ಕರ್ನಾಟಕ

ಅಕಾಲಿಕ ಮಳೆಗೆ ಏಳು ಬಲಿ: ಸಿಡಿಲು ಬಡಿದು, ಗೋಡೆ ಕುಸಿದು ಅನಾಹುತ

Pinterest LinkedIn Tumblr

rain

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಸುರಿದ ಅಕಾಲಿಕ ಮಳೆ ವೇಳೆ ಸಿಡಿಲು ಬಡಿದು ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು, ರಾಯಚೂರು, ಹಾವೇರಿ ಬಳ್ಳಾರಿ, ಬೀದರ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮತ್ತು ಗೋಡೆ ಕುಸಿದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಸೇರಿ ಒಟ್ಟು 7 ಜನ ಮೃತಪಟ್ಟಿದ್ದಾರೆ.

ಇವಲ್ಲದೆ ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಕಲಬುರ್ಗಿ ಕೊಪ್ಪಳ ಧಾರವಾಡ, ಉತ್ತರ ಕನ್ನಡ, ವಿಜಯ­ಪುರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 2 ಸಾವು: ಶಿವಮೊಗ್ಗ ಜಿಲ್ಲೆ ಹಲವೆಡೆ ಭಾನುವಾರ ಸಂಜೆ ಗುಡುಗು, ಸಿಡಿಲು–ಗಾಳಿ ಸಹಿತ ಮಳೆಯಾಗಿದೆ. ಸಿಡಿಲು ಬಡಿದು ಶಿಕಾರಿಪುರ ತಾಲ್ಲೂಕು ಮಳ­ವಳ್ಳಿಯ ವೀರಪ್ಪ ಅವರ ಪುತ್ರ ಶರಣ್‌(15), ಸಾಗರ ತಾಲ್ಲೂಕು ತ್ಯಾಗರ್ತಿಯ ಗುತ್ಯಪ್ಪ (64) ಮೃತಪಟ್ಟಿದ್ದಾರೆ.

ಇವರು ಜಮೀನಿನಲ್ಲಿ ಕೆಲಸ ಮಾಡು­ತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಸಾಗರ ಪಟ್ಟಣದ ಬಹುತೇಕ ಭಾಗದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ದಿಢೀರ್ ಮಳೆ ಸುರಿದ ಕಾರಣ ರಸ್ತೆ ಕೆಸರುಗದ್ದೆಯಾಗಿ ವಾಹನ­ಗಳು ಸಂಚರಿಸಲು ಪರದಾಡಿದವು.

ರಿಪ್ಪನ್‌ಪೇಟೆಯಲ್ಲಿ ಮಳೆಯಿಂದ ಗ್ರಾಮಾಂತರ ಭಾಗದಲ್ಲಿ ವಿದ್ಯುತ್‌ ಹಾಗೂ ದೂರವಾಣಿ ಸಂಪ­ರ್ಕ­ಗಳು ಕಡಿತಗೊಂಡಿವೆ. ಶಿಕಾರಿಪುರದ ಶಿರಾಳ­ಕೊಪ್ಪದಲ್ಲಿ ಒಂದೂವರೆಗಂಟೆ ಮಳೆ ಸುರಿದಿದೆ. ಭದ್ರಾವತಿ, ತೀರ್ಥಹಳ್ಳಿ ತಾಲ್ಲೂಕಿನ ಕೆಲವೆಡೆ ಉತ್ತಮ ಮಳೆಯಾಗಿದೆ.

ಬಿರುಸಿನ ಮಳೆ: ದಾವಣಗೆರೆಯಲ್ಲೂ ಗುಡುಗು ಸಹಿತ ತುಂತುರು ಮಳೆಯಾಗಿದೆ. ಚಿತ್ರ­ದುರ್ಗ ಜಿಲ್ಲೆ ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ಬಿರು­ಸಿನ ಮಳೆಯಾಗಿದೆ.

ತಡೆಗೋಡೆ ಕುಸಿದು ಸಾವು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕೊಯ್ಯೂರು ಗ್ರಾಮದಲ್ಲಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾ­ನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲ­ಶೋ­ತ್ಸವದ ಅಂಗವಾಗಿ ಭಾನುವಾರ ಬೆಳಗಿನ ಜಾವ ನಾಗಮಂಡಲ ನಡೆಯುತ್ತಿರುವಾಗ ತಡೆ­ಗೋಡೆ ಕುಸಿದು ಬಿದ್ದು ವಿಡಿಯೊಗ್ರಾಫರ್‌ ಮೃತಪಟ್ಟರು.

