ಕರಾವಳಿ

ಕುಂದಾಪುರ ಲಾಡ್ಜ್‌ನಲ್ಲಿ ವೃದ್ಧೆಯ ಮರ್ಡರ್: ಅಜರ್ ಖಾನ್‌ಗೆ ಕೊನೆಯುಸಿರಿರುವವರೆಗೂ ‘ಜೀವಾವಧಿ’ ಶಿಕ್ಷೆ!

Pinterest LinkedIn Tumblr

ಕುಂದಾಪುರ : ಕಳೆದ ಎಂಟು ವರ್ಷಗಳಿಂದ ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ ಎಂದು ವಿವಾಹಿತ ಮಗಳ ಜೊತೆಗಿನ ಸಂಬಂದವನ್ನು ಹೇಳಿಕೊಂಡಾಗ ನಿರಾಕರಿಸಿದ ತಾಯಿಯ ಕುತ್ತಿಗೆಗೆ ದಪ್ಪದ ವಯರ್ ಸುತ್ತಿ ಕೊಲೆಗೈದು ನಂತರ ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಟವೆಲ್ಲೊಂದನ್ನು ಆಕೆಯ ಕುತ್ತಿಗೆಗೆ ಸುತ್ತಿ., ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕೈಯಲ್ಲಿದ್ದ ಬಳೆಗಳನ್ನು ಅಪಹರಿಸಿದ್ದ ಆರೋಪ ಹೊತ್ತಿದ್ದ ಗುಜರಾತ್ ಮೂಲದ ಅಜರ್ ಫಝಲ್ ಖಾನ್ ಯಾನೆ ಅಜಯ್ ಬಾಬು ಮೇಲೆ ಹೊರಿಸಲಾದ ಆರೋಪ ಸಾಭೀತಾಗಿದ್ದು ಆತನಿಗೆ ಕೊನೆಯುಸಿರಿರುವವರೆಗೂ ಜೀವಾವಧಿ ಶಿಕ್ಷೆ ನೀಡಿ ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಮಹತ್ವದ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

(ಕೊಲೆಯಾದ ಲಲಿತಾ ದೇವಾಡಿಗ)

ಕಳೆದ ಮೂರು ವರ್ಷಗಳ ಹಿಂದೆ ಅಂದರೆ 2015ರ ಏಪ್ರಿಲ್ 15 ರಂದು ಸಂಜೆ ಕುಂದಾಪುರದ ಜೆ.ಕೆ. ಟವರ್‍ಸ್ ಲಾಡ್ಜ್‌ನಲ್ಲಿ ಗಂಗೊಳ್ಳಿ ನಿವಾಸಿ ಲಲಿತಾ ದೇವಾಡಿಗ ಅವರನ್ನು ಕೊಂದ ಕೊಲೆಗಡುಕ ಸದ್ಯ ಅಪರಾಧಿಯಾಗಿದ್ದು ಕೊಲೆ ಪ್ರಕರಣ 302 ಸೆಕ್ಷನ್ ಅಡಿ ಕೊನೆಯ ಉಸಿರು ಇರುವವರೆಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ, ಆಭರಣ ದೋಚಿದ್ದಕ್ಕೆ 404 ಸೆಕ್ಷನ್ ಅಡಿ 3 ವರ್ಷ ಜೈಲು ಹಾಗೂ 10 ಸಾವಿರ ದಂಡ, ಮೋಸ ಮಾಡಿದ್ದಕ್ಕೆ 417 ಸೆಕ್ಷನ್ ಅಡಿ 1 ವರ್ಷ ಸಜೆ ಹಾಗೂ 5 ಸಾವಿರ ದಂಡ, ನಕಲಿ ಮರಣ ಪತ್ರ (ಡೆತ್ ನೋಟ್) ಸಿದ್ಧಪಡಿಸಿದ್ದಕ್ಕೆ ಸೆಕ್ಷನ್ 465 ಅಡಿಯಲ್ಲಿ 1 ವರ್ಷ ಜೈಲು 5 ಸಾವಿರ ದಂಡ, ಪೋರ್ಜರಿ ಮಾಡಿ ದುರ್ಬಳಕೆಗೆ ಸೆಕ್ಷನ್ 468 ಅಡಿ 5 ವರ್ಷ ಕಠಿಣ ಸಜೆ ಹಾಗೂ 20 ಸಾವಿರ ದಂಡ ವಿಧಿಸಿದೆ. ಅಲ್ಲದೇ ಕೊಲೆಯಾದ ಲಲಿತಾ ದೇವಾಡಿಗ ಮಕ್ಕಳಿಗೆ ಪರಿಹಾರ ದೊರಕಲು ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗುವಂತೆಯೂ ಸೂಚಿಸಲಾಗಿದೆ.

