ಕರಾವಳಿ

ಮಟ್ಕಾ ದಂಧೆಗೆ ಕಡಿವಾಣ ಹಾಕ್ತೇವೆ, ದಂಧೆಕೋರ ಯಾರಿದ್ದರೂ ಬಿಡಲ್ಲ: ಉಡುಪಿ SP ಲಕ್ಷ್ಮಣ್ ನಿಂಬರ್ಗಿ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಬುಧವಾರ ಮಧ್ಯಾಹ್ನ ಕುಂದಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಈ ಸಂದರ್ಭ ಠಾಣೆಯನ್ನು ಪರಿಶೀಲಿಸಿ ಆಗುಹೋಗುಗಳ ಮಾಹಿತಿ ಕಲೆ ಹಾಕಿದ ಅವರು ಪತ್ರಕರ್ತರ ಜೊತೆ ಮಾತನಾಡಿದರು.

ಅಕ್ರಮ ಮರಳುಗಾರಿಕೆ ಬಗ್ಗೆ..
ಅಕ್ರಮ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ಮರಳು ಸಾಗಿಸುವ ವಾಹನಗಳಿಗೆ ಜಿಲ್ಲಾಡಳಿತದಿಂದ ಜಿಪಿ‌ಎಸ್ ಅಳವಡಿಕೆ ಮಾಡಿಸಿದಲ್ಲಿ ಪಾರದರ್ಶಕ ವ್ಯವಸ್ಥೆ ಸಾಧ್ಯವಿದೆ. ಮರಳು ಪರವಾನಿಗೆ ಹಾಗೂ ಸಾಗಾಣಿಕೆಯ ವ್ಯವಸ್ಥೆ ಬಗ್ಗೆಯೂ ಇದರಿಂದ ಸೂಕ್ಷ್ಮವಾಗಿ ತಿಳಿಯಲು ಸಾಧ್ಯವಿದ್ದು ಅಕ್ರಮ ತಡೆಗೆ ಇದು ಸಹಕಾರಿಯಾಗಲಿದೆ. ಈಗಾಗಲೇ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ೩೩ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳ ಕರ್ತವ್ಯದ ಆಧಾರದ ಮೇರೆಗೆ ಈ ಚೆಕ್‌ಪೋಸ್ಟ್ ಕಾರ್ಯ ನಿರ್ವಹಿಸುತ್ತಿದ್ದು ಸಿಬ್ಬಂದಿಗಳ ಕೊರತೆಯಿದ್ದಲ್ಲಿ ಆಯಕಟ್ಟಿನ ೧೫ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲು ಮಾಡುವ ಬದಲು ತಹಶಿಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅಥವಾ ಸಂಬಂದಪಟ್ಟ ಗ್ರಾ.ಪಂ ಅಧಿಕಾರಿಗಳು ದೂರು ದಾಖಲು ಮಾಡಿದರೇ ಆ ಪ್ರಕರಣದ ಗಂಭೀರತೆ ಹೆಚ್ಚಲಿದೆ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಎಸ್ಪಿ ವಿವರಿಸಿದರು.