ಪುತ್ತೂರು ತಾಲ್ಲೂಕಿನ ಪುಟ್ಟತಡ್ಕ ನಿವಾಸಿ ದಿವಾಕರ (37) ಮೃತ ಪಟ್ಟವರು. ವಿಡಿಯೊ ಚಿತ್ರೀಕರಣಕ್ಕಾಗಿ ಅವರು ದೇವಸ್ಥಾನದ ಆವರಣದಲ್ಲಿ ಹಾಕಿದ ಮಣ್ಣಿನ ತಡೆಗೋಡೆ ಹತ್ತಿದ್ದರು. ಆಗ ಮಣ್ಣು ಕುಸಿದು ಬಿದ್ದು ಮೃತಪ­ಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆ ಜಡಿಮಳೆ ಸುರಿಯಿತು. ಗುಡುಗು ಮತ್ತು ಮಿಂಚಿನ ಆರ್ಭಟವೂ ಜೋರಾಗಿತ್ತು. ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರ ವರೆಗೆ ಮಳೆಯಾಗಿದೆ.

ಸಿಡಿಲಿಗೆ ಕಾರ್ಮಿಕ ಬಲಿ: ರಾಯಚೂರು ಜಿಲ್ಲೆಯ ಮುದು­ಗಲ್ ಸಮೀಪದ ಉಪ್ಪಾರ ನಂದಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಹುಸೇನಸಾಬ ರಾಜೇಸಾಬ ಕನಸಾವಿ (30) ಎಂಬ ಕಾರ್ಮಿಕ ಸಾವನ್ನಪ್ಪಿ, ರಂಜಾನಸಾಬ ಎಂಬುವವರು ಗಾಯ­ಗೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ಮಾನಪ್ಪ ಎಂಬವರ ಹೊಲದ ಸಮೀಪ ಇವರು ಕಲ್ಲು ಒಡೆಯುವ ಕೆಲಸದಲ್ಲಿ ನಿರತನಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕ ಸಾವು– ನಾಲ್ವರಿಗೆ ಗಾಯ: ಬೀದರ್‌ ಜಿಲ್ಲೆ ಹುಮನಾಬಾದ್‌ ತಾಲ್ಲೂಕು ಕಣಕುಣಿ ಗ್ರಾಮ­ದಲ್ಲಿ ಸಿಡಿಲು ಬಡಿದು ಆನಂದ ತುಕಾರಾಮ (16) ಎಂಬ ಬಾಲಕ ಮೃತಪಟ್ಟಿದ್ದಾನೆ. ಈತ ತಂದೆಯ ಜತೆ ತೋಟದಲ್ಲಿ ಕೆಲಸ ಮಾಡುತ್ತಿದ್ದ. ತುಕಾರಾಮ ನರಸಪ್ಪ, ಮಲ್ಲಪ್ಪ ತುಕಾರಾಮ, ಮಲ್ಲಿಕಾರ್ಜುನ ದಶರಥ, ಶಂಕರ ಕಲ್ಲಪ್ಪ ಹಾಗೂ ರಾಜಪ್ಪ ಗುಂಡಪ್ಪ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹುಮನಾ­ಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಮೊಗಲಾ ಗ್ರಾಮದ ಹೊಲ­ದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಾಮ ದೇಗುಲ­ಕೋಟಿ ಎಂಬುವವರು ಸಿಡಿಲು ಬಡಿದು ಗಾಯ­ಗೊಂಡಿದ್ದು, ಅವರನ್ನು ಕಲಬುರ್ಗಿ ಆಸ್ಪತ್ರೆಗೆ ದಾಖಲಿಸ­ಲಾಗಿದೆ.

ಬೆಳೆಗಳಿಗೆ ಹಾನಿ: ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಳೂರ್ಗಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಸಂಜೆ ಆಲಿಕಲ್ಲು ಮಳೆಯಾಗಿದ್ದು, ಕಟಾವಿಗೆ ಬಂದಿರುವ ದ್ರಾಕ್ಷಿ, ಜೋಳ, ಕಡಲೆ, ಗೋಧಿ ಬೆಳೆಗಳು ಹಾನಿಗೀಡಾಗಿವೆ. ಕಲಬುರ್ಗಿ ನಗರದಲ್ಲಿ ರಾತ್ರಿ 8.45ರ ಸುಮಾರು ವಿಪರೀತ ಗಾಳಿ ಬೀಸಿದ್ದು, ಕೆಲವೆಡೆ ಮರಗಳ ರೆಂಬೆ ಮುರಿದು ಬಿದ್ದು ವಿದ್ಯುತ್‌ ಪೂರೈಕೆ ಸ್ಥಗಿತ­ಗೊಂಡಿತ್ತು. ಆ ನಂತರ ಮಳೆ ಸುರಿಯಿತು.

