ಕರ್ನಾಟಕ

ಪೊಲೀಸರ ಸೋಗಿನಲ್ಲಿ ಬಂದು ಸಿನಿಮೀಯ ರೀತಿಯಲ್ಲಿ ‘ಮುತ್ತೂಟ್’ನ 90 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ದರೋಡೆಕೋರರು !

Pinterest LinkedIn Tumblr

2

ಬೆಂಗಳೂರು: ನಗರದ ಹೊರ ವಲಯದ ಜ್ಞಾನಗಂಗಾ ನಗರದ ಮುತ್ತೂಟ್ ಮಿನಿ ಗೋಲ್ಡ್ ಮ್ಯಾನೇಜರ್‌ನನ್ನು ಪೊಲೀಸರ ಸೋಗಿನಲ್ಲಿ ಬಂದ ಆರೇಳು ಮಂದಿ ದುಷ್ಕರ್ಮಿಗಳು ನಿನ್ನೆ ಸಂಜೆ ಅಪಹರಿಸಿ 90 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಅಪಹರಿಸಿದ ಮುತ್ತೂಟ್ ಮಿನಿ ಗೋಲ್ಡ್ ಕಚೇರಿಯ ಮ್ಯಾನೇಜರ್ ನಾಗೇಂದ್ರಪ್ಪ ಅವರನ್ನು ಇಂದು ಬೆಳಿಗ್ಗೆ ಕೆಂಗೇರಿಯ ನೈಸ್ ರಸ್ತೆಯ ಬಳಿ ಕಾರಿನಿಂದ ಕೆಳಗಿಳಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಅವರಿಗಾಗಿ ಕುಂಬಳಗೋಡು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಕುಂಬಳಗೋಡುವಿನ ನೈಸ್‌ ರಸ್ತೆಯ ಜ್ಞಾನಗಂಗಾ ನಗರದ ಮುತ್ತೂಟ್ ಮಿನಿ ಗೋಲ್ಡ್ ಕಂಪನಿಗೆ ಸಂಜೆ 6ರ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಆರೇಳು ಮಂದಿ ಪೊಲೀಸರ ಸೋಗಿನಲ್ಲಿದ್ದ ದುಷ್ಕರ್ಮಿಗಳು ತಪಾಸಣೆ ನೆಪದಲ್ಲಿ ಒಳನುಗ್ಗಿ ಮ್ಯಾನೇಜರ್ ನಾಗೇಂದ್ರಪ್ಪನನ್ನು ಬೆದರಿಸಿ ಅಪಹರಿಸಿ ಕಚೇರಿಯಲ್ಲಿದ್ದ 90 ಲಕ್ಷಕ್ಕೂ ಹೆಚ್ಚು ಮೌಲ್ಯದ ನಗದು ಚಿನ್ನಾಭರಣಗಳನ್ನು ದೋಚಿದ್ದಾರೆ.

ಎಲ್ಲವನ್ನೂ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದು, ರಾತ್ರಿಯೆಲ್ಲಾ ನಾಗೇಂದ್ರಪ್ಪನನ್ನು ಸುತ್ತಾಡಿಸಿ ಬೆಳಿಗ್ಗೆ ಕೆಂಗೇರಿಯ ನೈಸ್ ರಸ್ತೆಯ ಬಳಿ ಬಿಟ್ಟು ಹೋಗಿದ್ದಾರೆ. ನಾಗೇಂದ್ರಪ್ಪ ಅವರು ಕುಂಬಳಗೋಡು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿರುವ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಎಸ್ಪಿ ಚಂದ್ರಗುಪ್ತ ಅವರು ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.