
ಮಾವಿನ ಹಣ್ಣಿಗೆ, `ಹಣ್ಣುಗಳ ರಾಜ’ ಎಂದು ಕರೆಯುತ್ತೇವೆ. ಮಾವಿನ ಹಣ್ಣಿನ ರುಚಿ ಎಲ್ಲರಿಗೂ ಗೊತ್ತಿದೆ. ಕೇವಲ ಉತ್ತಮ ಫಲ ಎನ್ನುವುದರ ಜತೆಗೆ ಇದರಲ್ಲಿ ಹಲವು ಬಗೆಯ ಆರೋಗ್ಯಕರ ಗುಣಗಳೂ ಇವೆ. ಅದೇ ರೀತಿ ಮಾವಿನ ಎಲೆಗಳು ಆರೋಗ್ಯಕಾರಿ ಅಂಶಗಳನ್ನು ಹೊಂದಿವೆ ಎಂದರೆ ಹುಬ್ಬೇರಿಸಬೇಡಿ.
ಮಾವಿನ ಹಣ್ಣಿನ ತಳಿಗಳೂ, ಅವುಗಳ ರುಚಿಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಮಾವಿನ ಎಲೆಗಳಲ್ಲಿ ಪೋಷಕಾಂಶಗಳು ಹಾಗೂ ಔಷಧಿಯುಕ್ತ ಗುಣಗಳಿವೆ ಎಂಬುದು ಬಹಳಷ್ಟು ಜನಕ್ಕೆ ತಿಳಿದಿಲ್ಲ ಎಂದರೆ ತಪ್ಪಾಗಲಾರದು.
ಮಾವಿನ ಎಲೆಗಳನ್ನು ಮನೆ ಮುಂಬಾಗಿಲಿಗೆ ಹಸಿರು ತೋರಣ ಕಟ್ಟಲಿಕ್ಕೆ ಮಾತ್ರವೇ ಬಳಸಬಹುದು ಎಂಬುದರ ಹೊರತಾಗಿ, ಕೆಲವು ಖಾಯಿಲೆಗಳಿಗೆ ಔಷಧೀಯ ರೂಪದಲ್ಲೂ ಉಪಯೋಗಿಸಬಹುದು. ಮಾವಿನ ಎಲೆಗಳಲ್ಲಿ ಹಲವು ಪೋಷಕಾಂಶಗಳು, ರೋಗ ಚಿಕಿತ್ಸಕ ಗುಣಗಳೂ ಇವೆ.
ಮಾವಿನ ಎಲೆಗಳಲ್ಲಿರುವ ಪೋಷಕಾಂಶಗಳು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿವೆ. ಇದರಿಂದಾಗಿ ಮಧುಮೇಹದಿಂದ ಬಳಲುತ್ತಿರುವವರಿಗೆ ಉತ್ತಮ ಔಷಧಿಯಾಗಲಿದೆ.
ಮಧುಮೇಹ ಇರುವ ಇಲಿಗಳ ಮೇಲೆ ಪ್ರಯೋಗ ನಡೆಸಿದ್ದರಿಂದ ಈ ವಿಚಾರ ಬೆಳಕಿಗೆ ಬಂದಿದೆ. ಇಲಿಗಳ ಮೇಲೆ ಪ್ರಯೋಗಿಸಿದಾಗ ಅದರ ರಕ್ತದಲ್ಲಿನ ಅಧಿಕ ಪ್ರಮಾಣದ ಸಕ್ಕರೆ ಅಂಶ ನಿಯಂತ್ರಣಕ್ಕೆ ಬಂದಿರುವುದು ಸಂಶೋಧನೆಯಿಂದ ತಿಳಿದುಬಂದಿದೆ.
ಮಧುಮೇಹದಂತೆಯೇ ಅಸ್ತಮಾ ರೋಗವನ್ನೂ ನಿಯಂತ್ರಿಸಬಲ್ಲ ಸಾಮರ್ಥ್ಯ ಮಾವಿನ ಎಲೆಗಳಿಗಿದೆ. ಮಾವಿನ ಎಲೆಗಳನ್ನು ನಮ್ಮ ದೇಶದಲ್ಲಿ ಮಾತ್ರವಲ್ಲದೆ, ಚೀನಾದಲ್ಲೂ ಶತಮಾನಗಳಿಂದ ಚಿಕಿತ್ಸಾ ರೂಪದಲ್ಲಿ ಉಪಯೋಗಿಸಲಾಗುತ್ತಿದೆ.
ಮಾವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ ಮತ್ತು ಔಷಧೀಯಗಳಿದ್ದು, ಬ್ಯಾಕ್ಟೀರಿಯಾ ಸೋಂಕಿನಿಂದಲೂ ರಕ್ಷಿಸಲು ಸಹಕಾರಿಯಾಗಿದೆ. ವಿಶೇಷವಾಗಿ ಜೀರ್ಣಕ್ರಿಯೆಯಲ್ಲಿನ ತೊಂದರೆ ನಿವಾರಿಸುತ್ತದೆ. ಅಲ್ಲದೆ, ಹೊಟ್ಟೆಯಲ್ಲಿ ಗಡ್ಡೆಗಳಾಗುವುದನ್ನು ತಡೆಯಲಿದೆ ಎಂದು ಹೇಳಲಾಗಿದೆ.
ಮತ್ತೊಂದು ವಿಧಾನವೆಂದರೆ, ಎಳೆಯ ಮಾವಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ, ಹದವಾಗಿ ಕುಟ್ಟಿ ಪುಡಿ ಮಾಡಿ ಸಂಗ್ರಹಿಸಿಟ್ಟುಕೊಳ್ಳಬೇಕು. ಅನಾರೋಗ್ಯದ ಸಮಸ್ಯೆಗಳು ಎದುರಾದಾಗ ಪುಡಿಯನ್ನು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಸೇರಿಸಿ, ಕಲಕಿ ಕುಡಿಯಬೇಕು.
ರೋಗ ನಿರೋಧಕ ಶಕ್ತಿ ವೃದ್ಧಿಸುವ ನಿಟ್ಟಿನಲ್ಲೂ ಮಾವಿನ ಎಲೆಗಳು ನೆರವಾಗಲಿವೆ ಎಂಬ ಅಂಶ ಸಂಶೋಧನೆಗಳಿಂದ ಕಂಡುಬಂದಿದೆ.
ಬಳಸುವ ಬಗೆ
ಕೆಲವು ಎಳೆಯ ಮಾವಿನ ಎಲೆಗಳನ್ನು ಸ್ವಲ್ಪ ಮಟ್ಟಿಗೆ ಜಜ್ಜಿ, ನೀರಿಗೆ ಹಾಕಿ ಕುದಿಸಬೇಕು. ಬಳಿಕ ಆ ನೀರನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಸೋಂಕಿರುವ ಸಮಯದಲ್ಲಿ ನೀರನ್ನು ಕುಡಿಯಬೇಕು.
ಎಳೆಯ ಮಾವಿನ ಎಲೆಗಳನ್ನು ಹಸಿಯಾಗಿಯೂ ಜಗಿದು ತಿನ್ನಬಹುದು. ಸ್ವಲ್ಪ ಒಗರು ಎನಿಸಿದರೂ ಅದನ್ನು ಸಹಿಸಿಕೊಂಡು, ಎಲೆಗಳನ್ನು ಜಗಿದು ತಿನ್ನಬೇಕು. ಆಗಿಂದಾಗ್ಗೆ ಈ ರೀತಿ ಮಾಡುವುದರಿಂದ ಆರೋಗ್ಯ ಸುಧಾರಿಸಿಕೊಳ್ಳಬಹುದು.
ಕೇವಲ ಮಾವಿನ ಹಣ್ಣುಗಳ ರುಚಿ ಸವಿದರೆ ಸಾಲದು. ಎಳೆಯ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಅದರಲ್ಲಿರುವ ರೋಗ ನಿರೋಧಕ ಶಕ್ತಿಗಳು ದೇಹವನ್ನು ಹೊಕ್ಕು, ನಿಮ್ಮ ಆರೋಗ್ಯವನ್ನು ಸದೃಢವಾಗಿಸುವ ನಿಟ್ಟಿನಲ್ಲಿ ಸಹಕರಿಸಲಿವೆ.
Comments are closed.