ಕರಾವಳಿ

ಅಪಘಾತ ಸ್ಥಳಕ್ಕೆ ಉಪಕಾರಕ್ಕೆ ಹೋದ ವಿದ್ಯಾರ್ಥಿ; ಓಮ್ನಿ ಡಿಕ್ಕಿಯಾಗಿ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಅಪಘಾತ ನಡೆದ ಸ್ಥಳಕ್ಕೆ ತೆರಳಿ ಅಲ್ಲಿ ರಕ್ಷಣೆ ಕಾರ್ಯಾಚರಣೆ ಮಾಡಲು ಮುಂದಾದ ಕಾಲೇಜು ವಿದ್ಯಾರ್ಥಿಯೋರ್ವನಿಗೆ ಓಮ್ನಿ ಢಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಕುಂದಾಪುರದ ಬಸ್ರೂರು ರಸ್ತೆಯಲ್ಲಿ ನಡೆದಿದೆ.

ಕುಂದಾಪುರದ ಬೆಟ್ಟಾಗರ ನಿವಾಸಿ ನಿತಿನ್ ಪೂಜಾರಿ (21) ಮೃತ ವಿದ್ಯಾರ್ಥಿ.

ಸೋಮವಾರ ತಡರಾತ್ರಿ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿ ಕಾರಂತರ ಮನೆಯ ಸಮೀಪ ಖಾಸಗಿ ಬಸ್ ಹಾಗೂ ಸ್ಯಾಂಟ್ರೋ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ನಿತಿನ ಹಾಗೂ ಆತನ ಸ್ನೇಹಿತ ಕಾರಿನಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದರು. ಈ ವೇಳೆಯಲ್ಲಿ ಕುಂದಾಪುರದಿಂದ ಬಸ್ರೂರು ಕಡೆಗೆ ವೇಗವಾಗಿ ಬಂದ ಓಮ್ನಿ ನಿತಿನ್ ಹಾಗೂ ಅನಿಲ್‌ಗೆ ಡಿಕ್ಕಿಯಾಗಿದ್ದು ನಿತಿನ್ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿತಿನ್ ಮೃತಪಟ್ಟಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿ…..
ನಿತಿನ್ ಪೂಜಾರಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದು ಪ್ರತಿಭಾನ್ವಿತನಾಗಿದ್ದ. ಕುಂದಾಪುರ ಹೆಂಚಿನ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಸಂಜೀವ ಹಾಗೂ ರೇವತಿ ದಂಪತಿಗಳ ಪುತ್ರ. ಇವರ ಇಬ್ಬರು ಮಕ್ಕಳಲ್ಲಿ ಕಿರಿಯ ಮಗಳು ವಿಶೇಷಚೇತನಳಾಗಿದ್ದು, ನಿತಿನ್ ಹಿರಿಯ ಮಗ. ಮಗನ ಅಕಾಲಿಕ ಅಗಲುವಿಕೆಯಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Comments are closed.