ಕರ್ನಾಟಕ

ಯಡಿಯೂರಪ್ಪ-ಈಶ್ವರಪ್ಪ ಮಧ್ಯೆಗಿನ ಜಟಾಪಟಿ ತಾರಕಕ್ಕೆ ! ಈಶ್ವರಪ್ಪ ವಿರುದ್ಧ ಅಮಿತ್ ಶಾಗೆ ಬಿಎಸ್ ವೈ ಪತ್ರ

Pinterest LinkedIn Tumblr

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಮೂಲಕ ಹಲವು ಸಮಾವೇಶಗಳನ್ನು ನಡೆಸುತ್ತಿರುವ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ವಿರುದ್ಧ ಬಹಿರಂಗ ಸಮರ ಸಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಈಶ್ವರಪ್ಪ ಬ್ರಿಗೇಡ್ ಸಮಾವೇಶ ನಡೆಸಿದ್ದು ಯಡಿಯೂರಪ್ಪ ಕಣ್ಣು ಮತ್ತಷ್ಟು ಕೆಂಪಾಗುವಂತೆ ಮಾಡಿದೆ.ಹೀಗಾಗಿ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಇಲ್ಲವೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ವರಿಷ್ಠರಿಗೆ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಸಮಾವೇಶಗಳಲ್ಲಿ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಈಶ್ವರಪ್ಪ ಅವರು ನೀಡಿರುವ ಹೇಳಿಕೆಗಳ ಸಿಡಿ, ವಿಡಿಯೋ ದೃಶ್ಯಾವಳಿ ಮತ್ತು ವೃತ್ತ ಪತ್ರಿಕೆಗಳ ಕಟ್ಟಿಂಗ್ಸ್ ಗಳನ್ನು ರಾಜ್ಯ ಬಿಜೆಪಿ ಉಸ್ತುವಾರಿ ಕೆ, ಮುರುಳಿಧರ್ ರಾವ್ ಅವರಿಗೆ ಯಡಿಯೂರಪ್ಪ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇನ್ನೂ ವರಿಷ್ಠರಿಗೆ ಈಶ್ವರಪ್ಪ ವಿರುದ್ಧ ಶಿಸ್ತಕ್ರಮ ಜರುಗಿಸುವಂತೆ ದೂರು ನೀಡಿದ್ದಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ ನಮ್ಮ ಕೇಂದ್ರ ನಾಯಕರು ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ದಿಢೀರ್ ಬೆಳವಣಿಗೆಯಲ್ಲಿ ಯಡಿಯೂರಪ್ಪ ಇದ್ದಕ್ಕಿದ್ದಂತೆ ಗುರುವಾರ ಸಂಜೆ ಎಂಎಲ್ ಸಿಗಳ ಸಭೆ ನಡೆಸಿದ್ದಾರೆ. ಈ ಸಭೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಅವರನ್ನು ಆಹ್ವಾನಿಸಿರಲಿಲ್ಲ, ಬಿಜೆಪಿ ಎಂ ಎಲ್ ಸಿ ಗಳ ಸಭೆ ನಡೆಸಿ ಪಕ್ಷಕ್ಕೆ ನೀವು ಅನಿವಾರ್ಯವಲ್ಲ ಎಂಬ ಪರೋಕ್ಷ ಸಂದೇಶವನ್ನು ಈಶ್ವರಪ್ಪ ಅವರಿಗೆ ಯಡಿಯೂರಪ್ಪ ರವಾನಿಸಿದ್ದಾರೆ.

ಶಿವಮೊಗ್ಗ ಪ್ರವಾಸದಲ್ಲಿರುವ ಈಶ್ವರಪ್ಪ ಎಂಎಲ್ ಸಿಗಳ ಸಭೆಗೆ ಹಾಜರಾಗಿಲ್ಲ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕಚೇರಿ ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಈ ಸಭೆ ನಡೆಸಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.

Comments are closed.