ಕುಂದಾಪುರ: ಮಂಗಳೂರಿನಿಂದ ಕುಂದಾಪುರದತ್ತ ಬ್ಯಾಂಕಿಗೆ ಹಣ ರವಾನಿಸುತ್ತಿದ್ದ (ಗೂಡ್ಸ್ ವಾಹನ) ಖಾಸಗಿ ಕಂಪೆನಿಯ ವಾಹನವೊಂದು ಮರಳು ಸಾಗಾಟದ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಣ ಸಾಗಾಟದ ವಾಹನದಲ್ಲಿದ್ದ ಚಾಲಕ ಹಾಗೂ ಕಂಪೆನಿ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರದ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಹಣ ಸಾಗಾಟದ ವಾಹನದಲ್ಲಿದ್ದ ರಾಘವೇಂದ್ರ ಹಾಗೂ ರಾಜೇಶ್ ಎನ್ನುವವರು ಗಾಯಾಳುಗಳಾಗಿದ್ದು ಇಬ್ಬರು ಕುಂದಾಪುರದ ಬಸ್ರೂರು ಮೂಲದವರು ಎನ್ನಲಾಗಿದೆ. ಇಬ್ಬರಪೈಕಿ ರಾಜೇಶ್ ಎನ್ನುವವರ ಕಾಲು, ಕೈ, ಹೊಟ್ಟೆ ಹಾಗೂ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಟಿಪ್ಪರ್ ಚಾಲಕ ಪಾಂಡು ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ವಿವರ: ಮರಳು ತುಂಬಿದ್ದ ಟಿಪ್ಪರ್ ವಾಹನ ತೆಕ್ಕಟ್ಟೆ ಹೆದ್ದಾರಿಯಲ್ಲಿ ನಿಂತಿದ್ದು ಈ ಸಂದರ್ಭ ಕೋಟ ಕಡೆಯಿಂದ ಸಾಗಿ ಬಂದ ಹಣ ಸಾಗಾಟದ ವಾಹನ ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಹಣ ಸಾಗಾಟದ ವಾಹನ ಮುಂಭಾಗ ನಜ್ಜುಗುಜ್ಜಾಗಿತ್ತು. ವಾಹನದ ಒಂದು ಪಾರ್ಶ್ವದಲ್ಲಿ ಸಿಕ್ಕಿ ಬಿದ್ದ ರಾಜೇಶ್ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವುದು ಹರಸಾಹಸದ ಕಾರ್ಯವಾಗಿತ್ತು. ವಾಹನ ಚಲಾಯಿಸುತ್ತಿದ್ದ ರಾಘವೇಂದ್ರ ಕಾಲಿನ ಭಾಗಕ್ಕೂ ಗಂಭೀರ ಗಾಯವಾಗಿದೆ. ಸತತ ಪರಿಶ್ರಮದ ಮೂಲಕ ನಜ್ಜುಗುಜ್ಜಾದ ವಾಹನದಿಂದ ಇಬ್ಬರು ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಯಿತು. ವಾಹನದಲ್ಲಿ ಯಾವುದೇ ಹಣ ಇರಲಿಲ್ಲ ಎನ್ನಲಾಗಿದೆ.
ಆಪತ್ಪಾಂಧವರಾದ ಮಾಜಿ ಜಿ.ಪಂ ಸದಸ್ಯ..
ಘಟನೆ ಸಂಭವಿಸುತ್ತಲೇ ಸ್ಥಳಕ್ಕೆ ದೌಡಾಯಿಸಿದ ಮಾಜಿ ಜಿ.ಪಂ ಸದಸ್ಯ ಗಣಪತಿ ಟಿ. ಶ್ರೀಯಾನ್ ಸಮೀಪದಲ್ಲೇ ಇದ್ದ ತನ್ನ ಅಂಗಡಿಯಿಂದ ಕಾರ್ಯಾಚರಣೆಗೆ ಬೇಕಾದ ವಸ್ತುಗಳನ್ನು ತರಿಸಿ ಗಾಯಾಳುವನ್ನು ವಾಹನದಿಂದ ಬಿಡಿಸಲು ಶ್ರಮವಹಿಸಿದರು. ಸ್ಥಳೀಯರು ಇವರಿಗೆ ಸಾಥ್ ನೀಡಿದ್ದು ಮತ್ತೊಂದು ವಾಹನದ ಸಹಾಯದಿಂದ ಹಗ್ಗ ಕಟ್ಟಿ ಟಿಪ್ಪರ್ ಹಿಂಬದಿಯಿದ್ದ ನಜ್ಜುಗುಜ್ಜಾದ ವಾಹನ ಎಳೆದು ಗಾಜು ಹಾಗೂ ವಾಹನದ ಅವಶೇಷಗಳೊಳಗೆ ಸಿಲುಕಿ ನರಳುತ್ತಿದ್ದ ಗಾಯಾಳುವನ್ನು ಹೊರಕ್ಕೆ ತಂದರು.
ಕೋಟ ಪಿಎಸ್‌ಐ ಸಂತೋಷ್ ಕಾಯ್ಕಿಣಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.