ಹಳೆ ಪ್ರಕರಣಗಳ ತನಿಖೆ…
ಕುಂದಾಪುರದಲ್ಲಿ ಈ ಹಿಂದೆ ನಡೆದ ಕುಸುಮಾ ಕೊಲೆ ಪ್ರಕರಣ, ಸುಬ್ರಾಯ ಹೊನ್ನಾವರ್ಕರ್ ಶೂಟೌಟ್, ಬೆಳ್ವೆ ಉದಯಕುಮಾರ್ ಶೆಟ್ಟಿ ಕೊಲೆ ಪ್ರಕರಣ ಸೇರಿದಂತೆ ಹಲವು ವರ್ಷಗಳಾಗಿಯೂ ಆರೋಪಿಗಳು ಪತ್ತೆಯಾಗದ ಕೊಲೆಗಳು ಹಾಗೂ ಕುಂದಾಪುರ ತಾಲೂಕಿನ ಸೌಕೂರು ಮತ್ತು ಕಟ್ಕೇರಿ ದೇವಸ್ಥಾನದ ಲಕ್ಷಾಂತರ ರೂ. ದರೋಡೆ ಪ್ರಕರಣಗಳ ತನಿಖೆಯ ಬಗ್ಗೆ ಪತ್ರಕರ್ತರು ಎಸ್ಪಿ ಅವರ ಗಮನಕ್ಕೆ ತಂದಾಗ ಇದಕ್ಕೆ ಉತ್ತರಿಸಿದ ಎಸ್ಪಿ ಅವರು ಈ ಪ್ರಕರಣಗಳ ಕೂಲಂಕುಷ ತನಿಖೆ ಬಗ್ಗೆ ಕ್ರಮ ವಹಿಸುತ್ತೇವೆ. ಎಲ್ಲಾ ಪ್ರಕರಣಗಳ ಅವಲೋಕನ ನಡೆಸುವ ಭರವಸೆ ನೀಡಿದ್ದಲ್ಲದೇ ಸ್ಥಳದಲ್ಲಿದ್ದ ಅಧಿಕಾರಿಗಳ ಜೊತೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಮಾತ್ರವಲ್ಲದೇ ಎಲ್ಲಾ ಪ್ರಕರಣಗಳ ಕಡತಗಳನ್ನು ತನ್ನ ಗಮನಕ್ಕೆ ತರುವಂತೆ ತಿಳಿಸಿದರು.

ಮಟ್ಕಾ ಬಂದ್ ಮಾಡಲು ಕ್ರಮ..
ಗೂಡಂಗಡಿಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರುವುದು ಮತ್ತು ಮಟ್ಕಾ ಚೀಟಿ ಬೆರಯುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್ಪಿ ಅವರು, ಕೇವಲ ಮಟ್ಕಾ ಕಿಂಗ್‌ಫಿನ್ ಹಿಡಿದರೇ ಮಾತ್ರ ಆಗಲ್ಲ. ಮಟ್ಕಾ ದಂಧೆ ಎನ್ನುವುದು ಪಾರ್ಥೇನಿಯಂ ಗಿಡವಿದ್ದಂತೆ. ಪೊಲೀಸರಾದ ನಾವು ಉಪಾಯದಿಂದ ಕೆಲಸ ಮಾಡುತ್ತಿದ್ದೇವೆ. ಮಟ್ಕಾ ದಂಧೆ ಮಾಡುವ ದಂಧೆಕೋರರು ಹಾಗೂ ಅವರ ಕಿಂಗ್‌ಫಿನ್ ಹಿಡಿಯಲು ನಮ್ಮ ಇಲಾಹೆ ಬದ್ಧವಾಗಿದೆ. ಉಡುಪಿಯ ಲಿಯೋ ಸೇರಿದಂತೆ ಇನ್ನಿಬ್ಬರು ಮಟ್ಕಾ ದಂಧೆಯ ರುವಾರಿಗಳ ಮಾಹಿತಿ ಕಲೆಹಾಕುತ್ತಿದ್ದೇವೆ. ದಂಧೆಯ ರೂವಾರಿಗಳನ್ನು ಹಿಡಿಯುವ ಜೊತೆಗೆ ಅವರ ಕೆಳಗಿರುವ ಸೈನಿಕರನ್ನು ನಾವು ಹಿಡಿಯಲೇಬೇಕು. ಇದು ಚೆಸ್ ಆಟದ ರೀತಿಯಾಗಿದ್ದು ಅಂಗಡಿಗಳಲ್ಲಿಯೂ ಮಟ್ಕಾ ಚೀಟಿ ಬರೆಯುವ ಸಣ್ಣಪುಟ್ಟ ಸೈನಿಕರ ನೆಟ್‌ವರ್ಕ್ ನಾಶಗೊಳಿಸಿದಾಗಲೇ ರಾಜ (ಮಟ್ಕಾ ಕಿಂಗ್ ಫಿನ್)ನನ್ನು ಹೊಡೆಯಲು ಸಾಧ್ಯ ಎಂದರು.

