ಕರ್ನಾಟಕ

ರುದ್ರೇಶ್‌ ಹತ್ಯೆ ಪ್ರಕರಣದ ತನಿಖೆ ಚುರುಕು: ಕರೆ ಮಾಡಿ ರುದ್ರೇಶ್‌’ನನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದ ಸ್ನೇಹಿತ …

Pinterest LinkedIn Tumblr

rudresh

ಬೆಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಆರ್. ರುದ್ರೇಶ್‌ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ  ‘ಸ್ನೇಹಿತರೊಬ್ಬರು ಕರೆ ಮಾಡಿ ರುದ್ರೇಶ್‌ ಅವರನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದರು’ ಎಂಬ ಮಾಹಿತಿ ಲಭ್ಯವಾಗಿದೆ.

‘ಕಾಮರಾಜ ರಸ್ತೆಯ ಬಿಇಒ ಕಚೇರಿ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತ ನಿಂತಿದ್ದಾಗಲೇ ಅವರನ್ನು ಕೊಲೆ ಮಾಡಲಾಗಿದೆ. ಹೀಗಾಗಿ ಕರೆ ಮಾಡಿದ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಜತೆಗೆ ರುದ್ರೇಶ್‌ ಅವರ ಮೊಬೈಲ್‌ನ ಹೊರ ಹಾಗೂ ಒಳ ಕರೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹತ್ಯೆಯಾದ ಸ್ಥಳದಲ್ಲಿ ಬೆಳಿಗ್ಗೆಯಿಂದಲೇ ಜನ ಹಾಗೂ ವಾಹನ ದಟ್ಟಣೆ ಇತ್ತು. ಅದೇ ಸಂದರ್ಭ ನೋಡಿಕೊಂಡು ಬಂದಿದ್ದ ದುಷ್ಕರ್ಮಿಗಳು, ಮಚ್ಚಿನಿಂದ ಕೊಚ್ಚಿ ದಟ್ಟಣೆ ನಡುವೆಯೇ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ’.

‘ಕೊಲೆ ಘಟನೆ ನಡೆದ ಸ್ಥಳ ಹಾಗೂ ಸುತ್ತಮುತ್ತ ಅಳವಡಿಸಿರುವ 20ಕ್ಕೂ ಹೆಚ್ಚು ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿದ್ದು, ಅದರಲ್ಲಿ ಕೆಲ ಅನುಮಾನಾಸ್ಪದ ವ್ಯಕ್ತಿಗಳು ಓಡಾಡಿದ್ದ ದೃಶ್ಯಗಳಿವೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ರುದ್ರೇಶ್‌ ಅವರ ಜತೆ ಮನಸ್ತಾಪ ಹೊಂದಿದ್ದ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ. ವೈಯಕ್ತಿಕ ಜೀವನ, ವ್ಯಾಪಾರ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆದಿದೆ. ಇದುವರೆಗೂ ಕೊಲೆ ಮಾಡಿದವರ ಬಗ್ಗೆ ನಿಖರ ಮಾಹಿತಿ ಗೊತ್ತಾಗಿಲ್ಲ’ ಎಂದು ಹೇಳಿದರು.

