ನವದೆಹಲಿ: ಅಮೆರಿದ ದೈತ್ಯ ಸಂಸ್ಥೆ ಗೂಗಲ್ 2016ನೇ ಸಾಲಿನ ಕಮ್ಯುನಿಟಿ ಇಂಪ್ಯಾಕ್ಟ್ ಅವಾರ್ಡ್ ಘೊಷಣೆ ಮಾಡಿದ್ದು, ಚೆನ್ನೈ ಮೂಲದ ಹದಿನಾಲ್ಕು ವರ್ಷದ ಬಾಲಕ ಅದ್ವಾಯ್ ರಮೇಶ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ರಮೇಶ್ ಏಷ್ಯಾದಲ್ಲಿಯೇ ಈ ಪ್ರಶಸ್ತಿಗೆ ಭಾಜನರಾದ ಮೊದಲಿಗ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ. ಒಟ್ಟು 107 ಪ್ರಾಜೆಕ್ಟ್ಗಳು ಈ ವರ್ಷ ಗೂಗಲ್ ಸಂಸ್ಥೆಗೆ ಸಲ್ಲಿಕೆಯಾಗಿದ್ದವು. ಇದರಲ್ಲಿ ಭಾರತೀಯ ಬಾಲಕ ರಮೇಶ್ ಅವರು ಎಲ್ಲರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂತಿಮ ಹಂತದ ಪ್ರವೇಶ ಪಡೆದ 20 ಮಂದಿ ಸ್ಪರ್ಧಾಳುಗಳಿಗೆ ತಲಾ 50,000 ಡಾಲರ್ ಶಿಷ್ಯವೇತನವನ್ನೂ ಗೂಗಲ್ ಪ್ರಕಟಿಸಿದೆ.
ಪರಿಸರ, ಆರೋಗ್ಯ ಸಂಪನ್ಮೂಲಗಳ ಸವಾಲುಗಳನ್ನು ಯಾವರೀತಿ ಎದುರಿಸಬಹುದು ಎಂಬ ವಿಷಯದ ಆಧಾರದ ಮೇಲೆ ಈ ಪ್ರಾಜೆಕ್ಟ್ಗಳನ್ನು ರೂಪಿಸಲಾಗಿದೆ. ‘ಫಿಶರ್ವೆುನ್ ಲೈಫ್ಲೈನ್ ಟರ್ವಿುನಲ್’ (ಎಫ್ ಇ ಎಲ್ ಟಿ) ಶೀರ್ಷಿಕೆಯ ಯೋಜನೆಗೆ ಹತ್ತು ಸಾವಿರ ಡಾಲರ್ ( 6 ಲಕ್ಷ 72 ಸಾವಿರ ರೂ.) ಬಹುಮಾನವನ್ನು ಅದ್ವಾಯ್ ಪಡೆದಿದ್ದಾರೆ. ಇದರ ಜತೆಗೆ ಅಮೆರಿಕದ ಸೈಂಟಿಫಿಕ್ ಅಮೆರಿಕನ್ ಸಂಸ್ಥೆಯಿಂದ ಒಂದು ವರ್ಷದ ಗೂಗಲ್ ಸದಸ್ಯತ್ವವನ್ನು ಪಡೆದಿದ್ದಾರೆ.
ಅದ್ವಾಯ್ ರೂಪಿಸಿದ ಪ್ರಾಜೆಕ್ಟ್ ಮೀನುಗಾರರ ಹಿತರಕ್ಷಣೆ ಮಾಡಲಿದ್ದು, ಜಿಪಿಎಸ್ ತಂತ್ರಜ್ಞಾನ ಉಪಯೋಗಿಸಿಕೊಂಡು ಯಾವರೀತಿ ಮೀನುಗಾರರನ್ನು ಸಂಕಷ್ಟದಿಂದ ಪಾರುಮಾಡಬಹುದು ಹಾಗೂ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಬಹುದು ಎನ್ನುವುದನ್ನು ತಿಳಿಸುತ್ತದೆ. ಈ ಕುರಿತು ಅದ್ವಾಯ್ ಪ್ರತಿಕ್ರಿಯಿಸಿ, ಈ ಗೌರವದಿಂದ ನನಗೆ ಇನ್ನಷ್ಟು ಪ್ರೋತ್ಸಾಹ ದೊರಕಿದೆ. ಭವಿಷ್ಯದಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನನ್ನ ಮುಂದಿನ ಸಂಶೋಧನೆ ನಡೆಯಲಿದೆ ಎಂದು ತಿಳಿಸಿದ್ದಾರೆ.
Comments are closed.