ರಾಷ್ಟ್ರೀಯ

ಬಸ್ಸಿನಲ್ಲಿ ಸತ್ತ ಪ್ರಯಾಣಿಕನ ಶವ ಹೈವೇ ಬದಿಗಿಟ್ಟು ಹೋದ ಕಂಡಕ್ಟರ್‌

Pinterest LinkedIn Tumblr


ಚೆನ್ನೈ : ತಮಿಳು ನಾಡಿನಲ್ಲಿ ಸಂಭವಿಸಿರುವ ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ ರಾಜ್ಯ ರಸ್ತೆ ಸಾರಿಗೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ಮೃತಪಟ್ಟಾಗ ಆತನ ಸಹವರ್ತಿಯ ಜತೆಗೆ ಶವವನ್ನು ಕೃಷ್ಣಗಿರಿ ಪಟ್ಟಣಕ್ಕೆ ಸಮೀಪದ ಹೈವೇ ಪಕ್ಕ ಇಳಿಸಿ ರಸ್ತೆ ಬದಿಯಲ್ಲೇ ಇರಿಸಿ ಬಸ್‌ ಕಂಡಕ್ಟರ್‌ ತೆರಳಿರುವುದು ವರದಿಯಾಗಿದೆ.

ರಸ್ತೆ ಬದಿಯಲ್ಲಿ ಶವದ ಬಳಿಯಲ್ಲೇ ಕುಳಿತಿದ್ದ ಆತನ ಸಹವರ್ತಿಯನ್ನು ಮಾಧ್ಯಮದವರು ಕಂಡು ಪ್ರಶ್ನಿಸಿದಾಗ ಆತ ಈ ದಾರುಣ ಘಟನೆಯನ್ನು ಅವರಿಗೆ ವಿವರಿಸಿದ.

ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿರುವ ಇವರು ಈಶಾನ್ಯ ತಮಿಳು ನಾಡಿನ ತಿರುವಣ್ಣಮಲೈಗೆ ರಾಜ್ಯ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಇವರಲ್ಲಿ ಒಬ್ಟಾತನು ಮೃತಪಟ್ಟ. ಆಗ ಬಸ್ಸಿನ ಕಂಡಕ್ಟರ್‌ ಶವವನ್ನು ಮತ್ತು ಆ ಮೃತ ವ್ಯಕ್ತಿಯ ಸಹವರ್ತಿಯನ್ನು ಕೆಳಗೆ ಇಳಿಸಿ ರಸ್ತೆ ಪಕ್ಕದಲ್ಲೇ ಶವವನ್ನು ಮಲಗಿಸಿದ. ಬಳಿಕ ಕಂಡಕ್ಟರ್‌ ರೈಟ್‌ ಎಂದಾಗ ಚಾಲಕನು ಬಸ್ಸನ್ನು ಚಲಾಯಿಸಿಕೊಂಡು ಹೋದ.

“ನಾವು ತಲಾ 150 ರೂ. ಬಸ್‌ ಟಿಕೆಟ್‌ ದರ ಕೊಟ್ಟು ಪ್ರಯಾಣಿಸುತ್ತಿದ್ದೆವು. ಮಾರ್ಗ ಮಧ್ಯ ಈ ಘಟನೆ ಸಂಭವಿಸಿತು. ನಮ್ಮ ಹಣ ವಾಪಸ್‌ ಕೊಡಿರೆಂದು ನಾನು ಕಂಡಕ್ಟರ್‌ನಲ್ಲಿ ಗೋಗರೆದೆ. ಅದಕ್ಕೆ ಅತ ನಿರಾಕರಿಸಿದ. ನಾನೀಗ ಇಲ್ಲಿ ರಸ್ತೆ ಬದಿಯಲ್ಲಿ ಯಾವುದಾದರೂ ಅಂಬುಲೆನ್ಸ್‌ ಬರುತ್ತದೆಯೇ ಎಂದು ಕಾದು ಕೂತಿದ್ದೇನೆ; ಬೇರೆ ಯಾವುದೇ ಬಸ್ಸಿನವರು ನಮ್ಮನ್ನು ಒಯ್ಯುವುದಿಲ್ಲ’ ಎಂದು ತನ್ನ ಅಸಹಾಯಕತೆಯನ್ನು ಆತ ಹೇಳಿದ.

-ಉದಯವಾಣಿ

Comments are closed.