ಕರ್ನಾಟಕ

ಮುಂದುವರೆದ ರಾಜಕಾಲುವೆ ಒತ್ತುವರಿ ತೆರವು : ನೂರಾರು ಮನೆಗಳು ನೆಲಸಮ

Pinterest LinkedIn Tumblr

bbmp

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ತಡೆಗೆ ಹೈಕೋರ್ಟ್ ನಕಾರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿಯಿಂದ ಮುಂದುವರಿದ ತೆರವು ಕಾರ್ಯಾಚರಣೆ ಭರ್ಜರಿಯಾಗಿತ್ತು. ನಿನ್ನೆ ಕೊಂಚ ಬಿಡುವಾಗಿದ್ದ ತೆರವು ಕಾರ್ಯಾಚರಣೆ ಇಂದು ಬಿರುಸಿನಿಂದ ಸಾಗಿತ್ತು. ಯಲಹಂಕ, ಮಹದೇವಪುರ, ಬೊಮ್ಮನಹಳ್ಳಿ, ಕೆಆರ್ ಪುರ ಸೇರಿದಂತೆ ಹಲವೆಡೆ ರಾಜಕಾಲುವೆ ಒತ್ತುವರಿ ತೆರವು ಮಾಡಿಕೊಂಡಿದ್ದ ನೂರಕ್ಕೂ ಹೆಚ್ಚು ಕಟ್ಟಡಗಳನ್ನು ಜೆಸಿಬಿಗಳ ಮೂಲಕ ಧ್ವಂಸಗೊಳಿಸಿ ತೆರವುಗೊಳಿಸಲಾಯಿತು.

ಜೆಸಿಬಿಗಳು, ಹಿಟಾಚಿಗಳು, ಟಿಪ್ಪರ್ ಲಾರಿಗಳು ಸದ್ದು ಮಾಡಿದವು. ಎಂದಿನಂತೆ ಮನೆ ಕಟ್ಟಿಕೊಂಡವರು ಪಾಲಿಕೆ ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಸಿದರಾದರೂ ಪೊಲೀಸ್ ರಕ್ಷಣೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿತ್ತು. ಜತೆಜತೆಯಲ್ಲೇ ರಾಜಕಾಲುವೆ ಸರ್ವೆ ಕಾರ್ಯವೂ ಕೂಡ ನಡೆದಿತ್ತು.

ಬೊಮ್ಮನಹಳ್ಳಿಯ ಅವನಿ ಶೃಂಗೇರಿಯಲ್ಲಿ ಇಂದು ಕೂಡ ಮನೆಗಳನ್ನು ತೆರವು ಮಾಡುವ ಕಾರ್ಯಾಚರಣೆ ಮುಂದುವರಿದಿತ್ತು. ಮನೆ ಮಾಲೀಕರು ತಮ್ಮ ತಮ್ಮ ಮನೆಗಳನ್ನು ತಾವೇ ತೆರವುಗೊಳಿಸುತ್ತಿದ್ದರು. ನಿನ್ನೆ ಮನೆ ಮಾಲೀಕರು, ಅಪಾರ್ಟ್‍ಮೆಂಟ್ ನಿವಾಸಿಗಳು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಅರ್ಧಕ್ಕೇ ವಾಪಸಾಗಿದ್ದರು. ಇಂದು ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿದರು. ದೊಡ್ಡಬೊಮ್ಮಸಂದ್ರ ವೃತ್ತದಲ್ಲಿ ಬಿಗುವಿನ ವಾತಾವರಣವಿತ್ತು. ಈ ಭಾಗದಲ್ಲಿ ಒತ್ತುವರಿ ತೆರವು ಮಾಡಬಾರದೆಂದು ನೂರಾರು ಜನ ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು. ಸ್ಥಳದಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ಯಲಹಂಕ ವಲಯದ ದೊಡ್ಡಬೊಮ್ಮಸಂದ್ರದಲ್ಲಿ 33 ಅಡಿ ಅಗಲದ ರಾಜಕಾಲುವೆ ಸುಮಾರು 1.5ಕಿಮೀಗೂ ಹೆಚ್ಚು ಉದ್ದ ಒತ್ತುವರಿಯಾಗಿತ್ತು. 60ಕ್ಕೂ ಹೆಚ್ಚು ಮನೆಗಳ ತೆರವಿಗೆ ಗುರುತು ಮಾಡಲಾಗಿತ್ತು. ಯಲಹಂಕ ಜಂಟಿ ಆಯುಕ್ತ ಸರ್ಫ್‍ರಾಜ್‍ಖಾನ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಹಳೆ ಸರ್ವೆ ಪ್ರಕಾರ ಒತ್ತುವರಿ ತೆರವು ಮಾಡಲಾಗುತ್ತಿದೆ. ಹೊಸ ಸರ್ವೆ ಪ್ರಕಾರ ನಾವು ಮನೆ ಕಟ್ಟಿಕೊಂಡಿದ್ದೇವೆ. ನೀವು ಹಣ ಪಡೆದುಕೊಂಡು ಅಮಾಯಕರ ಮನೆ ಕೆಡವುತ್ತಿದ್ದೀರ ಎಂದು ಆರೋಪ ವ್ಯಕ್ತಪಡಿಸಿದರು.

ಹೊಸದಾಗಿ ಸರ್ವೆ ಮಾಡಿದ ಬಿಬಿಎಂಪಿ ಅಧಿಕಾರಿಗಳು ನಕ್ಷೆ ಬದಲಿಸಿದ್ದಾರೆ ಎಂದು ಸುಮಾರು 30 ಮನೆಯವರು ತೆರವಿಗೆ ಅವಕಾಶ ಕೊಡದೆ ಪ್ರತಿರೋಧ ವ್ಯಕ್ತಪಡಿಸಿದ್ದು ಕಂಡುಬಂತು. ಬಿಬಿಎಂಪಿ ಸಿಬ್ಬಂದಿ ಇದಾವುದಕ್ಕೂ ಬಗ್ಗಲಿಲ್ಲ. ಉಳಿದ ಮನೆಯವರು ಸಾಮಾನು-ಸರಂಜಾಮುಗಳನ್ನು ಹೊರಗಿಟ್ಟುಕೊಂಡು ತೆರವು ಕಾರ್ಯಕ್ಕೆ ಸಹಕರಿಸುತ್ತಿದ್ದರು. ಯಾವುದೇ ಪ್ರಭಾವಕ್ಕೆ ಒಳಗಾಗದೆ ರಾಜಕಾಲುವೆ ಒತ್ತುವರಿ ತೆರವು ಕೈಗೊಳ್ಳಲಾಗುವುದು. ಒತ್ತುವರಿಯಾಗಲು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಯಲಹಂಕ ವಲಯ ಜಂಟಿ ಆಯುಕ್ತ ಸರ್ಫ್‍ರಾಜ್‍ಖಾನ್ ತಿಳಿಸಿದರು. ತೆರವು ಕಾರ್ಯದ ಅವಶೇಷಗಳನ್ನು ಶೀಘ್ರ ಬೇರೆಡೆಗೆ ಸಾಗಿಸಲಾಗುವುದು. ಕೆರೆಗಳಿಗೆ ತ್ಯಾಜ್ಯ ನೀರು ಹೋಗುವುದನ್ನು ಸಂಪೂರ್ಣವಾಗಿ ತಪ್ಪಿಸಲಾಗುವುದು ಎಂದು ತಿಳಿಸಿದರು.

Comments are closed.