ಕರಾವಳಿ

ಕಸಬ ಬೆಂಗ್ರೆಯಲ್ಲಿ ಮುಸುಕುಧಾರಿಗಳ ತಂಡದಿಂದ ಮೂವರು ಯುವಕರ ಮೇಲೆ ಹಲ್ಲೆ : ಓರ್ವ ಗಂಭೀರ

Pinterest LinkedIn Tumblr

ಮಂಗಳೂರು, ಎಪ್ರಿಲ್.9: ಮುಸುಕುಧಾರಿಗಳ ತಂಡವೊಂದು ಮೂವರು ಯುವಕರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದ ಘಟನೆ ಮಂಗಳೂರಿನ ಕಸಬ ಬೆಂಗ್ರೆಯಲ್ಲಿ ರವಿವಾರ ತಡರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೂವರು ಯುವಕರು ರವಿವಾರ ರಾತ್ರಿ ಕಸಬ ಬೆಂಗ್ರೆಯಿಂದ ತಣ್ಣೀರುಬಾವಿ ಕಡೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಇವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನವನ್ನು ಕಸಬ ಬೆಂಗ್ರೆಯ ಫುಟ್ಬಾಲ್ ಮೈದಾನದ ಬಳಿ ಆರು ಮಂದಿ ಮುಸುಕುಧಾರಿಗಳ ತಂಡ ತಡೆದು ದಾಳಿ ನಡೆಸಿದೆ ಎನ್ನಲಾಗಿದೆ.

ದಾಳಿಗೊಳಗಾದ ಯುವಕರನ್ನು ಕಸಬ ಬೆಂಗ್ರೆ ನಿವಾಸಿಗಳಾದ ಅನ್‌ವೀಝ್, ಸಿರಾಜ್ ಹಾಗೂ ಇಝಾದ್ ಎಂದು ಹೆಸರಿಸಲಾಗಿದ್ದು, ಇಬ್ಬರು ಗಾಯಾಳುಗಳನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಅನ್‌ವೀಝ್ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ನಗರದ ಯುನಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ದುಷ್ಕರ್ಮಿಗಳ ದಾಳಿ ವೇಳೆ ಅನ್‌ವೀಝ್ ತೀವ್ರ ದಾಳಿಗೊಳಗಾದರೆ, ಸಿರಾಜ್ ಹಾಗೂ ಇಝಾದ್ ದಾಳಿಗೊಳಗಾದರೂ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಅವರಿಬ್ಬರು ಮೊಬೈಲ್ ಕರೆ ಮಾಡಿ ತಮ್ಮ ಗೆಳೆಯರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಗೆಳೆಯರು ಅವರನ್ನು ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಫುಟ್ಬಾಲ್ ಮೈದಾನದಲ್ಲಿ ಗಂಭೀರ ಗಾಯಗಳೊಂದಿಗೆ ಬಿದ್ದಿದ್ದ ಅನ್‌ವೀಝ್ ಅವರನ್ನು ಮೀನುಗಾರಿಕೆ ತೆರಳುತ್ತಿದ್ದವರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸುಹೈಲ್, ಜಲೀಲ್ ಬೆಂಗ್ರೆ ಹಾಗೂ ಬಶೀರ್ ಎಂಬವರು ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ. ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments are closed.