಿದಿದ್ದ ಮಂಗಳೂರು ( ಉಳ್ಳಾಲ), ಮಂಗಳೂರು ಉತ್ತರ (ಸುರತ್ಕಲ್) ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮೂರನೇ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿದೆ.

ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ವೇದವ್ಯಾಸ್ ಕಾಮತ್ ಹಾಗೂ ಮಂಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.

ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಪುತ್ತೂರು ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಈಗಾಗಲೇ ಘೋಷಿಸಿದ್ದು, ಸುಳ್ಯ ಕ್ಷೇತ್ರದ ಅಭ್ಯರ್ಥಿ ಅಂಗಾರ ಅವರ ಹೆಸರನ್ನು ಮೊದಲ ಪಟ್ಟಿಯಲ್ಲೇ ಘೋಷಿಸಲಾಗಿತ್ತು.

ಬಿಜೆಪಿ ವರಿಷ್ಠರಿಗೆ ಕಗ್ಗಂಟಾದ ಮೂರು ಕ್ಷೇತ್ರ ಭಾರೀ ಕುತೂಹಲ ಕೆರಳಿಸಿರುವ ಮಂಗಳೂರು, ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳ ಹೆಅಸರು ಮೂರನೇ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ್ ಕಾಮತ್ ಮತ್ತು ಬದ್ರಿನಾಥ್ ಕಾಮತ್ ನಡುವೆ ಭಾರೀ ಪೈಪೋಟಿ ಇತ್ತು. ಇದಲ್ಲದೆ ಬ್ರಿಜೇಶ್ ಚೌಟ, ನಾಲ್ಕು ಬಾರಿಯ ಶಾಸಕ ಯೋಗೀಶ್ ಭಟ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು.

ಅತ್ಯಂತ ಕುತೂಹಲ ಕೆರಳಿಸಿರುವ ಮಂಗಳೂರು ಉತ್ತರ (ಸುರತ್ಕಲ್) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರು ಇದೀಗ ಹೊರಬಿದ್ದಿದ್ದು, ಇಲ್ಲಿ ಡಾ.ಭರತ್ ಶೆಟ್ಟಿಯವರ ಹೆಸರನ್ನು ಪ್ರಕಟಿಸಲಾಗಿದೆ. ಇಲ್ಲಿ ಕಳೆದ ಬಾರಿ ಕಾಂಗ್ರೆಸ್ ನ ಮೊಯ್ದಿನ್ ಬಾವಾ ಎದುರು ಸೋತ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಈ ಬಾರಿಯೂ ಟಿಕೆಟ್ ಅಕಾಂಕ್ಷಿಯಾಗಿದ್ದರು. ಈ ಬಾರಿ ಅವರಿಗೆ ಸ್ಪರ್ಧಿಸಲು ಟಿಕೆಟ್ ದೊರಕುವುದು ಖಚಿತ ಎಂದು ಹೇಳಲಾಗುತ್ತಿತ್ತು . ಆದರೆ ಬಿಜೆಪಿ ಯುವ ಮುಖಂಡ ಡಾ. ಭರತ್ ಶೆಟ್ಟಿ ಪಾಲೇಮಾರ್ ಅವರಿಗೆ ಭಾರೀ ಪೈಪೋಟಿ ಒಡ್ಡಿದ್ದರು. ಈ ನಡುವೆ ರಾಮಚಂದ್ರ ಬೈಕಂಪಾಡಿ, ಸತ್ಯಜಿತ್ ಸುರತ್ಕಲ್ ಸೇರಿದಂತೆ ಇನ್ನಿತರ ಟಕೆಟ್ ಅಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದರು. ಅಂತಿಮವಾಗಿ ಡಾ.ಭರತ್ ಶೆಟ್ಟಿಯವರ ಹೆಸರನ್ನು ಪ್ರಕಟಿಸಲಾಗಿದೆ.

ಇನ್ನೊಂದೆಡೆ ಮಂಗಳೂರು ವಿಧಾನ ಸಭಾ (ಉಳ್ಳಾಲ) ಕ್ಷೇತ್ರದಿಂದ ಸಚಿವ ಯು.ಟಿ. ಖಾದರ್ ಅವರ ವಿರುದ್ಧ ಯಾರನ್ನು ಕಣಕ್ಕಿಳಿಸುವುದು ಎಂಬುದೇ ಬಿಜೆಪಿ ನಾಯಕರಿಗೆ ತಲೆನೋವಾಗಿತ್ತು. ಕಾಂಗ್ರೆಸ್ಸಿನ ಖಾದರ್ ಕೈಯಲ್ಲಿರುವ ಈ ಕ್ಷೇತ್ರವನ್ನು ಕಸಿದುಕೊಳ್ಳಲು ಶತಾಯ ಗತಾಯ ಬಿಜೆಪಿ ಪ್ರಯತ್ನ ನಡೆಸಿತ್ತು. ಆದರೆ ಅಭ್ಯರ್ಥಿ ಆಯ್ಕೆಗೆ ಪಕ್ಷಕ್ಕೆ ತಲೆನೋವಾಗಿತ್ತು. ಈ ಕ್ಷೇತ್ರದಲ್ಲಿ ಜೆಡಿಎಸ್ ಮಾಜಿ ಮೇಯರ್ ಆಶ್ರಫ್ ಅವರನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಗೆಲ್ಲುವ ತಂತ್ರಗಾರಿಕೆ ಹೆಣೆಯಲಾರಂಭಿಸಿದೆ. ಅದರೆ ಈ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಯ ಹುಡುಕಾಟದಲ್ಲಿ ತೊಡಗಿದ್ದ ಬಿಜೆಪಿ ಕೊನೆಗೂ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೆಸರನ್ನು ಅಂತಿಮಗೊಳಿಸಿದೆ.

ಇಲ್ಲಿ ಮೂವರು ಆಕಾಂಕ್ಷಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ. ಈ ಪೈಕಿ ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ ಬೋಳಿಯಾರ್ ಅಥವಾ ರಹೀಮ್ ಉಚ್ಚಿಲ್ ಗೆ ಟಿಕೆಟ್ ಒಲಿಯಲಿದೆ ಎನ್ನಲಾಗಿತ್ತು. ಇವರಲ್ಲದೆ ಚಂದ್ರಹಾಸ್ ಉಳ್ಳಾಲ್, ರವೀಂದ್ರ ಶೆಟ್ಟಿ ಕೂಡ ಟಿಕೆಟ್ ಬಯಸಿದ್ದರು. ಅಂತಿಮವಾಗಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೆಸರನ್ನು ಪ್ರಕಟಿಸಲಾಗಿದೆ.

Comments are closed.