ಜಾನುವಾರು ಸಾವು: ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕು ಮುತ್ತಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಬಸಪ್ಪ ನಿಂಗಪ್ಪ ಮಾಳಗೊಡರ ಅವರಿಗೆ ಸೇರಿದ ಆರು ಜಾನುವಾರುಗಳು ಮೃತಪಟ್ಟಿವೆ.

ಬಾಲಕ ಸಾವು: ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕಲಕೋಟಿ ಗ್ರಾಮದಲ್ಲಿ ಭೀಮಣ್ಣ ಅನುಷೆ (15) ಎಂಬ ಬಾಲಕ ಸಿಡಿಲಿಗೆ ಬಲಿಯಾಗಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಾಯಿಂಗ್ಲಜದ ಭೀಮಣ್ಣನ ತಂದೆ ಪದ್ದಣ್ಣ ಕೂಡ ಗಾಯಗೊಂಡಿದ್ದು, ಅವರ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ.

ಹಾವೇರಿ ಜಿಲ್ಲೆಯ ಹಾನಗಲ್‌, ಶಿಗ್ಗಾವಿ, ಹಿರೇಕೆರೂರ, ರಾಣೆಬೆನ್ನೂರ, ಬ್ಯಾಡಗಿ ತಾಲ್ಲೂಕುಗಳಲ್ಲಿ ಗಾಳಿ ಸಹಿತ ತುಂತುರು ಮಳೆ ಸುರಿದರೆ ಹಾನಗಲ್‌ ತಾಲ್ಲೂಕಿನ ಅಕ್ಕಿ ಆಲೂರಿನಲ್ಲಿ ಜಾತ್ರೆಯ ಮಂಟಪ ಗಾಳಿಗೆ ವಾಲಿದೆ.

ಮಹಿಳೆ ಸಾವು: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಿರೇಹೆಗ್ಡಾಳ ಗ್ರಾಮದಲ್ಲಿ ಶೇಂಗಾ ಬಿಡಿಸಲು ಹೋಗಿದ್ದ ಬಾರಿಕರ ಶಶಿಕಲಾ (21) ಎಂಬ ಮಹಿಳೆ ಸಿಡಿಲು ಬಡಿದು ಮೃತಪಟ್ಟಿದ್ದು, ಗಾಯಗೊಂಡ ಅವರ ಅತ್ತೆ ಮತ್ತು ಮಾವನನ್ನು ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್‌್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ತಾಲ್ಲೂಕಿನ ಕೈವಲ್ಯಾಪುರ ಗ್ರಾಮದಲ್ಲಿ ಸಿಡಿಲು ಬಡಿದು 22 ಕುರಿಗಳು ಸಾವಿಗೀಡಾಗಿವೆ.

ಬಳ್ಳಾರಿ, ಸಂಡೂರು ತಾಲ್ಲೂಕುಗಳ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಬಳ್ಳಾರಿ ತಾಲ್ಲೂಕಿನ ಮದಿರೆ ಗ್ರಾಮ­ದಲ್ಲಿ ಮಳೆ ವೇಳೆ ವಿದ್ಯುತ್‌ ಕಂಬದ ಬಳಿ ಇದ್ದ ಎಮ್ಮೆಯೊಂದು ಮೃತಪಟ್ಟಿದೆ.

ಹೊಸಪೇಟೆ ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಮಪುರ, ಮಲಪ­ನಗುಡಿ ಮತ್ತಿತರ ಗ್ರಾಮಗಳಲ್ಲಿ ದಿಢೀರ್ ಸುರಿದ ಆಲಿಕಲ್ಲು ಮಳೆಯಿಂದಾಗಿ ಕಬ್ಬು, ಭತ್ತದ ಜಮೀನುಗಳಲ್ಲಿ ಕೃಷಿ ಚಟುವಟಿಕೆಗೆ ಅಡ್ಡಿಯುಂಟಾಯಿತು.