(ಅಪರಾಧಿಯನ್ನು ಜೈಲಿಗೆ ಕರೆದೊಯ್ಯುತ್ತಿರುವ ಪೊಲೀಸರು)

ನಿರಾಳನಾಗಿದ್ದ ಅಜರ್!
ಕೋರ್ಟಿಗೆ ಕರೆತರುವಾಗಲೂ ಮಂದಸ್ಮಿತನಾಗಿ ಯಾವುದೇ ಆತಂಕವಿಲ್ಲದೇ ಅಜರ್ ನಿರಾಳನಾಗಿದ್ದ. ಸುಮಾರು 11.15 ಕ್ಕೆ ಕೋರ್ಟಿನೊಳಗೆ ಕರೆದೊಯ್ಯಲಾಗಿದ್ದು ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಪ್ರಕಟಿಸುವಾಗಲೂ ಯಾವುದೇ ಭಯವಿಲ್ಲದೇ ಮಾಮೂಲಿಯಂತೆ ನಿಂತಿದ್ದ. ಬಳಿಕ ಪೊಲೀಸರು ಮರಳಿ ಜೈಲಿಗೆ ಕರೆದೊಯ್ಯುವಾಗ ಮಾತ್ರ ಕೊಂಚ ವಿಚಲಿತನಾದಂತೆ ಕಂಡುಬಂದ.

ಮಗಳೊಂದಿಗೆ ಪ್ರೇಮ….ಒಪ್ಪದ ತಾಯಿಯ ಕೊಲೆ!
ಇಪ್ಪತ್ತು ವರ್ಷಗಳ ಹಿಂದೆ ಅಪಾಧಿತ ಅಝರ್ ಫಜಲ್ ಖಾನ್ ಹಾಗೂ ಲಲಿತಾ ದೇವಾಡಿಗರ ಮಗಳು ವೈಷ್ಣವಿ ಇಬ್ಬರೂ ಮುಂಬೈಯ ಎಂಬ್ರಾಯಿಡರಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆಗಲೇ ಆತನಿಗೆ ವೈಷ್ಣವಿ ಜೊತೆಗೆ ಪ್ರೇಮಾಂಕುರವಾಗಿತ್ತು. ಆದರೆ ವೈಷ್ಣವಿಗೆ ಈ ಬಗ್ಗೆ ಏನೂ ತಿಳಿದಿರಲಿಲ್ಲ. ಹೀಗೇ ಸುಮಾರು ಹದಿನೈದು ವರ್ಷಗಳ ನಂತರ ಆತ ಬೇರೊಂದು ಕಂಪೆನಿಗೆ ಕೆಲಸಕ್ಕೆ ಸೇರುತ್ತಾನೆ. ಈ ಸಂದರ್ಬ ಇಬ್ಬರೂ ದೂರವಾಗುತ್ತಾರೆ. ಕಳೆ ಒಂದೂವರೆ ವರ್ಷಗಳ ನಂತರ ಮತ್ತೆ ಇಬ್ಬರಿಗೂ ಪರಿಚಯವಾಗುತ್ತದೆ. ಈ ಸಂದರ್ಭ ವೈಷ್ಣವಿಗೆ ಮರಾಠಿ ಮೂಲದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಾಗಿರುತ್ತದೆ. ಆದರೂ ಅಝರ್ ಆಕೆಯನ್ನು ಓಲೈಸಿ ಮದುವೆಗೆ ಪ್ರಯತ್ನಿಸುತ್ತಾನೆ. ಆದರೆ ವೈಷ್ಣವಿ ಈ ಬಗ್ಗೆ ಅಮ್ಮ ಒಪ್ಪಿದರೆ ಗಂಡನನ್ನು ಬಿಟ್ಟು ಬರುವುದಾಗಿ ಸೂಚಿಸುತ್ತಾಳೆ. ಇದೇ ಕಾರಣಕ್ಕಾಗಿ ಹಲವು ಬಾರಿ ಅಝರ್ ಗಂಗೊಳ್ಳಿಗೆ ಬಂದು ಹೋಗುವುದು ಮಾಡುತ್ತಾನೆ. ದೂರವಾಣಿಯಲ್ಲಿಯೂ ಮಗಳ ವಿವಾಹದ ಬಗ್ಗೆ ಮಾತುಕತೆ ನಡೆಸುತ್ತಾನೆ. ಆದರೆ ವೈಷ್ಣವಿ ತಾಯಿ ಲಲಿತಾ ದೇವಾಡಿಗ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ನಂತರ ಏಪ್ರಿಲ್ 5 ರಂದು ವೈಷ್ಣವಿಯೊಂದಿಗೆ ಮಾತುಕತೆ ನಡೆಸಿ ತಾಯಿಯನ್ನು ಒಪ್ಪಿಸಿ ಬರುವುದಾಗಿ ಹೇಳಿ ಕುಂದಾಪುರಕ್ಕೆ ಬರುತ್ತಾನೆ.

