
ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಿದ್ದು, ಇದರ ಪರಿಣಾಮ ಬಸ್ಸಿನಲ್ಲಿ ಸಂಚರಿಸುವ ಸಾಮಾನ್ಯ ಜನ ಜೀವನದ ಮೇಲಾಗಿದೆ.ಅಲ್ಲಲ್ಲಿ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿದೆ.
ಬೆಂಗಳೂರು ನಗರದಲ್ಲಿ 64 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ವರದಿ ಬಂದಿದೆ. ವೊಲ್ವೊ, ರಾಜಹಂಸ ಮೊದಲಾದ ಬಸ್ಸುಗಳನ್ನು ಹಾನಿ ಮಾಡಿದ ಘಟನೆಗಳು ಬೆಂಗಳೂರಿನ ಕೆ.ಜಿ.ರಸ್ತೆ, ಯಶವಂತಪುರ, ಮೈಸೂರು ಬ್ಯಾಂಕ್ ವೃತ್ತ, ತುಮಕೂರು ರಸ್ತೆಯ ಜಿಂದಾಲ್ ಬಳಿ ವರದಿಯಾಗಿದೆ. ಇನ್ನು ಯಾದಗಿರಿ, ವಿಜಯಪುರಗಳಲ್ಲಿ ಸಂಚಾರ ನಡೆಸಿದ ರಾಜ್ಯ ಸಾರಿಗೆ ಬಸ್ಸುಗಳನ್ನು ದುಷ್ಕರ್ಮಿಗಳು ಕಲ್ಲು ಎಸೆದು ಜಖಂಗೊಳಿಸಿದ ಘಟನೆ ನಡೆದಿದೆ.
ಸರ್ಕಾರಿ ಬಸ್ಸುಗಳಿಲ್ಲದ ಹಿನ್ನೆಲೆಯಲ್ಲಿ ಖಾಸಗಿ ಬಸ್ಸು, ವ್ಯಾನುಗಳ ದರ್ಬಾರು ಜೋರಾಗಿದೆ. ಪರಿಸ್ಥಿತಿಯ ಲಾಭ ಪಡೆದುಕೊಂಡು ಪ್ರಯಾಣಿಕರಿಂದ ದುಪ್ಪಟ್ಟು ದರ ಪಡೆಯುತ್ತಿದ್ದಾರೆ ಎಂಬ ದೂರು ಪ್ರಯಾಣಿಕರಿಂದ ರಾಜ್ಯದ ಅಲ್ಲಲ್ಲಿ ಕೇಳಿಬರುತ್ತಿದೆ.
ಬೆಂಗಳೂರು ನಗರ, ಗ್ರಾಮಾಂತರ, ಧಾರವಾಡ, ಬಳ್ಳಾರಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಿತ್ರದುರ್ಗ, ಮಂಡ್ಯ, ರಾಮನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಹಾವೇರಿ, ಉತ್ತರ ಕನ್ನಡ, ಚಿಕ್ಕಮಗಳೂರು, ಯಾದಗಿರಿಗಳಲ್ಲಿ ಇಂದು ಮಾತ್ರ ರಜೆ ನೀಡಲಾಗಿದೆ.ಇನ್ನು ಹಾಸನ, ದಕ್ಷಿಣ ಕನ್ನಡ, ಚಾಮರಾಜನಗರ, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಿಲ್ಲ.
Comments are closed.