ಕರ್ನಾಟಕ

ಕಾವೇರಿ ವಿಚಾರ ಕುರಿತು ದೇವೇಗೌಡರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ ಮೋದಿ

Pinterest LinkedIn Tumblr

devegowda

ಬೆಂಗಳೂರು: ಕಾವೇರಿ ವಿಚಾರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ತಮ್ಮನ್ನು ಸಂಪರ್ಕಿಸಿ ಪರಿಹಾರ ಸೂತ್ರ ಕಂಡುಹಿಡಿಯುವ ಭರವಸೆಯನ್ನು ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ತಮಗೆ ದೂರವಾಣಿ ಕರೆ ಮಾಡಿ ಕಾವೇರಿ ಸಮಸ್ಯೆ ಕುರಿತಂತೆ ಚರ್ಚಿಸಿದ್ದಾರೆ. ಮಾತುಕತೆಯ ವಿವರಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮೋದಿ ಅವರ ಬಗ್ಗೆ ತಮಗೆ ವಿಶ್ವಾಸವಿದೆ. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡೋಣ ಎಂದಷ್ಟೇ ಹೇಳಿದರು. ನಾಳೆ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಏನು ನಿರ್ಣಯ ಕೈಗೊಳ್ಳಲಿವೆ ಎಂಬುದನ್ನು ನೋಡೋಣ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಭಾವಚಿತ್ರಗಳಿಗೆ ಪುಪ್ಟನಮನ ಸಲ್ಲಿಸಿದ ದೇವೇಗೌಡ ಅವರು, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಈ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ಅವರ ಆದರ್ಶ ಮತ್ತು ಸಿದ್ಧಾಂತಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಬ್ಬರು ನಾಯಕರು ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ್ದಾರೆ. ಅವರೆಂದೂ ಸ್ವಾರ್ಥ ಸಾಧನೆಗಾಗಿ ಚಿಂತಿಸಿದವರಲ್ಲ. ಅವರು ನಮಗೆಲ್ಲರಿಗೂ ದಾರಿದೀಪವಾಗಿದ್ದಾರೆ. ಯುವ ಪೀಳಿಗೆಗೆ ಈ ವಿಚಾರಗಳನ್ನು ತಿಳಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶರವಣ, ಉಪಮೇಯರ್ ಎಂ. ಆನಂದ್, ಮಾಜಿ ಉಪಮೇಯರ್ ಹೇಮಲತಾ ಮುಂತಾದವರು ಪಾಲ್ಗೊಂಡಿದ್ದರು.

Comments are closed.