ಪ್ರಮುಖ ವರದಿಗಳು

ರೈತರ ಸಾವಿಗೆ ದೆವ್ವ-ಭೂತಗಳು ಕಾರಣವಂತೆ ! ಇದು ಮಧ್ಯಪ್ರದೇಶ ಸರ್ಕಾರದ ಬೇಜವಾಬ್ದಾರಿ ಹೇಳಿಕೆ

Pinterest LinkedIn Tumblr

farmer

ನವದೆಹಲಿ: ರೈತರ ಸರಣಿ ಸಾವಿಗೆ ಕಾರಣ ಸಾಲಬಾಧೆ ಮತ್ತು ಬೆಳೆ ನಾಶ ಕಾರಣ ಅಲ್ಲ ದೆವ್ವ-ಭೂತಗಳು ಕಾರಣ ಎಂದು ಮಧ್ಯ ಪ್ರದೇಶ ಸರ್ಕಾರ ಬೇಜವಾಬ್ದಾರಿ ಹೇಳಿಕೆ ನೀಡಿದೆ.

ಮಧ್ಯ ಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಳಿಂದ ಸುಮಾರು 400ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ನಿನ್ನೆ ಮಧ್ಯ ಪ್ರದೇಶ ಸದನದಲ್ಲಿ ನಡೆದ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶೈಲೈಂದರ್ ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿರುವ ಉತ್ತರ “ದೆವ್ವ”…. ಹೌದು ಸೆಹೋರ್ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ನಡೆದಿರುವ ರೈತರ ಆತ್ಮಹತ್ಯೆಗೆ ದೆವ್ವ ಮತ್ತು ಭಾನಾಮತಿ ಕಾಟವೇ ಕಾರಣ ಎಂದು ಸರ್ಕಾರ ಸದನಕ್ಕೆ ಲಿಖಿತ ಉತ್ತರ ನೀಡಿದೆ.

ಸೆಹೋರ್ ಜಿಲ್ಲೆಯಲ್ಲಿ ನಡೆದ 418 ರೈತ ಆತ್ಮಹತ್ಯೆ ಪ್ರಕರಣಗಳ ಪೈಕಿ 117 ಆತ್ಮಹತ್ಯೆ ಪ್ರಕರಣಗಳು ದೆವ್ವ-ಭೂತ ಮತ್ತು ಭಾನಾಮತಿ ಕಾರಣ ಎಂದು ಮಧ್ಯ ಪ್ರದೇಶದ ಗೃಹ ಸಚಿವ ಭೂಪೇಂದರ್ ಸಿಂಗ್ ಠಾಕೂರ್ ಉತ್ತರಿಸಿದ್ದಾರೆ. ಗೃಹ ಸಚಿವ ಉತ್ತರ ನೀಡುತ್ತಿದ್ದಂತೆಯೇ ಇಡೀ ಸದನವೇ ಒಂದು ಕ್ಷಣ ಅವಾಕ್ಕಾಗಿ ಹೋಯಿತು. ಬಳಿಕ ಸಾವರಿಸಿಕೊಂಡ ಸದಸ್ಯರು ಈ ಬಗ್ಗೆ ಗೃಹ ಸಚಿವರು ಹೆಚ್ಚಿನ ಮಾಹಿತಿಗೆ ಆಗ್ರಹಿಸಿದರು.

ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಗೃಹ ಸಚಿವ ಭೂಪೇಂದರ್ ಸಿಂಗ್ ಠಾಕೂರ್ ಅಧಿಕಾರಿಗಳಿಂದ ಮಾಹಿತಿ ಪಡೆದು ಉತ್ತರಿಸುತ್ತೇನೆ ಎಂದು ಜಾರಿಕೊಂಡರು.

ಇನ್ನು ಭೂಪೇಂದರ್ ಸಿಂಗ್ ಠಾಕೂರ್ ಅವರ ಉತ್ತರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಕಾಂಗ್ರೆಸ್ ಸದಸ್ಯ ಪಾಟೀಲ್ ಅವರು, ಅತ್ತ ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದ ಕನಸು ತೋರಿಸುತ್ತಿದ್ದಾರೆ. ಇತ್ತ ಅವರದ್ದೇ ಮಧ್ಯ ಪ್ರದೇಶ ಸರ್ಕಾರ ರೈತರ ಸಾವಿಗೆ ದೆವ್ವ-ಭೂತದ ಕಥೆ ಕಟ್ಟುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ರೈತರ ಸಾವಿಗೆ ಸರ್ಕಾರವೇ ನೈತಿಕ ಹೊಣೆ ಹೊತ್ತು ರೈತರಿಗೆ ಪರಿಹಾರಧನ ನೀಡಬೇಕು ಎಂದು ಹೇಳಿದ್ದಾರೆ.

ಒಟ್ಟಾರೆ ಮಧ್ಯ ಪ್ರದೇಶ ಸರ್ಕಾರದ ಈ ಹೇಳಿಕೆ ಇದೀಗ ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ಜಬಾಬ್ದಾರಿಯುತ ಸ್ಥಾನದಲ್ಲಿರುವ ಭೂಪೇಂದರ್ ಸಿಂಗ್ ಠಾಕೂರ್ ಅವರ ಈ ಹೇಳಿಕೆಗೆ ನಗಬೇಕೋ ಅಥವಾ ಅಳಬೇಕೋ ತಿಳಿಯುತ್ತಿಲ್ಲ.

Comments are closed.