ಕರಾವಳಿ

ಮುಂದಿನ ತಿಂಗಳಿಂದ ಬೇಳೆಕಾಳು ಬೆಲೆ ಹೆಚ್ಚಳ, ತೊಗರಿ ಬೇಳೆ 300 ರೂ.ಗೆ ಏರಿಕೆ ಸಾಧ್ಯತೆ

Pinterest LinkedIn Tumblr

bele

ನವದೆಹಲಿ: ದೇಶದಲ್ಲಿ ಬೇಳೆಕಾಳುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಮುಂದಿನ ತಿಂಗಳಿಂದ ಹಬ್ಬಗಳು ಪ್ರಾರಂಭವಾಗುತ್ತಿದ್ದು, ಬೇಳೆ ಕಾಳು ಬೆಲೆ ಇನ್ನಷ್ಟು ಏರಿಕೆಯಾಗಬಹುದು. ತೊಗರಿ ಬೇಳೆ ಬೆಲೆ 300 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರ್ತಕರು ತಿಳಿಸಿದ್ದಾರೆ.

ಮಾರುಕಟ್ಟೆಗೆ ಬೇಳೆಕಾಳುಗಳ ದಾಸ್ತಾನು ಬರುವವರೆಗೆ ಬೆಲೆ ನಿಯಂತ್ರಣಕ್ಕೆ ಬರುವ ಲಕ್ಷಣಗಳಿಲ್ಲ. ಈಗಾಗಲೇ ತೊಗರಿ ಬೇಳೆ ಬೆಲೆ ಪ್ರತಿ ಕೆ.ಜಿ.ಗೆ 220 ರೂ., ಕಡಲೆ ಬೇಳೆ 140-160 ರೂ., ಉದ್ದಿನ ಬೇಳೆ 180 ರೂ. ಮತ್ತು ಹೆಸರು ಬೇಳೆ ಬೆಲೆ 100 ರೂ. ಆಸುಪಾಸಿನಲ್ಲಿದೆ. ಆಗಸ್ಟ್ ವೇಳೆಗೆ ಹೆಸರು ಬೇಳೆ ಮಾರುಕಟ್ಟೆಗೆ ಆಗಮಿಸುವುದರಿಂದ ಅದರ ಬೆಲೆ ಇಳಿಕೆಯಾಗಬಹುದು. ಉಳಿದಂತೆ ತೊಗರಿ ಬೇಳೆ ನವೆಂಬರ್ ಡಿಸೆಂಬರ್ನಲ್ಲಿ ಮಾರುಕಟ್ಟೆಗೆ ಬರಲಿದೆ. ಅಲ್ಲಿಯವರೆಗೆ ಬೇಳೆ ಕಾಳುಗಳ ಬೆಲೆ ಇಳಿಕೆಯಾಗುವುದು ಸಾಧ್ಯವಿಲ್ಲ ಎಂದು ವರ್ತಕರು ತಿಳಿಸಿದ್ದಾರೆ.

2015ರಲ್ಲಿ 13.17 ಮಿಲಿಯನ್ ಟನ್ ತೊಗರಿ ಬೇಳೆ ಉತ್ಪಾದನೆಯಾಗಿದ್ದರೆ, 2016ರಲ್ಲಿ ಕೇವಲ 10.28ಮಿಲಿಯನ್ ಟನ್ ಉತ್ಪಾದನೆಯಾಗಿತ್ತು. ಒಟ್ಟು ಬೇಳೆಕಾಳುಗಳ ಉತ್ಪಾದನೆಯಲ್ಲೂ ಸಹ ಗಣನೀಯ ಇಳಿಕೆ ಕಂಡು ಬಂದಿತ್ತು. 2015 ರಲ್ಲಿ 33.05 ಮಿಲಿಯನ್ ಟನ್ ಉತ್ಪಾದನೆಯಾಗಿದ್ದರೆ, 2016ರಲ್ಲಿ ಕೇವಲ 27.06 ಮಿಲಿಯನ್ ಟನ್ ಉತ್ಪಾದನೆಯಾಗಿತ್ತು. ಕೇಂದ್ರ ಸರ್ಕಾರ ಬೇಳೆಕಾಳುಗಳ ಬೆಲೆ ನಿಯಂತ್ರಣ ಮಾಡಲು ಆಸ್ಟ್ರೇಲಿಯಾ, ಕೆನಡಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಬೇಳೆಕಾಳುಗಳನ್ನು ಆಮದು ಮಾಡಿಕೊಂಡಿತ್ತು. ಆದರೂ ಬೆಲೆ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ.

Comments are closed.