ಕರ್ನಾಟಕ

ದುಷ್ಕರ್ಮಿಗಳಿಂದ ಉದ್ಯಮಿಯನ್ನು ರಕ್ಷಣೆ ಮಾಡಿದ ಪೊಲೀಸ್ ಪೇದೆಗಳ ಕಾರ್ಯಕ್ಕೆ ಶ್ಲಾಘನೆ

Pinterest LinkedIn Tumblr

po

ಬೆಂಗಳೂರು: ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಸಂಕಷ್ಟದಲ್ಲಿದ್ದ ಉದ್ಯಮಿಯೊಬ್ಬರನ್ನು ಕೇವಲ 7 ನಿಮಿಷದಲ್ಲಿಯೇ ಬೆಂಗಳೂರು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಶುಕ್ರವಾರ ಸಂಜೆ ಬಾಲಾಜಿ ಮೋಹನ್ ಎಂಬ ಉದ್ಯಮಿಯೊಬ್ಬರು ಬಾಣಸವಾಡಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಕೂಡಲೇ ಬಾಲಾಜಿಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮಾಹಿತಿ ನೀಡಿದ ಕೇವಲ 7 ನಿಮಿಷದಲ್ಲಿಯೇ ಬಾಣಸವಾಡಿ ಠಾಣೆಯ ಪೇದೆಗಳಾದ ಪೊನ್ನಣ್ಣ ಹಾಗೂ ಜಹೀದ್ ಎಂಬುವವರು ಸ್ಥಳಕ್ಕೆ ಬಂದು ಉದ್ಯಮಿಯನ್ನು ರಕ್ಷಣೆ ಮಾಡಿದ್ದಾರೆ.

ಕರ್ತವ್ಯ ಮೆರೆದ ಪೊಲೀಸರನ್ನು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಿರುವ ಬಾಲಾಜಿಯವರು, ಇಬ್ಬರೂ ಪೇದೆಗಳ ಫೋಟೋವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಾಕಿ, ಶೀಘ್ರಗತಿಯಲ್ಲಿ ಪ್ರತಿಕ್ರಿಯೆ ನೀಡಿ, ಕರ್ತವ್ಯ ಮೆರೆದ ಈ ಇಬ್ಬರೂ ಪೊಲೀಸರನ್ನು ಬೆನ್ನುತಟ್ಟಬೇಕಿದೆ. ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆಗಿಂತ ಬೆಂಗಳೂರು ಪೊಲೀಸರು ಕಡಿಮೆಯಿಲ್ಲ ಎಂದು ಹೇಳಿಕೊಂಡಿದ್ದಾರೆ.

ಬಾಲಾಜಿಯವರು ಹಾಕಿರುವ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಂಗಳೂರು ನಗರ ಪೊಲೀಸರ ಕುರಿತು ಹೊಗಳಿಕೆ ಮಹಾಪೂರವೇ ಹರಿದು ಬರುತ್ತಿದೆ.

ಈ ಬಗ್ಗೆ ಹೆಚ್ಚುವರಿ ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದು, ಈ ರೀತಿಯ ಪ್ರತಿಕ್ರಿಯೆಗಳು ನಮ್ಮ ಪ್ರಯತ್ನಗಳು ಹಾಗೂ ಕಾರ್ಯಗಳನ್ನು ಮತ್ತಷ್ಟು ಹೆಚ್ಚುವಂತೆ ಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ.

Comments are closed.