ಕರ್ನಾಟಕ

ಅಮ್ನೆಸ್ಟಿ ಕಚೇರಿಗೆ ನುಗ್ಗಲು ಎಬಿವಿಪಿ ಕಾರ್ಯಕರ್ತರ ಯತ್ನ; ಲಾಠಿ ಚಾರ್ಜ್: ಹಲವಾರು ಮಂದಿಗೆ ಗಾಯ

Pinterest LinkedIn Tumblr

Lathicharge

ಬೆಂಗಳೂರು: ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಹೋರಾಟ ತೀವ್ರ ಗೊಳಿಸಿರುವ ಎಬಿವಿಪಿ ಕಾರ್ಯಕರ್ತರು ನಗರದ ಇಂದಿರಾನಗರದ ಅಮ್ನೆಸ್ಟಿ ಸಂಘಟನೆ ಕಚೇರಿಗೆ ಏಕಾಎಕಿ ನುಗ್ಗಲು ಯತ್ನಿಸಿದಾಗ ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ 20ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ವೀಣಾ,ಅಭಿಜಿತ್,ಮಂಜುನಾಥ್‌ರೆಡ್ಡಿ,ಗವಿ ಸಿದ್ದೇಶ್ ಅವರ ಸ್ಥಿತಿ ಗಂಭೀರವಾಗಿದೆ ಪ್ರತಿಭಟನೆ ನಡೆಸುತ್ತಿದ್ದ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

ರಾಜಭವನ ರಸ್ತೆ,ಮೈಸೂರು ಬ್ಯಾಂಕ್ ವೃತ್ತ,ಮಲ್ಲೇಶ್ವರಂ ಇನ್ನಿತರ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರು ಇಂದು ಏಕಾಎಕಿ ಇಂದಿರಾನಗರದಲ್ಲಿರುವ ಅಮ್ನೆಸ್ಟಿ ಸಂಸ್ಥೆ ಕಚೇರಿ ಬಳಿ ಜಮಾಯಿಸಿ ಪ್ರತಿಭಟನೆ ನಡೆಸ ತೊಡಗಿದರು.

ಕಾರ್ಯಕರ್ತರು ಜಮಾಯಿಸಿದ್ದನ್ನು ಚಿತ್ರೀಕರಣ ಮಾಡಲು ಅಮ್ನೆಸ್ಟಿ ಸಂಘಟನೆಯವರು ಮುಂದಾದಾಗ ಆಕ್ರೋಶಗೊಂಡ ಕಾರ್ಯಕರ್ತರು ಕಚೇರಿಯ ಒಳನುಗ್ಗಲು ಮುಂದಾದರು,ಎಬಿವಿಪಿ ಕಾರ್ಯಕರ್ತರು ಕಚೇರಿಗೆ ನುಗ್ಗುವ ಮಾಹಿತಿ ತಿಳಿದ ಕೂಡಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿ ಧಾವಿಸಿ ಬ್ಯಾರಿಕೇಡ್‌ಗಳನ್ನು ಹಾಕಿ ಕಚೇರಿಗೆ ನುಗ್ಗದಂತೆ ತಡೆದರು.

ಪೊಲೀಸರ ಕ್ರಮಕ್ಕೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳ ತಡೆಯನ್ನು ತಳ್ಳಿ ಒಳನುಗ್ಗಲು ಯತ್ನಿಸಿದರು ಕೆಲವು ವಿದ್ಯಾರ್ಥಿನಿಯರೇ ಪೊಲೀಸರ ವಿರುದ್ಧವೇ ತಿರುಗಿಬಿದ್ದು ಅವರ ವಿರುದ್ದವೂ ಘೋಷಣೆಗಳನ್ನು ಕೂಗುತ್ತಾ ಕೆಳಕ್ಕೆ ಬಿದ್ದು ಉರುಳಾಡಿದರು.

ಈಸಂದರ್ಭದಲ್ಲಿ ಉಂಟಾದ ತಳ್ಳಾಟ ನೂಕಾಟದಲ್ಲಿ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡರು ಅದರಲ್ಲಿ ವೀಣಾ ಎಂಬ ವಿದ್ಯಾರ್ಥಿನಿ ಕೆಳಗೆಬಿದ್ದು ತಲೆಗೆ ಬ್ಯಾರಿಕೇಡ್‌ನ ಕಂಬಿ ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡರು.

ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದು ಇದಕ್ಕೆ ಮಣಿಯದೇ ಕಚೇರಿಗೆ ಕಾರ್ಯಕರ್ತರು ನುಗ್ಗಲು ಯತ್ನಿಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಅವರಲ್ಲಿದ್ದ ವಿದ್ಯಾರ್ಥಿನಿಯರನ್ನು ನಿಭಾಯಿಸುವುದು ಪೊಲೀಸರಿಗೆ ಸಾಧ್ಯವಾಗಲಿಲ್ಲ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಮಾತನಾಡಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ಮತ್ತೆ ವಿದ್ಯಾರ್ಥಿಗಳು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆಸಿದ ಲಾಠಿ ಪ್ರಹಾರದಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು ಅದಕ್ಕೆ ಪೊಲೀಸರೇ ಹೊಣೆಗಾರರಾಗಿದ್ದು ಪೊಲೀಸರು ಎಷ್ಟೇ ದೌರ್ಜನ್ಯ ನಡೆಸಲಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸೇನೆ ವಿರುದ್ಧ ಘೋಷಣೆ ಕೂಗಿದವರನ್ನು ಬಂಧಿಸುವಂತೆ ನಾವು ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸಿದ್ದೇವೆ ಆದರೂ ಇಲ್ಲಿಯವರೆಗೆ ಯಾವೊಬ್ಬ ದೇಶ ದ್ರೋಹಿಯನ್ನು ಬಂಧಿಸಿಲ್ಲ ಸೇನೆ ವಿರೋಧಿ ಘೋಷಣೆ ಕೂಗಲು ಕಾರಣರಾದ ಅಮ್ನೆಸ್ಟಿ ಸಂಘಟನೆಯನ್ನು ನಿಷೇಧಿಸಲು ಸರ್ಕಾರ ಮುಂದಾಗಿಲ್ಲ ಎಂದು ದೂರಿದರು.

ಪ್ರತಿಭಟನೆಯ ಹಿನ್ನಲೆಯಲ್ಲಿ ಅಮ್ನೆಸ್ಟಿ ಸಂಘಟನೆ ಕಚೇರಿ ಬಳಿ ಅಮ್ನೆಸ್ಟಿ ಸಂಘಟನೆಯವರು ಚಿತ್ರೀಕರಣ ಮಾಡಲು ಮುಂದಾದಾಗ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಚೇರಿಗೆ ನುಗ್ಗಲು ಯತ್ನಿಸಿದರು ಎಂದು ಬಿದರೆ ತಿಳಿಸಿದ್ದಾರೆ.

Comments are closed.