ಕರಾವಳಿ

ಬೆಲೆಬಾಳುವ ಪ್ರಾಚೀನ ‘ಜೈನ ತೀರ್ಥಾಂಕರ’ ವಿಗ್ರಹ ಡೀಲಿಂಗ್: ಕುಂದಾಪುರ ಪೊಲೀಸರಿಂದ ಮೂವರ ಬಂಧನ

Pinterest LinkedIn Tumblr

ಕುಂದಾಪುರ: ಪ್ರಾಚೀನ ಹಾಗೂ ಬೆಲೆಬಾಳುವ ಜೈನ ತೀರ್ಥಂಕರ ವಿಗ್ರಹವನ್ನು ಮಾರಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕೋಟೇಶ್ವರದಲ್ಲಿ ಈ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿಗಳ ವಿವರ:
ಮಂಗಳೂರು ಪಡೀಲ್ ನಿವಾಸಿ ನೆವಿಲ್ ವಿಲ್ಪಿ ಮಸ್ಕರೇನಿಯಸ್ (36), ಶಿವಮೊಗ್ಗ ಸಾಗರದ ತಾಳಗುಪ್ಪ ನಿವಾಸಿ ಅನಿಲ್ ಪೋರ್ಟಡೋ (34), ಮಂಗಳೂರು ನಿವಾಸಿ ಆಸ್ಟೀನ್ ಸಿಕ್ವೆರಾ (28) ಬಂದಿತ ಆರೋಪಿಗಳಾಗಿದ್ದಾರೆ. ಈ ನಡುವೆ ಆ ಸ್ಥಳದ ಕೆಲ ದೂರದಲ್ಲಿ ಅನುಮಾಸ್ಪಾದವಾಗಿ ನಿಂತಿದ್ದ ಸ್ಥಳೀಯ ನಿವಾಸಿ ದಂಪತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಆರೋಪಿಗಳು ಪರಾರಿ ಯತ್ನ….ಬಿಡದ ಪೊಲೀಸರು!
ದೊಡ್ಡದೊಂದು ಡೀಲ್ ನಡೆಯುತ್ತಿದೆಯೆಂಬುದು ಪೊಲೀಸರಿಗೆ ತಿಳಿಯುತ್ತಲೇ ಕುಂದಾಪುರ ಪೊಲೀಸರ ತಂಡ ಇವರನ್ನು ಹಿಡಿಯಲೇಬೇಕೆಂಬ ಟಾರ್ಗೇಟ್ ಮಾಡಿ ಸ್ಥಳಕ್ಕೆ ತೆರಳುತ್ತಾರೆ. ಕೋಟೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಈ ಡೀಲ್ ವ್ಯವಹಾರ ನಡೆಯುವಾಗ ಪೊಲೀಸ್ ಉಪಸ್ಥಿತಿ ಕಂಡ ಬಂಧಿತ ಮೂವರು ಆರೋಪಿಗಳು ಪರಾರಿಯಾಗಲು ಯತ್ನಿಸುತ್ತಾರೆ. ಆದರೇ ಕೂಡಲೇ ಅಲರ್ಟ್ ಆದ ಪೊಲೀಸರು ಮೂವರನ್ನು ಹೆಡೆಮುರಿ ಕಟ್ಟಿ ವಿಚಾರಿಸುತ್ತಾರೆ.

ಬೆಚ್ಚಿ ಬೀಳಿಸಿದ ‘ಡೀಲ್’..
ದಾಂಡಿಗರಂತೆ ಕಾಣುವ ಮೂವರನ್ನು ವಿಚಾರಿಸಲಾಗಿ ಅವರಲ್ಲಿ ನೆವಿಲ್ ವಿಲ್ಪಿ ಮಸ್ಕರೇನಿಯಸ್ ಎಂಬಾತ ಅವರುಗಳು ತಂದಿದ್ದ ಚವರ್ಲೆಟ್ ಕಾರಿನಲ್ಲಿ ಕೈಚೀಲದಲ್ಲಿದ್ದ ನಾಲ್ಕು ಮೂರ್ತಿಗಳನ್ನು ಪೊಲೀಸರಿಗೆ ಒಪ್ಪಿಸುತ್ತಾನೆ. ಈ ಮೂರ್ತಿಗಳನ್ನು ಪರಿಶೀಲಿಸಿ ಸಂಬಂದಪಟ್ಟ ನುರಿತ ವ್ಯಕ್ತಿಗಳೊಂದಿಗೆ ಹಾಗೂ ಪ್ರಾಚ್ಯ ವಸ್ತು ಸಂಗ್ರಹಾಲಯದ ಮುಖ್ಯಸ್ಥರೊಂದಿಗೆ ಮೂರ್ತಿ ಬಗ್ಗೆ ಮಾತನಾಡುತ್ತಾರೆ. ಆಗ ತಿಳಿಯುತ್ತೆ ಇದು ಪ್ರಾಚೀನವಾದ ಬೆಲೆಬಾಳುವ ಜೈನ ತೀರ್ಥಾಂಕರ ವಿಗ್ರಹಗಳು ಎಂದು! ಇದನ್ನು ಮಾರಾಟ ಮಾಡಲು ಬಂದಿದ್ದಾರೆ ಈ ನಟೋರಿಯಸ್ ಆರೋಪಿಗಳು ಆಗಿರಬಹುದು ಎಂದು.

