ಬೆಂಗಳೂರು: ಸ್ಕೇಟ್ ಕಟ್ಟಿಕೊಂಡು ಕಾರುಗಳ ಅಡಿಯಲ್ಲಿ ಸ್ಕೇಟಿಂಗ್ ಮಾಡುವ ಪುಟ್ಟ ಪೋರನ ಸಾಹಸ ಕಂಡು ಪ್ರೇಕ್ಷಕರು ನಿಬ್ಬೆರಗಾದರು. ಕಾಲು ಅಗಲಿಸಿ, ನೆಲಕ್ಕೆ ಎದೆಕೊಟ್ಟು ವೇಗವಾಗಿ ಸ್ಕೇಟ್ ಮಾಡಿ, 30 ಸೆಕೆಂಡ್ಗಳಲ್ಲಿ 36 ಕಾರುಗಳ ಕೆಳಗೆ ಹಾದು ಬರುವ ಮೈನವಿರೇಳಿಸುವ ಸಾಹಸ ಪ್ರದರ್ಶಿಸಿದ್ದು ಆರೂವರೆ ವರ್ಷದ ಬಾಲಕ ಓಂ ಸ್ವರೂಪ್ ಗೌಡ.
ಬಸವೇಶ್ವರನಗರದ ನಿವಾಸಿ ಸುನೀತಾ ಮತ್ತು ಯೋಗೀಶ್ ಗೌಡ ಅವರ ಪುತ್ರ ಓಂ ಸ್ವರೂಪ ಒರಾಯನ್ ಮಾಲ್ನ ರ್ಪಾಂಗ್ಪ್ರದೇಶದಲ್ಲಿ ನಿಲ್ಲಿಸಿದ್ದ 36 ಟಾಟಾ ಸುಮೋ ವಾಹನಗಳ ಕೆಳಭಾಗದಿಂದ 30 ಸೆಕೆಂಡ್ಗಳಲ್ಲಿ ಹಾದು ಲಿಂಬೋ ಸ್ಕೇಟಿಂಗ್ನಲ್ಲಿ ಗಿನ್ನೆಸ್ ದಾಖಲೆ ಸಾಧಿಸಿದ್ದಾನೆ.
ಕಿರಿ ವಯಸ್ಸಿನಲ್ಲೇ ಅಭ್ಯಾಸ ಆರಂಭ: ನಾಲ್ಕೂವರೆ ವರ್ಷ ವಯಸ್ಸಿನಿಂದಲೇ ಓಂ ಸ್ವರೂಪಗೆ ಪಾಲಕರು ಸ್ಕೇಟಿಂಗ್ ತರಬೇತಿ ಕೊಡಿಸಲು ಆರಂಭಿಸಿದ್ದರು. ಅಭ್ಯಾಸ ಆರಂಭಿಸಿದ ಒಂದು ವರ್ಷದ ಅವಧಿಯಲ್ಲೇ ಪುಟ್ಟ ಪೋರ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲಾರಂಭಿಸಿ ಬೆರಗು ಮೂಡಿಸಿದ್ದ. ಪುತ್ರನ ಸಾಧನೆಯಿಂದ ಹಿಗ್ಗಿದ ಪಾಲಕರು ಸ್ಕೇಟಿಂಗ್ನಲ್ಲಿ ಮುಂದುವರಿಯಲು ಆತನನ್ನು ಪ್ರೋತ್ಸಾಹಿಸಿದರು. ತತ್ಪರಿಣಾಮವೇ ಈತನ ಹೆಸರು ಈಗ ವಿಶ್ವದ ಪ್ರತಿಷ್ಠಿತ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಗೊಳ್ಳುವಂತಾಗಿದೆ. ಗಿನ್ನೆಸ್ ಸಂಸ್ಥೆಯ ತೀರ್ಪಗಾರರಾಗಿ ರಿಷಿನಾಥ್ ಹಾಜರಿದ್ದರು. ಈ ಹಿಂದೆ ಮಹಾರಾಷ್ಟ್ರದ ಬಾಲಕಿ ಶೀಲಾ ಎಂಬಾಕೆ 26 ಕಾರುಗಳ ಅಡಿಯಲ್ಲಿ ಸ್ಕೇಟಿಂಗ್ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು ಎಂದು ಸಂಘಟಕರು ತಿಳಿಸಿದ್ದಾರೆ.
ಸಾವರಿಸಿಕೊಂಡ ಬಾಲಕ: ಒರಾಯನ್ ಮಾಲ್ನಲ್ಲಿ ಭಾನುವಾರ ಗಿನ್ನೆಸ್ ದಾಖಲೆಯ ಪ್ರದರ್ಶನ ತೋರುವ ಸಂದರ್ಭದಲ್ಲಿ ಓಂ ಸ್ವರೂಪ ಗೌಡ, ಒಂದು ಹಂತದಲ್ಲಿ ಬೀಳುವ ಸಾಧ್ಯತೆ ಕಂಡುಬಂದಿತು. ತಕ್ಷಣವೇ ಸಾವರಿಸಿಕೊಂಡ ಆತ, ಯಾವುದೇ ಅಪಾಯ ಆಗದಂತೆ ನೋಡಿಕೊಂಡು ಸ್ಕೇಟ್ ಮಾಡಿಕೊಂಡು ಬಂದಿದ್ದು ರೋಮಾಂಚಕವಾಗಿತ್ತು. 30 ಸೆಕೆಂಡ್ಗಳಲ್ಲಿ ಆತ 36 ಟಾಟಾ ಸುಮೋ ವಾಹನಗಳ ತಳದಿಂದ ಸ್ಕೇಟಿಂಗ್ ಮಾಡುತ್ತ ಸಾಗಿ ಹೊರಬರುತ್ತಿದ್ದಂತೆ, ಸ್ಥಳದಲ್ಲಿದ್ದ ಆತನ ಪಾಲಕರು, ಸಂಬಂಧಿಕರು ಮತ್ತು ತರಬೇತುದಾರರು ಸಂತೋಷದಿಂದ ಕುಣಿದು ಕುಪ್ಪಳಿಸಿದರು.
ನಾಲ್ಕೂವರೆ ವಯಸ್ಸಿನಲ್ಲೇ ಮಗನಿಗೆ ಸ್ಕೇಟಿಂಗ್ನಲ್ಲಿ ಆಸಕ್ತಿ ಮೂಡಿತು. ಬಸವೇಶ್ವರನಗರ ಬಳಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆತನನ್ನು ತರಬೇತಿಗೆ ಸೇರಿಸಿದೆವು. ಆದರೆ ಆತ ಗಿನ್ನೆಸ್ ದಾಖಲೆ ಮಾಡುತ್ತಾನೆ ಎಂದು ನಾವು ಊಹಿಸಿರಲಿಲ್ಲ. ಚಿಕ್ಕವಯಸ್ಸಿನಲ್ಲೇ ಆತ ಸ್ಕೇಟಿಂಗ್ನಲ್ಲಿ ಅದ್ಭುತ ಸಾಧನೆ ತೋರಿರುವುದು ಹೆಮ್ಮೆಯ ಸಂಗತಿ.- ಸುನಿತಾ ಓಂ ಸ್ವರೂಪ್ ತಾಯಿ
Comments are closed.