ಕರಾವಳಿ

ಧರ್ಮಸ್ಥಳ :ಸೌಜನ್ಯಾ ಅತ್ಯಾಚಾರ,ಕೊಲೆ ಪ್ರಕರಣಕ್ಕೆ ಮರು ಜೀವ – ಸಿಬಿಐ ತನಿಖೆ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ 

Pinterest LinkedIn Tumblr

( ಕಡತ ಚಿತ್ರ )

ಬೆಳ್ತಂಗಡಿ, ಎಪ್ರಿಲ್. 10: ಇಡೀ ರಾಜ್ಯದ ಗಮನ ಸೆಳೆದಿದ್ದ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸಿದ ತನಿಖೆಯ ಬಗ್ಗೆ ರಾಜ್ಯ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸೌಜನ್ಯಾ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸೌಜನ್ಯಾಳ ತಂದೆ ಚಂದಪ್ಪ ಗೌಡ ಹೈಕೋರ್ಟ್‌ಗೆ ದೂರು ಸಲ್ಲಿಸಿ ಮರು ತನಿಖೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಾದ ಆಲಿಸಿದ ನ್ಯಾಯಾಲಯವು ಸಿಬಿಐ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ದೋಷಾರೋಪ ಪಟ್ಟಿಯಲ್ಲಿ ಸಾಕ್ಷಗಳ ಹೇಳಿಕೆ ದಾಖಲಿಸದಿರುವುದಕ್ಕೆ ಕಾರಣವೇನೆಂದು ತನಿಖಾಧಿಕಾರಿಗಳಿಂದ ಮಾಹಿತಿ ಪಡೆದು ಕೋರ್ಟ್‌ಗೆ ಸಲ್ಲಿಸು ವಂತೆ ಸಿಬಿಐ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ.

ಇಡೀ ರಾಜ್ಯದ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಆರೋಪಿಯೆಂದು ಬಂಧಿಸಿದ್ದರು. ಆದರೆ ಮುಂದೆ ಈ ಪ್ರಕರಣ ಹಲವು ತಿರುವು ಪಡೆದಿದ್ದು, ಬಾಲಕಿಯ ಕುಟುಂಬಸ್ಥರು ಹಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಾಗೂ ಬಳಿಕ ಸಿಬಿಐಗೆ ವಹಿಸಲಾಗಿತ್ತು. ಆದರೆ ಯಾವ ತನಿಖೆಯಲ್ಲೂ ಸ್ಥಳೀಯ ಪೊಲೀಸರು ನಡೆಸಿದ ತನಿಖೆಗಿಂತ ಭಿನ್ನವಾಗಿ ಯಾವುದೇ ವರದಿಗಳು ಬಂದಿರಲಿಲ್ಲ. ಈ ಹಿಂದೆ ಸಿಬಿಐ ನ್ಯಾಯಾಲಯವೂ ತನಿಖೆ ನಡೆಸಿರುವ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.

ಇದೀಗ ರಾಜ್ಯ ಹೈಕೋರ್ಟ್ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 17ಕ್ಕೆ ಮುಂದೂಡಿದೆ. ನ್ಯಾಯಾಲಯ ವ್ಯಕ್ತಪಡಿಸಿರುವ ಈ ಅಭಿಪ್ರಾಯ ಪ್ರಕರಣಕ್ಕೆ ಮರುಜೀವ ನೀಡಿದೆ.

Comments are closed.