ಕರ್ನಾಟಕ

ಹೆಗಡೆ, ಮಧುಸೂದನ್ ಮತಾಂಧರು, ಅವಿವೇಕಿಗಳು: ಕಿಡಿ ಕಾರಿದ ಶ್ರೀನಿವಾಸ್ ಪ್ರಸಾದ್

Pinterest LinkedIn Tumblr

ಮೈಸೂರು: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ರಾಜ್ಯ ಬಿಜೆಪಿ ವಕ್ತಾರ ನಾಯಕ ಗೋ ಮಧುಸೂದನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅವರು, ಹೆಗಡೆ, ಮಧುಸೂದನ್ ಇಬ್ಬರು ಮತಾಂಧರು ಮತ್ತು ಅವಿವೇಕಿಗಳು ಎಂದು ಶನಿವಾರ ಕಿಡಿ ಕಾರಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಅವರು, ಸಂವಿಧಾನದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ನರೇಂದ್ರ ಮೋದಿ ಸರ್ಕಾರಕ್ಕೆ ಅವಮಾನ ಮಾಡಿರುವ ಈ ಇಬ್ಬರಿಗೂ ಪಕ್ಷದ ವರಿಷ್ಠರು ಎಚ್ಚರಿಕೆ ನೀಡಬೇಕು. ಇದೇ ತಪ್ಪು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಲು ನಮ್ಮಲ್ಲಿರುವ ಸಂವಿಧಾನವೇ ಕಾರಣ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಸಂವಿಧಾನವೇ ಶ್ರೇಷ್ಠ ಗ್ರಂಥ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಐದು ಸಲ ಸಂಸದರಾಗಿ ಆಯ್ಕೆಯಾಗಿರುವ ಹೆಗಡೆಗೆ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಆಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸ್ಥಾನದಲ್ಲಿ ಜವಾಬ್ದಾರಿಯಿಂದ ಇರಬೇಕಾದ ವ್ಯಕ್ತಿಗೆ ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನ ಇಲ್ಲವೇ? ಜಾತ್ಯತೀತತೆಯ ಅರ್ಥ ತಿಳಿದಿಲ್ಲವೇ? ಇವರ ಹೇಳಿಕೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟಿಸುವಂತಾಗಿದೆ ಎಂದು ತಮ್ಮ ಪಕ್ಷದ ನಾಯಕರೇ ವಿರುದ್ಧವೇ ವಾಗ್ದಾಳಿ ನಡೆಸಿದರು.

ಇನ್ನು ವಿಧಾನ ಪರಿಷತ್‌ ಸದಸ್ಯನಾಗಿದ್ದ ಗೋ ಮಧುಸೂದನ್‌ಗೆ ಇನ್ನೂ ಬುದ್ದಿ ವಿಕಾಸವಾಗಿಲ್ಲ. ಸಂವಿಧಾನದ ಬಗ್ಗೆ ಅನಾವಶ್ಯಕವಾಗಿ ಮಾತನಾಡಿ, ಅದನ್ನು ಸಮರ್ಥಿಸಿಕೊಳ್ಳುವ ಆತನಿಗೆ ನಾಚಿಕೆಯಾಗಬೇಕು ಎಂದು ಗುಡುಗಿದರು.

Comments are closed.