
ಸುಟ್ಟಗಾಯಗಳ ಅನುಭವ ಬಹುತೇಕರಿಗೆ ಆಗಿರುತ್ತದೆ. ನೀರು ಕಾಯಿಸುವಾಗ, ಒಲೆ ಮುಂದೆ ಕುಳಿತು ಅಡುಗೆ ಮಾಡುವಾಗ, ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ, ಹೀಗೆ ಹಲವಾರು ಸಂದರ್ಭದಲ್ಲಿ ನಮ್ಮ ಕೈ ಅಥವಾ ದೇಹದ ಇತರೆ ಭಾಗಗಳನ್ನು ಸುಟ್ಟುಕೊಳ್ಳುವುದು ಸಾಮಾನ್ಯ ಸಂಗತಿ. ಇದರಲ್ಲಿ ಅಚ್ಚರಿ ಪಡವಂತಹದ್ದೇನೂ ಇಲ್ಲ.
ಸುಟ್ಟಗಾಯ ಮಾಡಿಕೊಳ್ಳುವುದರಲ್ಲಿ ಅಚ್ಚರಿ ಇಲ್ಲದಿದ್ದರೂ, ಕೆಲವರು ಸುಟ್ಟಗಾಯಗಳ ವಾಸಿಗೆ ಬಳಸುವ ವಿಧಾನಗಳು ಮಾತ್ರ ಅಚ್ಚರಿ ಮೂಡಿಸುತ್ತವೆ. ಕೈಗೆ ಸಿಕ್ಕ ಅಥವಾ ಎದುರಿಗೆ ಕಂಡ ವಸ್ತುಗಳನ್ನು ಬಳಸುವ ಮೂಲಕ ಸುಟ್ಟ ಗಾಯದ *ಪರಿಹಾರಕ್ಕೆ ಯತ್ನಿಸುತ್ತಾರೆ.
ಸುಟ್ಟಗಾಯ ಆದ ಕೂಡಲೇ ಕೆಲವರು ರೆಫ್ರಿಜರೇಟರ್ನಲ್ಲಿರುವ ಮಂಜುಗಡ್ಡೆ ತೆಗೆದು ಗಾಯದ ಮೇಲಿಡುತ್ತಾರೆ. ಹೀಗೆ ಮಾಡುವುದು ತಪ್ಪು ಭಾವನೆ. ಮಂಜುಗಡ್ಡೆಯಿಂದ ಸುಟ್ಟಗಾಯ ವಾಸಿಯಾಗುವ ಬದಲು ಚರ್ಮದ ಟಿಶ್ಯು ಅನ್ನು ಹೆಚ್ಚು ಹಾನಿ ಮಾಡುತ್ತದೆ. ಮಂಜುಗಡ್ಡೆ, ರಕ್ತ ಸಂಚಾರಕ್ಕೆ ಅಡ್ಡಿಮಾಡಲಿದೆ. ಇದರ ಬದಲಿಗೆ ತಂಪಾದ ಹರಿಯುವ ನೀರಿಗೆ ಗಾಯ ಒಡ್ಡುವುದು ಒಳ್ಳೆಯದು.
ಮತ್ತೆ ಕೆಲವರು ಬೆಣ್ಣೆ ಸವರುತ್ತಾರೆ, ಇದೂ ಒಳ್ಳೆಯದಲ್ಲ. ಬೆಣ್ಣೆ ಹಚ್ಚುವುದರಿಂದ ಗಾಯದ ಮೇಲೆ ಬ್ಯಾಕ್ಟೀರಿಯಾಗಳು ಉಂಟಾಗಿ ಸೋಂಕು ಹೆಚ್ಚಾಗುತ್ತದೆ. ಇನ್ನೂ ಕೆಲವರು ಟೂತ್ ಪೇಸ್ಟ್ ಹಚ್ಚುತ್ತಾರೆ, ಇದೂ ಸಹ ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಕೆಲಹೊತ್ತು ಹಿತಾನುಭವ ಆಗಬಹುದೇ ವಿನಃ ಗಾಯ ವಾಸಿಯಾಗುವುದಿಲ್ಲ, ಬದಲಿಗೆ ಸೋಂಕು ಹೆಚ್ಚಾಗಲು ದಾರಿ ಮಾಡಲಿದೆ.
ಸುಟ್ಟಗಾಯದ ಉರಿ ಕಡಿಮೆ ಮಾಡಲು ನಿಂಬೆಯನ್ನು ಬಳಸುವವರೂ ಇದ್ದಾರೆ. ಇದರಿಂದ ಗಾಯ ಉಲ್ಬಣಗೊಳ್ಳುವುದು ಹಾಗೂ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
ಮನೆಮದ್ದು
ಸುಟ್ಟಗಾಯಗಳಿಗೆ ಮನೆಯಲ್ಲಿ ಲಭ್ಯವಿರುವ ಜೇನುತುಪ್ಪ ಹಚ್ಚುವುದು ಒಳ್ಳೆಯದು. ಜೇನುತುಪ್ಪ ನಂಜು ನಿರೋಧಕ ಹಾಗೂ ಚಿಕಿತ್ಸಾ ಗುಣಗಳನ್ನು ಹೊಂದಿದೆ. ಗಾಯದ ಕಲೆಯೂ ಕಡಿಮೆಯಾಗಲಿದೆ.
ಸುಟ್ಟ ಗಾಯಕ್ಕೆ ಅಲೋವೆರಾದ ಲೋಳೆರಸವನ್ನು ಹಚ್ಚಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗದು. ಇದರ ಬಳಕೆಯಿಂದ ಗಾಯ ಬೇಗನೆ ಶಮನಗೊಳ್ಳಲು ಸಹಕಾರಿಯಾಗಲಿದೆ.
ಇನ್ನು ಬಾಳೆಹಣ್ಣಿನ ಸಿಪ್ಪೆಯನ್ನು ಸುಟ್ಟ ಚರ್ಮದ ಭಾಗದ ಮೇಲಿಟ್ಟರೆ, ಊತ ಮತ್ತು ನೋವು ಕಡಿಮೆಯಾಗಲಿದೆ. ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಮೊಸರನ್ನು ಹಚ್ಚಿಕೊಂಡರೆ ಸುಟ್ಟಗಾಯ ಬೇಗ ಗುಣವಾಗಲಿದೆ.
ಸುಟ್ಟಗಾಯಗಳಿಗೆ ಚರ್ಮದ ಆಯಿಂಟ್ಮೆಂಟ್ಗಳನ್ನು ಬಳಸಬಹುದು. ಇದರಿಂದ ನೋವು ಕಡಿಮೆ ಆಗಲಿದೆ. ಚರ್ಮಕ್ಕೂ ತಂಪಾಗಲಿದೆ.
ಮನೆಮದ್ದುಗಳನ್ನು ಬಳಸಿದರೂ ನೋವು ಕಡಿಮೆಯಾಗದಿದ್ದರೆ ವೈದ್ಯರ ಬಳಿಗೆ ಹೋಗಬೇಕು. ನಿರ್ಲಕ್ಷ್ಯ ಮಾಡಬಾರದು ಹಾಗೆ ಮಾಡಿದರೆ, ಸಮಸ್ಯೆ ಗಂಭೀರವಾಗಲಿದೆ, ಚರ್ಮಕ್ಕೂ ಹಾನಿಯಾಗುವ ಸಾಧ್ಯತೆ ಇರುತ್ತದೆ.
Comments are closed.