ಕರ್ನಾಟಕ

ರಾಸಲೀಲೆ ರುಚಿ ತೋರಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

Pinterest LinkedIn Tumblr

arrested1

ಶ್ರೀರಂಗಪಟ್ಟಣ: ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆಗಳಲ್ಲಿ ಹನಿ ಟ್ರ್ಯಾಪ್ ಮಾಡುವುದರ ಮೂಲಕ ಕಳ್ಳತನ ಮಾಡುತ್ತಿದ್ದ 15 ಮಂದಿಯನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ಪೋಲಿಸರು ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಬಂಧಿಸಿದ್ದಾರೆ.

ಬಂಧಿತರಾದ 15 ಮಂದಿಯಲ್ಲಿ ಇಬ್ಬರು ಯುವತಿಯವರಿದ್ದು ಅವರಲ್ಲಿ ಒಬ್ಬಳು ಮೈಸೂರಿನ ಖುಷಿ ಹಾಗೂ ಬೆಂಗಳೂರು ಆರ್ ಟಿ ನಗರದ ಪ್ರೇಮ ಎಂದು ತಿಳಿದು ಬಂದಿದೆ. ಈ ಯುವತಿಯರು ಫೇಸ್ ಬುಕ್ ಹಾಗೂ ವಾಟ್ಸಪ್ ಮೂಲಕ ಅಪರಿಚಿತರನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸ ನಂಬಿಕೆಗಳನ್ನು ಗಳಿಸಿ ನಂತರ ಅವರೊಂದಿಗೆ ಅವರ ಮನೆಗೆ ತೆರಳಿ ಮನೆಯ ಸ್ಥಿತಿ ಗತಿಗಳನ್ನು ಅಧ್ಯಯನ ಮಾಡಿ ಆ ಮಾಹಿತಿಗಳನ್ನು ತಂಡದ ಇತರೆ ಸದಸ್ಯರುಗಳಿಗೆ ತಿಳಿಸುತ್ತಿದ್ದರು. ಈ ಮಾಹಿತಿಗಳನ್ನಾದರಿಸಿದ ತಂಡವು ರಾತ್ರಿ ವೇಳೆ ಅಂತಹ ಮನೆಗಳ ಮೇಲೆ ದಾಳಿ ಮಾಡಿ ದರೋಡೆ ನಡೆಸಿ ಪರಾರಿಯಾಗುತ್ತಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರ ಪುರುಷನಿಗೆ ಈ ಇಬ್ಬರು ಯುವತಿಯರು ಹನಿಟ್ರ್ಯಾಪ್ ಮೂಲಕ ಬೆದರಿಸಿ ಆತನಿಂದ ಲಕ್ಷಾಂತರ ರೂ ಗಳನ್ನು ಪಡೆದಿದ್ದರು. ಈ ಪ್ರಕರಣದಿಂದ ಮೋಸಹೋದ ಪುರುಷ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ಈ ದೂರನ್ನು ಸವಾಲಾಗಿ ಸ್ವೀಕರಿಸಿದ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ಪೋಲಿಸರು ದರೋಡೆ ಕೋರರನ್ನು ಹಿಡಿಯುವ ಸಲುವಾಗಿ ರಾತ್ರಿ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದಾಗ ರಸ್ತೆ ಬದಿಯಲ್ಲಿ ಕಾರನ್ನು ಪರಿಶೀಲಿಸುತ್ತಿದ್ದ ಮೂರು ಮಂದಿಯನ್ನು ವಿಚಾರಿಸಿದಾಗ ಅವರು ನೀಡಿದ ಉತ್ತರದಿಂದ ಅನುಮಾನಗೊಂಡ ಪೋಲಿಸರು ಅವರನ್ನು ಠಾಣೆಗೆ ಕರೆತಂದು ಪೋಲಿಸ್ ಭಾಷೆಯಲ್ಲಿ ವಿಚಾರಿಸಿದಾಗ ನಿಜಾಂಶವನ್ನು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಅದೇ ರಸ್ತೆಯ 2 ಕಿ. ಮಿ ಅಂತರದಲ್ಲಿದ್ದ ಉಳಿದ 12 ಮಂದಿಯನ್ನು ಪೋಲಿಸರು ಬಂಧಿಸಿ ಇಂದು ಬೆಳಗ್ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪೋಲಿಸರು ಬಂಧಿಸಿತರಿಂದ 4 ಐಷರಾಮಿ ಕಾರುಗಳು 1 ರಿವಲ್ವಾರ್, 18 ಜೀವಂತ ಗುಂಡುಗಳು 4 ಮಚ್ಚುಗಳು, 16 ಲಾಂಗುಗಳು, 2 ಹಗ್ಗ, ಖಾರದ ಪುಡಿ, ಮೆಣಸಿನಪುಡಿ ಹಾಗೂ ವಿವಿಧ ರೀತಿಯ ಸ್ಪ್ರೇಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇಂದು ಬೆಳಗ್ಗೆ ಮಂಡ್ಯ ಜಿಲ್ಲಾ ಪೋಲಿಸ್ ಅಧೀಕ್ಷಕ ಸುಧೀರ್ ಕುಮಾರ್ ರೆಡ್ಡಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂದಿಸಿ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿ ಅವರುಗಳಿಗೆ ಬಹುಮಾನವನ್ನು ಘೋಷಿಸಿದ್ದಾರೆ.

Comments are closed.