ಕರ್ನಾಟಕ

ಎಲ್ಲಾ ಬೇಡಿಕೆ ಈಡೇರಿಕೆ ಅಸಾಧ್ಯ, ಮುಷ್ಕರ ಕೈಬಿಡದಿದ್ದರೆ ಪರ್ಯಾಯ ಕ್ರಮ : ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Pinterest LinkedIn Tumblr

CM-Siddaramaiah

ಮೈಸೂರು: ಸಾರಿಗೆ ಸಿಬ್ಬಂದಿ ಮುಷ್ಕರ ಕೈಗೊಂಡಿರುವ ಕ್ರಮ ಸರಿಯಲ್ಲ, ಒಂದು ವೇಳೆ ಮುಷ್ಕರ ನಡೆಸಿದರೆ ಪರ್ಯಾಯ ಕ್ರಮಕೈಗೊಳ್ಳುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇನ್ನೂ ಎರಡು ದಿನಗಳ ಕಾಲಾವಕಾಶವಿದೆ. ಅಷ್ಟರಲ್ಲಿ ಸಾರಿಗೆ ಸಿಬ್ಬಂದಿ ಮನಸ್ಸು ಬದಲಿಸಿದರೆ ಎಲ್ಲವೂ ಸರಿಯಾಗಲಿದೆ. ಒಂದು ವೇಳೆ ಮುಷ್ಕರದ ಹಾದಿಹಿಡಿದರೆ ನಾವು ಪ್ರಯಾಣಿಕರ ಹಿತದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ ಎಂದರು. ಕೆಎಸ್‍ಆರ್‍ಟಿಸಿ ನೌಕರರು ಬೇಡಿಕೆ ಇಟ್ಟಿರುವ ಶೇ.35ರಷ್ಟು ವೇತನ ಪರಿಷ್ಕರಣೆಯನ್ನು ಸದ್ಯಕ್ಕೆ ಈಡೇರಿಸಲು ಸಾಧ್ಯವಿಲ್ಲ. ಪ್ರಯಾಣಿಕರಿಗೆ ಮುಷ್ಕರದಿಂದ ತೊಂದರೆಯಾಗದಂತೆ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು.

ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಸಾರಿಗೆ ಸಿಬ್ಬಂದಿಗೆ ಶೇ.8ರಷ್ಟು ವೇತನ ಪರಿಷ್ಕರಣೆ ಮಾಡಲು ಆದೇಶಿಸಲಾಗಿದೆ. ಇದಕ್ಕೆ ನೌಕರರು ಒಪ್ಪದ ಕಾರಣ ನಿನ್ನೆ ಕೆಎಸ್‍ಆರ್‍ಟಿಸಿ ನೌಕರರ ಸಂಘಗಳ ಮುಖಂಡರ ಸಭೆಯಲ್ಲಿ ಶೇ.10ರಷ್ಟು ವೇತನ ಪರಿಷ್ಕರಣೆ ಮಾಡುವುದಾಗಿ ಹೇಳಿದ್ದೆವು. ಆದರೆ ಅವರು ಶೇ.32ರಷ್ಟು ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಸದ್ಯಕ್ಕೆ ಇದನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದರು.

ಬಿಜೆಪಿ ಇಬ್ಬಗೆ ನೀತಿ : ಗುಜರಾತ್‍ನಲ್ಲಿ ಬಿಜೆಪಿಯವರ ದುರ್ನಡತೆ ಹೆಚ್ಚಾಗಿದೆ. ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು. ಗೋವಾ ಮತ್ತು ಕೇರಳದಲ್ಲಿ ಗೋಹತ್ಯೆ ನಡೆಯುತ್ತಿದ್ದರೂ ಕೂಡ ಬಿಜೆಪಿ ಬೆಂಬಲಿಸುತ್ತಿದೆ. ಆದರೆ ಇತರೆ ರಾಜ್ಯಗಳಲ್ಲಿ ಗೋಹತ್ಯೆ ನಡೆದರೆ ವಿರೋಧ ವ್ಯಕ್ತಪಡಿಸುತ್ತಾರೆ. ಇದು ಅವರ ಇಬ್ಬಗೆ ನೀತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.ಬಿಎಸ್‍ಪಿ ಮುಖಂಡರಾದ ಮಾಯಾವತಿ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದರು. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು ಎಂದು ಹೇಳಿದರು.

Comments are closed.