ಜಾನುವಾರುಗಳ ಸಾವು: ಗದಗ ಜಿಲ್ಲೆಯಲ್ಲಿ ಮಳೆಗೆ ಮೂರು ಜಾನುವಾರುಗಳು ಮೃತಪಟ್ಟು, ನಾಲ್ಕು ಜಾನುವಾರು ಗಾಯಗೊಂಡಿವೆ. ಜೋರು ಮಳೆಗೆ ಹತ್ತಿ, ಜೋಳ, ಗೋಧಿ, ಕುಸುಬಿ ಹಾನಿಯಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕಟಾವು ಮಾಡಿ ಒಣಗಲು ಹಾಕಿದ್ದ ಬಿಳಿಜೋಳ, ಗೋಧಿ, ಕುಸುಬಿ, ಕಡಲೆ, ತೊಗರಿ ಬೆಳೆಗಳಿಗೆ ಮಳೆಯಿಂದಾಗಿ ತೊಂದರೆ ಆಗಿದೆ.

ಆಲಿಕಲ್ಲು ಮಳೆ: ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದ್ದು ಬೆಳೆಗಳಿಗೆ ಹಾನಿಯಾಗಿದೆ.

ಸಾಧಾರಣ ಮಳೆ: ಕೊಡಗು ಜಿಲ್ಲೆಯ ವಿವಿಧೆಡೆ ಭಾನುವಾರ ಮಧ್ಯಾಹ್ನ ಸುಮಾರು 1ರಿಂದ 2 ಗಂಟೆಗಳ ಕಾಲ ಸಾಧಾರಣ ಮಳೆಯಾಗಿದೆ.

ಮಡಿಕೇರಿ, ಸುಂಟಿಕೊಪ್ಪ, ವಿರಾಜಪೇಟೆ, ನಾಪೋಕ್ಲು, ಭಾಗಮಂಡಲ, ಗೋಣಿಕೊಪ್ಪಲು, ಕುಶಾಲನಗರ, ಸೋಮವಾರಪೇಟೆ ಹಾಗೂ ಶನಿವಾರಸಂತೆಯ ವಿವಿಧೆಡೆ ಗುಡುಗು ಸಿಡಿಲಿನಿಂದ ಕೂಡಿದ ಸಾಧಾರಣ ಮಳೆಯಾಗಿದೆ.

ಜಿಲ್ಲೆಯಲ್ಲಿ ಇದೀಗ ಕಾಫಿ ಹೂವು ಬಿಡುವ ಸಮಯ­ವಾಗಿದ್ದು, ಸ್ವಲ್ಪಮಟ್ಟಿನ ಮಳೆ ಬಿದ್ದಿರುವುದರಿಂದ ಕಾಫಿ ಬೆಳೆಗಾರರಿಗೂ ಸಂತಸವಾಗಿದೆ.

ಮಾವು, ಬಾಳೆಗೆ ಹಾನಿ: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹಲವು ಭಾಗಗಳಲ್ಲಿ ಭಾನುವಾರ ಬೆಳಿಗ್ಗೆ ಉತ್ತಮ ಮಳೆ ಸುರಿದಿದೆ. ಮುಂಜಾನೆ 3.30ಕ್ಕೆ ಪ್ರಾರಂಭ­ಗೊಂಡ ಮಳೆ ಸುಮಾರು ಒಂದು ಗಂಟೆ ಕಾಲ ಸುರಿಯಿತು. ಮಳೆಯ ರಭಸಕ್ಕೆ ಮಾವಿನ ಹೂವು, ಹೀಚುಗಳು ಉದುರಿವೆ. ಬಾಳೆ ಬೆಳೆ ನೆಲ ಕಚ್ಚಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ಕೆಲ ರೈತರು ಅಳಲು ತೋಡಿಕೊಂಡಿದ್ದಾರೆ.

ಅರಕಲಗೂಡಿನಲ್ಲಿ 40.8 ಮಿ.ಮೀ, ಮಲ್ಲಿಪಟ್ಟಣದಲ್ಲಿ 40.1 ಮಿ.ಮೀ, ದೊಡ್ಡಮಗ್ಗೆಯಲ್ಲಿ 10.4 ಮಿ.ಮೀ. ಹಾಗೂ ದೊಡ್ಡಬೆಮ್ಮತ್ತಿಯಲ್ಲಿ 2.2 ಮಿ.ಮೀ ಮಳೆಯಾದ ವರದಿಯಾಗಿದೆ.

Write A Comment