(File Photos)

ಸ್ಕೆಚ್ ರೂಪಿಸಿ ಕೊಂದಿದ್ದ ಕಿರಾತಕ!
ಏಪ್ರಿಲ್ 7 ರಂದು ಕುಂದಾಪುರದ ಹೃದಯ ಭಾಗದಲ್ಲಿರುವ ವಸತಿಗೃಹವೊಂದರಲ್ಲಿ ಕೋಣೆಯನ್ನು ಬಾಡಿಗೆ ಪಡೆದಿದ್ದ ಆತ ಗಂಗೊಳ್ಳಿಯ ಶ್ರೀ ಜಟ್ಟಿಗೇಶ್ವರ ದೇವಸ್ಥಾನಕ್ಕೆ ಒಂದೂವರೆ ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿ ಏಪ್ರಿಲ್ 15ರಂದು ಲಲಿತಾ ದೇವಾಡಿಗರನ್ನು ವಸತಿ ಗೃಹಕ್ಕೆ ಕರೆತರುತ್ತಾನೆ. ಅಲ್ಲಿ ಮಧ್ಯಾಹ್ನ ಊಟ ಮುಗಿಸಿ ಮತ್ತೆ ಮದುವೆಯ ವಿಚಾರ ಪ್ರಸ್ತಾಪ ಮಾಡುತ್ತಾನೆ. ಆದರೆ ಆ ಸಂದರ್ಭ ಆಕೆ ವಿರೋಧ ವ್ಯಕ್ತಪಡಿಸಿದ್ದ ಕಾರಣ ಮಾತಿಗೆ ಮಾತು ಬೆಳೆದು ತಾನು ತಂದಿದ್ದ ವಯರ್‌ನ್ನು ಆಕೆಯ ಕುತ್ತಿಗೆಗೆ ಸುತ್ತಿ ಕೊಲೆ ಮಾಡುತ್ತಾನೆ. ಅಷ್ಟು ಹೊತ್ತಿಗಾಗಲೇ ರೂಂ ಬಾಯ್ ಬಂದಾಗ ಗಾಬರಿಗೊಂಡ ಅಜರ್ ಆಕೆಯ ಕುತ್ತಿಗೆಗೆ ಗಾಯ ತೋರದಂತೆ ಟವೆಲ್ಲೊಂದನ್ನು ಕಟ್ಟುತ್ತಾನೆ ಮತ್ತು ತಾನು ತಂದಿದ್ದ ವಯರನ್ನು ಕಿಟಕಿಯ ಮೂಲಕ ಎಸೆಯುತ್ತಾನೆ. ಮತ್ತು ಆಕೆ ಧರಿಸಿದ್ದ ಸಿನ್ನದ ಸರ ಹಾಗೂ ಬಳೆಯನ್ನು ಅಪಹರಿಸಿ ಮುಂಬೈಗೆ ಪರಾರಿಯಾಗುತ್ತಾನೆ.