ಟ್ರಾಫಿಕ್ ಸಮಸ್ಯೆಗೆ ಸ್ಪಂದನೆ…
ಬಸ್ಸುಗಳಲ್ಲಿ ಕರ್ಕಷ ಹಾರ್ನ್, ಟೆಪ್‌ರೆಕಾರ್ಡರ್ ಹಾಕುವ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಆರ್.ಟಿ.ಓ ಇಲಾಖೆ ಕೂಡ ಸೂಕ್ತ ಕೆಲಸ ಮಾಡಬೇಕು. ಈ ಬಗ್ಗೆ ಉಡುಪಿಯಲ್ಲಿ ರಿಕ್ಷಾ ಹಾಗೂ ಖಾಸಗಿ ಬಸ್ ಸಂಬಂದಪಟ್ಟವರ ಜೊತೆ ಮಾತುಕತೆ ಮಾಡಿದ್ದೇವೆ. ಕುಂದಾಪುರ ಹಾಗೂ ಉಡುಪಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುವ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ಜನ ದಟ್ಟಣೆ ಜಾಸ್ಥಿಯಾಗುವ ಸಮಯದಲ್ಲಿ ಪೊಲೀಸರನ್ನು ನಿಯೋಜಿಸುವಂತೆ ಸ್ಥಳದಲ್ಲಿದ್ದ ಡಿವೈ‌ಎಸ್ಪಿ ಅವರಿಗೆ ಎಸ್ಪಿ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯಿಲ್ಲ..!
ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ನಕ್ಸಲ್ ಚಟುವಟಿಕೆಗಳು ಕಂಡುಬಂದಿಲ್ಲ. ಜಿಲ್ಲೆಯಲ್ಲಿ ನಾಲ್ಕು ಕೂಂಬಿಂಗ್ ಕೇಂದ್ರಗಳಿದ್ದು, ಒಟ್ಟು ೬ ಪೊಲೀಸ್ ಠಾಣೆಗಳು ನಕ್ಸಲ್ ಪೀಡಿತ ಪ್ರದೇಶವಾಗಿದೆ. ನಕ್ಸಲ್ ಚಟುವಟಿಕೆಗಳ ಬಗ್ಗೆ ಈಗಾಗಲೇ ಮಾಹಿತಿ ಕಲೆಹಾಕಿರುವೆ. ನಿತ್ಯವೂ ಕೂಂಬಿಂಗ್ ಕಾರ್ಯಾಚರಣೆ ಆಗುತ್ತಿದೆ. ಚುನಾವಣೆ ಆಗಮನದ ಹಿನ್ನೆಲೆ ಇತ್ತೀಚೆಗೆ ಮಂಗಳೂರು ವ್ಯಾಪ್ತಿಯಲ್ಲಿ ನಕ್ಸಲ್ ಚಲನೆಗಳು ಕಂಡುಬಂದಿದ್ದು ಗಮನಕ್ಕೆ ಬಂದಿದ್ದು ನಾವು ಕೂಡ ಮುಂಜಾಗರೂಕತೆ ವಹಿಸಿದ್ದೇವೆ. ಗ್ರಾಮಕ್ಕೊಂದು ಪೊಲೀಸ್, ಜನಸ್ಮೇಹಿ ಪೊಲೀಸ್ ವ್ಯವಸ್ಥೆ ಇರುವ ಕಾರಣ ಸಿಬ್ಬಂದಿಯೇ ಓರ್ವ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿ ಮಾಹಿತಿ ಕಲೆಹಾಕುವಷ್ಟರ ಮಟ್ಟಿಗೆ ಇಲಾಖೆಯಲ್ಲಿ ಬದಲಾವಣೆ ಬಂದಿದೆ. ಸಿಬ್ಬಂದಿಗಳೆ ಜನರಿಂದ ಮಾಹಿತಿ ಕಲೆ ಹಾಕುವ ಕಾರ್ಯ ಮಾಡುತ್ತಾರೆ ಎಂದರು.

ಈ ಸಂದರ್ಭ ಕುಂದಾಪುರ ಡಿವೈ‌ಎಸ್ಪಿ ಪ್ರವೀಣ್ ಎಚ್. ನಾಯ್ಕ್, ಸಿಪಿ‌ಐ ಮಂಜಪ್ಪ, ಕುಂದಾಪುರ ಠಾಣಾಧಿಕಾರಿ ಹರೀಶ್ ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.