‘ಪಥಸಂಚಲನ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ರುದ್ರೇಶ್‌ ಅವರ ಮೊಬೈಲ್‌ಗೆ ಸ್ನೇಹಿತರೊಬ್ಬರು ಕರೆ ಮಾಡಿದ್ದರು. ಕರೆ ಕಡಿತವಾಗುತ್ತಿದ್ದಂತೆ ಮನೆಯ ಹೊರಗೆಯೇ ನಿಂತು, ‘ಸ್ವಲ್ಪ ಕೆಲಸ ಇದೆ. ಆಮೇಲೆ ಮನೆಗೆ ಬರುತ್ತೇನೆ’ ಎಂದು ಹೇಳಿ ಹೋಗಿದ್ದರು ಎಂಬುದಾಗಿ ಸಂಬಂಧಿಕರು ಹೇಳಿಕೆ ನೀಡಿದ್ದಾರೆ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಕಲ್ಪಳ್ಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಸೋಮವಾರ ನಡೆಯಿತು.
ಸಂಜೆ ಆಸ್ಪತ್ರೆಗೆ ಬಂದಿದ್ದ ರುದ್ರೇಶ್‌ ಅವರ ಕುಟುಂಬದವರ ಒಪ್ಪಿಗೆ ಪಡೆದ ವೈದ್ಯರು, ಪರೀಕ್ಷೆ ಶುರು ಮಾಡಿದರು. ಅದಾದ ಬಳಿಕ ತಡರಾತ್ರಿಯವರೆಗೂ ಪರೀಕ್ಷೆ ಮುಂದುವರಿಯಿತು.  ‘ಮೃತದೇಹವನ್ನು ಮಂಗಳವಾರ ಬೆಳಿಗ್ಗೆ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹಲಸೂರಿನ ಕಲ್ಪಳ್ಳಿ ಸ್ಮಶಾನದಲ್ಲಿ ಮಂಗಳವಾರ (ಅ.18) ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಪತ್ರ ಬರೆದಿರುವ ಅವರು, ‘ಮಿಲ್ಕ್‌ ಮೆನ್‌ ಸ್ಟ್ರೀಟ್‌ ಮನೆಯಲ್ಲಿ  ಅಂತಿಮ ದರ್ಶನಕ್ಕೆ ಮೃತದೇಹವನ್ನು ಇರಿಸಲಾಗುತ್ತಿದೆ. ಅದಾದ ಬಳಿಕ ಮೆರವಣಿಗೆ ಮೂಲಕ ಮೃತದೇಹವನ್ನು ತೆಗೆದುಕೊಂಡು ಅಂತ್ಯಕ್ರಿಯೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಡಿಜಿಪಿ ಭೇಟಿ, ಪರಿಶೀಲನೆ: ಹತ್ಯೆ ನಡೆದ ಸ್ಥಳಕ್ಕೆ ಡಿಜಿಪಿ ಓಂಪ್ರಕಾಶ್‌ ಸೋಮವಾರ ಸಂಜೆ ಭೇಟಿ ನೀಡಿದರು. ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ಹೋದ ಅವರು, ಪೊಲೀಸ್‌ ಕಮಿಷನರ್‌ ಮೇಘರಿಕ್‌ ಹಾಗೂ ಹಲವು ಅಧಿಕಾರಿಗಳ ಸಮೇತ ಸ್ಥಳಕ್ಕೆ ಬಂದರು. ಸ್ಥಳೀಯರಿಂದಲೂ ಮಾಹಿತಿ ಪಡೆಯಲು ಪ್ರಯತ್ನಿಸಿದರು. ಅಧಿಕಾರಿಗಳು ಸಹ ಘಟನೆ ಬಗ್ಗೆ ಓಂಪ್ರಕಾಶ್‌ ಅವರಿಗೆ ವಿವರಿಸಿದರು. ಜತೆಗೆ ಹತ್ಯೆ ತನಿಖೆಗೆ ರಚಿಸಲಾಗಿರುವ ತನಿಖಾ ತಂಡಗಳ ಸದಸ್ಯರು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದರು.

ನಿಷೇಧಾಜ್ಞೆ ಮುಂದುವರಿಕೆ

‘ಮುಂಜಾಗ್ರತಾ ಕ್ರಮವಾಗಿ ಅ.20ರವರೆಗೂ ಶಿವಾಜಿನಗರ, ಕಮರ್ಷಿಯಲ್‌ ಸ್ಟ್ರೀಟ್‌, ಪುಲಿಕೇಶಿನಗರ ಹಾಗೂ ಭಾರತೀನಗರ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ’ ಎಂದು ಕಮಿಷನರ್‌ ಮೇಘರಿಕ್‌ ತಿಳಿಸಿದ್ದಾರೆ.

ಸುಪಾರಿ ಹತ್ಯೆ ಪೊಲೀಸರು ಶಂಕೆ

ಹತ್ಯೆ ನಡೆದ ಮಾದರಿ ಹಾಗೂ ಕೆಲ ಅಂಶಗಳನ್ನು ಆಧರಿಸಿ ಇದೊಂದು ಸುಪಾರಿ ಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಪಲ್ಸರ್‌ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.  ಇದನ್ನು ನೋಡಿದರೆ ಹತ್ಯೆಗೂ ಮುನ್ನವೇ ಸಂಚು ರೂಪಿಸಿರಬಹುದು ಎಂಬುದು ಗೊತ್ತಾಗುತ್ತದೆ’ ಎಂದು ಕಮಿಷನರ್‌ ಎನ್‌.ಎಸ್‌. ಮೇಘರಿಕ್‌ ತಿಳಿಸಿದರು.

‘ಇದೊಂದು ಕಠಿಣ ಪ್ರಕರಣವಾಗಿದ್ದು, ಸಾಕ್ಷ್ಯಗಳ ಸಮೇತ ಆರೋಪಿಯನ್ನು ಬಂಧಿಸಬೇಕಾಗಿದೆ. ಅದಾದ ಬಳಿಕವೇ ಕೊಲೆಗೆ ಉದ್ದೇಶ ಹಾಗೂ ಅದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಗುತ್ತದೆ’ ಎಂದು ಹೇಳಿದರು.

Comments are closed.