ನಕಲಿ ಡೆತ್ ನೋಟ್ ಬರೆದ ಕೊಲೆಗಡುಕ!
ಈ ನಡುವೆ ಸಮೀಪದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಸಹಾಯ ಪಡೆದು ಕನ್ನಡದಲ್ಲಿ ಕೊಲೆಗೀಡಾದ ಲಲಿತಾ ದೇವಾಡಿಗರ ಹೆಸರಿನಲ್ಲಿ ಆತ್ಮಹತ್ಯೆ ಪತ್ರವೊಂದನ್ನು ಸಿದ್ಧಪಡಿಸಿ ಮುಂಬೈಗೆ ಕೊಂಡೊಯ್ಯುತ್ತಾನೆ. ಅಲ್ಲಿ ಚಿನ್ನದ ಸರ ಹಾಗೂ ಬಳೆಗಳನ್ನು ಮಾರಾಟ ಮಾಡಿ ನಲ್ವತ್ತು ಸಾವಿರ ರೂಪಾಯಿ ಪಡೆದು ಆತ್ಮಹತ್ಯೆ ಪತ್ರವನ್ನು ವೈಷ್ಣವಿಗೆ ತೋರಿಸಿ ಆಕೆಯೊಂದಿಗೆ ಇಬ್ಬರು ಮಕ್ಕಳ ಸಹಿತ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿರುವ ಲಾಡ್ಜ್ ಒಂದರಲ್ಲಿ ಉಳಿದುಕೊಳ್ಳುತ್ತಾರೆ. ಲಲಿತಾ ದೇವಾಡಿಗ ಕೊಲೆ ಪ್ರಕರಣಕ್ಕೂ ಮೊದಲು ಕೆಲ ವರ್ಷದ ಹಿಂದೆ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಝರ್ ಆ ಅಂಗಡಿಯಿಂದ ಒಂದೂವರೆ ಲಕ್ಷ ರೂಪಾಯಿ ಲಪಟಾಯಿಸಿ ನಾಪತ್ತೆಯಾಗಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಅಲ್ಲದೇ ಆತ ಎಲ್ಲೆಡೆಯಲ್ಲಿಯೂ ತಾನು ಶ್ರೀಮಂತ ಎಂದು ನಂಬಿಸಿದ್ದದ್ದು ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದ.

ಕಾರ್ಯಾಚರಣೆಯಲ್ಲಿದ್ದ ಪೊಲೀಸರು…..
ಲಲಿತಾ ದೇವಾಡಿಗರನ್ನು ಕೊಲೆ ಮಾಡಿದ ಬಳಿಕ ಹದಿನೆಂಟು ದಿನಗಳ ಕಾಲ ಅಝರ್ ನಾಪತ್ತೆಯಾಗಿದ್ದ. ಅಂದಿನ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಮುಂದಾಳತ್ವದಲ್ಲಿ ಅಂದಿನ ಕುಂದಾಪುರದ ಡಿವೈ‌ಎಸ್ಪಿ ಎಂ. ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ, ಈ ಹಿಂದಿನ ಕುಂದಾಪುರ ವೃತ್ತ ನಿರೀಕ್ಷಕ ಪಿ.ಎಂ ದಿವಾಕರ ಹಾಗೂ ಕುಂದಾಪುರ ಉಪನಿರೀಕ್ಷಕ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಅಝರ್ ಅಲಿಯಾಸ್ ಅಜಯ್ ಬಾಬುನನ್ನು ಬಂಧಿಸಿದ್ದರು.

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ: ಕುಂದಾಪುರದ ಲಾಡ್ಜಿನಲ್ಲಿ ವೃದ್ಧೆಯ ಅನುಮಾನಾಸ್ಪದ ಸಾವು; ಜೊತೆಗಿದ್ದ ಯುವಕ ಪರಾರಿ..?

ಲಾಡ್ಜಿನಲ್ಲಿ ವೃದ್ಧೆ ನಿಗೂಢ ಸಾವು : ಜೊತೆಗಿದ್ದ ಯುವಕ ಮಹರಾಷ್ಟ್ರಕ್ಕೆ ಪರಾರಿ; ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ

ಲಾಡ್ಜಿನಲ್ಲಿ ವೃದ್ಧೆ ನಿಗೂಢ ಸಾವು; ಸಾವಿನ ಕಾರಣ ಇನ್ನೂ ನಿಗೂಢ; ಯುವಕನ ಜೊತೆ ವೃದ್ಧೆ ಮಗಳೂ ನಾಪತ್ತೆ

ಲಾಡ್ಜ್‌ನಲ್ಲಿ ವೃದ್ಧೆ ಕೊಲೆ ಪ್ರಕರಣ; ಮುಂಬೈನಲ್ಲಿ ಆರೋಪಿ ಬಂಧನ : ಕುಂದಾಪುರ ಪೊಲೀಸರಿಂದ ಚುರುಕುಗೊಂಡ ತನಿಖೆ

ಮಗಳ ಆಸೆಗೆ ತಾಯಿಯನ್ನೇ ಮಟಾಶ್ ಮಾಡಿದ ಕಟುಕ; ‘ಲಾಡ್ಜ್‌ನಲ್ಲಿ ಮರ್ಡರ್’-ಸುದ್ಧಿಗೋಷ್ಟಿಯಲ್ಲಿ ಘಟನೆ ವಿವರಿಸಿದ ಎಸ್ಪಿ

ಕುಂದಾಪುರ ಲಾಡ್ಜ್‌ನಲ್ಲಿ ವೃದ್ಧೆಯ ಮರ್ಡರ್: ಅಜರ್ ಖಾನ್ ದೋಷಿಯೆಂದು ತೀರ್ಪು

 

Comments are closed.