ಕರಾವಳಿ

ಬಾಲಕಿಯ ಅತ್ಯಾಚಾರ, ಕೊಲೆ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಮೊಂಬತ್ತಿ ಹಿಡಿದು ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಎಪ್ರಿಲ್. 17: ಜಮ್ಮುವಿನ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮಂಗಳೂರಿನ ವಿವಿಧ ಸಮಾನ ಮನಸ್ಕ ಸಂಘಟನೆಗಳು ಮತ್ತು ನಾಗರಿಕರು ಸೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ಸೋಮವಾರ ಸಂಜೆ ಮೊಂಬತ್ತಿ ಹಿಡಿದು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು.

ಧರ್ಮಸ್ಥಳದಲ್ಲಿ ಐದು ವರ್ಷಗಳ ಹಿಂದೆ ಅತ್ಯಾಚಾರ ಮತ್ತು ಕೊಲೆಗೀಡಾದ ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಅವರು ಮೊಂಬತ್ತಿ ಉರಿಸುವ ಮೂಲಕ ಚಾಲನೆ ನೀಡಿದರು. ನನ್ನ ಮಗಳ ಅತ್ಯಾಚಾರ, ಕೊಲೆಯಾಗಿ ಐದು ವರ್ಷ ಕಳೆದಿವೆ. ಆದರೆ ಈವರೆಗೂ ನನ್ನ ಮಗಳಿಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಕ್ಕಾಗಿ ಐದು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ನನ್ನ ಹೋರಾಟಕ್ಕೆ ನೀವೂ ಸಾಥ್ ನೀಡಬೇಕು ಎಂದು ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಮನವಿ ಮಾಡಿದರು.

ಪ್ರತಿಭಟನಾಕಾರರು ಮೊಂಬತ್ತಿಗಳನ್ನು ಹಿಡಿದು ಸಂತ್ರಸ್ತೆ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಕ್ರೂರ ಕೃತ್ಯ ಎಸಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಒತ್ತಾಯಗಳು ಪ್ರತಿಭಟನಕಾರರಿಂದ ಕೇಳಿಬಂದವು. ಪ್ರತಿಭಟನಕಾರರು ವಿವಿಧ ಸ್ಲೋಗನ್‌ಗಳನ್ನು ಹಿಡಿದಿದ್ದರು.

ದೇಶದ ಜನರು ಅನ್ಯಾಯದ ವಿರುದ್ದ ಧ್ವನಿ ಎತ್ತಲು ಹೊರಟರೆ ಅದನ್ನು ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕಾರ್ಯಗಳು ನಿಲ್ಲಬೇಕು. ಅನ್ಯಾಯದ ವಿರುದ್ಧದ ಧ್ವನಿಗಳು ಒಂದಾಗಿ ಹೋರಾಟಕ್ಕಿಳಿದಲ್ಲಿ ಯಾವ ರಾಜಕೀಯ ಪಕ್ಷದಿಂದಲೂ ಅಡಗಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ವಿಚಾರವಾದಿ ವೇದಿಕೆಯ ಅಧ್ಯಕ್ಷ ನೇಂದ್ರ ನಾಯಕ್ ಎಚ್ಚರಿಕೆ ನೀಡಿದರು.

ಸಾಮಾಜಿಕ ಕಾರ್ಯಕರ್ತರಾದ ವಿದ್ಯಾದಿನಕರ್, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕ ಅಧ್ಯಕ್ಷ ಮುಹಮ್ಮದ್ ಕುಂಞಿ ಸೈಫ್ ಸುಲ್ತಾನ್, ಉಮರ್ ಯು.ಎಚ್., ವಿದ್ಯಾರ್ಥಿನಿ ಶ್ರೇಯಾ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Comments are closed.