ಆರೋಪಿಗಳು ಪಕ್ಕಾ ನಟೋರಿಯಸ್..!?
ಪೊಲೀಸರು ವಶಕ್ಕೆ ಪಡೆದ ನಾಲ್ಕು ವಿಗ್ರಹಗಳು ಯಾವ ಮೊತ್ತಕ್ಕೆ ಬೆಲೆ ಬಾಳುತ್ತವೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಆದರೇ ಇದು ಪ್ರಾಚ್ಯ ವಸ್ತುಗಳೆಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯ ವರದಿ. ಆದರೇ ಆರೋಪಿಗಳ ಬಳಿ ವಶಕ್ಕೆ ಪಡೆಯಲಾದ ನೋಟ್ ಎಣಿಸುವ ಯಂತ್ರ ಇದೊಂದು ದೊಡ್ಡ ಡೀಲ್ ಎನ್ನುವುದು ಪುಷ್ಟಿಕರಿಸುತ್ತದೆ.

ಆರೋಪಿಗಳಿಂದ ವಶಕ್ಕೆ ಪಡೆದಿದ್ದೇನು?
ಆರೋಪಿಗಳ ಪೈಕಿ ನೆವಿಲ್ ವಿಲ್ಪಿ ಮಸ್ಕರೇನಿಯಸ್ ಬಳಿ ನೋಟ್ ಎಣಿಸುವ ಯಂತ್ರ, ಎರ್ಟಿಗಾ ಕಾರು, ಮೊಬೈಲ್ ಹಾಗೂ 46,060 ಹಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಅನಿಲ್ ಪೋರ್ಟಡೋ ಎನ್ನುವಾತನಿಂದ ಹನ್ನೊಂದು ಸಾವಿರ ನಗದು ಹಾಗೂ ಮೊಬೈಲ್ ಫೋನು, ಇನ್ನೋರ್ವ ಆರೋಪಿಯಿಂದ ದುಬಾರಿ ಬೆಲೆಯ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿದ್ದವರು…
ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್, ಹೆಡ್ ಕಾನ್ಸ್‌ಟೆಬಲ್‌ಗಳಾದ  ಚಂದ್ರಶೇಖರ್, ಜಗನ್ನಾಥ ನಾಯ್ಕ್, ಸಿಬ್ಬಂದಿಗಳಾದ ಗುರುರಾಜ ಆಚಾರ್ಯ, ಮಂಜುನಾಥ, ಮಹಿಳಾ ಸಿಬ್ಬಂದಿ ಶಾರದಾ, ಇಲಾಖೆ ಜೀಪು ಚಾಲಕ ಲೋಕೇಶ್ ಮೊದಲಾದವರು ಇದ್ದರು. ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಮಾರ್ಗದರ್ಶನದಲ್ಲಿ ಕಾರ್ಕಳ ಎಎಸ್ಪಿ ಹೃಷಿಕೇಶ್‌ ಸೋನಾವಣೆ ನಿರ್ದೇಶನದಲ್ಲಿ ಈ ಮಿಂಚಿನ ಕಾರ್ಯಾಚರಣೆ ನಡೆದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ…
ಪೊಲೀಸರು ಆರೋಪಿಗಳನ್ನು ಸತತ ವಿಚಾರಣೆಗೊಳಪಡಿಸಬೇಕಿದ್ದು ಇಂದು ನ್ಯಾಯಾಲಯ ರಜೆಯಿರುವ ಕಾರಣ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಅವರನ್ನು ಕಾರವಾರ ಜೈಲಿಗೆ ರವಾನಿಸಲಾಗಿದೆ. ಮುಂದಿನ ದಿನದಲ್ಲಿ ಹೆಚ್ಚಿನ ವಿಚಾರಣೆ ಸಲುವಾಗಿ ಮರಳಿ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆಗಳಿದೆ. .

(ವರದಿ- ಯೋಗೀಶ್ ಕುಂಭಾಸಿ)

Comments are closed.