ಕರ್ನಾಟಕ

ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ನವದೆಹಲಿ: ಅನಾರೋಗ್ಯ ಪೀಡಿತರಾಗಿದ್ದ ತಾಯಿಗೆ ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಅವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಅನಂತ್ ಕುಮಾರ್ ಹೆಗ್ಡೆಯವರ ತಾಯಿಯನ್ನು ಸಿರ್ಸಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ತಾಯಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡುತ್ತಿಲ್ಲ ಎಂದು ಆರೋಪಿಸಿ ಅನಂತ್ ಕುಮಾರ್ ಅವರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ವೈದ್ಯರ ಮೇಲೆ ಹಲ್ಲೆ ನಡೆಸುತ್ತಿದ್ದ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ವಿಡಿಯೋ ಸಾಕಷ್ಟು ವಿರೋಧಗಳಿಗೆ ಕಾರಣವಾಗಿತ್ತು. ಅಲ್ಲದೆ, ಮಂಗಳೂರಿನ ವೈದ್ಯ ಸಂಘಟನೆಗಳು ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸಿತ್ತು.

ಪ್ರಕರಣ ಸಂಬಂಧ ಯಾವುದೇ ಅಧಿಕೃತ ದೂರುಗಳು ದಾಖಲಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದೀಗ ಸಂಸದ ಅನಂತ್ ಕುಮಾರ್ ಅವರ ವಿರುದ್ಧ ‘ಸುವೋ-ಮೋಟೊ’ (ಸ್ವಯಂ ಪ್ರೇರಿತ) ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ಹಿಂದೆ ಕೂಡ ಅನಂತ್ ಕುಮಾರ್ ಹೆಗ್ಡೆ ಅವರ ವಿರುದ್ಧ ಪ್ರಕರಣವೊಂದು ದಾಖಲಾಗಿದ್ದು, ಮುಸ್ಲಿಮರ ಕುರಿತಂತೆ ಹೇಳಿಕೆ ನೀಡಿದ್ದ ಕಾರಣಕ್ಕೆ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುತ್ತಿದ್ದಾರೆಂದು ಹೇಳಿ ದೂರು ದಾಖಲಾಗಿತ್ತು.

ಎಲ್ಲಿಯವರೆಗೆ ಪ್ರಪಂಚದಲ್ಲಿ ಇಸ್ಲಾಂ ಧರ್ಮ ಜೀವಂತವಾಗುರುತ್ತದೆಯೋ ಅಲ್ಲಿಯವರೆಗೂ ಭಯೋತ್ಪಾದನೆ ತೊಲಗಿಸಲು ಸಾಧ್ಯವಿಲ್ಲ. ಬಟ್ಕಳದಲ್ಲಿ ಶಾಂತಿ ಬಯಸುವುದಾದರೆ ಮೊದಲು ನಾವು ಇಸ್ಲಾಂ ಧರ್ಮವನ್ನು ವಿಶ್ವದಿಂದಲೇ ತೊಲಗಿಸಬೇಕು. ಆಗಷ್ಟೇ ಭಯೋತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದ್ದರು.

Comments are closed.