ರಾಷ್ಟ್ರೀಯ

ಭೋಪಾಲ್‌ ಹೆಣ್ಣಿಗೆ ಗಂಡು ಸಿಗಲ್ಲ!

Pinterest LinkedIn Tumblr

pvec9mar15rjbhopal

ಬೆಂಗಳೂರು: ಭೋಪಾಲ್‌ನಲ್ಲಿ ಯೂನಿ­­ಯನ್‌ ಕಾರ್ಬೈಡ್‌ ಅನಿಲ ದುರಂತ ಸಂಭವಿಸಿ 31 ವರ್ಷಗಳೇ ಕಳೆ­ದಿವೆ. ಆದರೂ ಅಲ್ಲಿನ ಮಹಿಳೆ­ಯರ ಸ್ಥಿತಿ ಇನ್ನೂ ಚಿಂತಾಜನಕ­ವಾಗಿದೆ. ಭೋಪಾಲ್‌ ಮಹಿಳೆಯ­ರನ್ನು ಮದುವೆಯಾಗಲು ಪುರುಷರು ಈಗಲೂ ಹಿಂಜರಿ­ಯುತ್ತಾರೆ. ಮೊದ­ಮೊದಲು ಇಲ್ಲಿನ ಹುಡುಗರಿಗೂ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಅಂಗವಿಕಲ ಮಕ್ಕಳು ಹುಟ್ಟುತ್ತಾರೆ ಎಂಬ ಭಯ ಇನ್ನೂ ಇದೆ.

ಅಂತರರಾಷ್ಟ್ರೀಯ ಮಹಿಳಾ ದಿನಾ­ಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂ­ಟ ಬೆಂಗಳೂರಿನಲ್ಲಿ ಶನಿವಾರ ಆಯೋ­ಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿ­­ಯಾ­ಗಿದ್ದ ‘ಭೋಪಾಲ್‌ ಅನಿಲ ದುರಂತ ಪೀಡಿತ ಮಹಿಳಾ ಸ್ಟೇಷನರಿ ಕರ್ಮ­ಚಾರಿ ಸಂಘಟನೆ’ ನಾಯಕಿ­ಯ­ರಾದ ರಶೀದಾ ಬೀ ಮತ್ತು ಚಂಪಾ­ದೇವಿ ಶುಕ್ಲಾ ಅವರ ಮಾತುಗಳು ಇವು.

ಈಗಲೂ ಅಲ್ಲಿ ಕೆಲವು ಯುವತಿ­ಯರು 25 ವರ್ಷಗಳು ಕಳೆ­ದರೂ ಋತು­ಮತಿಯಾಗುವುದಿಲ್ಲ. ಇನ್ನು ಕೆಲವು ಯುವತಿಯರಿಗೆ ಇಪ್ಪ­ತ್ತೈದು ಇಲ್ಲವೇ ಮೂವತ್ತು ವರ್ಷಕ್ಕೇ ಋತು­ಚಕ್ರ ನಿಂತು ಹೋಗುತ್ತದೆ ಎಂದು ಅಲ್ಲಿನ ಭೀಕರತೆಯನ್ನು ಬಣ್ಣಿಸಿದರು.

ಇಬ್ಬರು ಹೋರಾಟ­ಗಾರ್ತಿ­ಯರು ‘ಪ್ರಜಾ­ವಾಣಿ’ ಯೊಂದಿಗೆ ಮಾತ­­ನಾಡಿದ ಮುಖ್ಯಾಂಶಗಳು ಇಲ್ಲಿವೆ.

*ದುರಂತದ ಪ್ರತ್ಯಕ್ಷದರ್ಶಿ­ಗಳಾಗಿ­ದ್ದ­ವರು ನೀವು. ಈಗ ಅಲ್ಲಿನ ಸ್ಥಿತಿ ಹೇಗಿದೆ?
1984, ಡಿ. 2ರ ರಾತ್ರಿ 12ರ ಸುಮಾರಿಗೆ ಭೀಕರ ದುರಂತ ಸಂಭ­ವಿಸಿತು. ಇಂದಿಗೂ ದುರಂತದ ಪರಿ­­ಣಾಮ ಮಾತ್ರ ನಿಂತಿಲ್ಲ.

ದುರಂತಕ್ಕೆ ಅಮೆರಿಕ ಮೂಲದ ಯೂನಿಯನ್‌ ಕಾರ್ಬೈಡ್‌ ಕಂಪೆನಿ ಕಾರಣವೆಂಬ ವಿಚಾರ ನಮಗೆ ಘಟನೆಯ ಮರುದಿನ ತಿಳಿಯಿತು. ನಂತರದ ದಿನಗಳಲ್ಲಿ ಹಲ­ವಾರು ಜನ ಮೂತ್ರಪಿಂಡ ಕ್ಯಾನ್ಸರ್‌, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಬಲಿಯಾದರು. ಹುಟ್ಟುವ ಮಕ್ಕಳಲ್ಲಿ ಅಂಗಾಂಗಳ ನ್ಯೂನತೆ ಈಗಲೂ ಸಾಮಾನ್ಯ. ತುಟಿಯೇ ಇಲ್ಲದೆ ಜನಿಸಿದ ಮೊಮ್ಮ­ಗಳಿಗೆ ಕೈ ಬೆರಳಿನ ಸಹಾ­ಯ­ದಿಂದ ಹಾಲುಣಿಸಿ ಉಳಿಸಿಕೊಂಡೆವು.

* ಸಂಘಟಿತರಾಗಿದ್ದು ಹೇಗೆ?
ಯಾವುದೇ ದುರ್ಘಟನೆ ಸಂಭವಿಸಿ­ದಾಗಲೂ ಹೆಚ್ಚು ಬಾಧಿತಳಾಗುವುದು ಮಹಿಳೆ. ಘಟನೆ ನಂತರ ಗಂಡ­ಸರು ದುಡಿಯುವ ಶಕ್ತಿಯನ್ನೇ ಕಳೆದು­ಕೊಂಡರು. ಯಾರಿಗೂ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ. ಸರ್ಕಾರದಿಂದ ಆರಂಭಿ­ಸಿದ ಲೇಖನ ಸಾಮಗ್ರಿಗಳ ಕೈಗಾರಿಕೆ­ಯಲ್ಲಿ ಕೇವಲ ನೂರು ಮಂದಿ ಮಹಿಳೆ­ಯರಿಗೆ ಮಾತ್ರ ಉದ್ಯೋಗ. ಅಲ್ಲಿ ನೀಡುತ್ತಿದ್ದ ಗೌರವ ಧನದಲ್ಲಿ ಜೀವನ ನಡೆಸುವುದೇ ಕಷ್ಟವಾಯಿತು. ಆಗ ಹೋರಾಡು­ವುದು ಅನಿವಾರ್ಯ­ವಾ­ಯಿತು. ಪ್ರತಿ ಕುಟುಂಬದಲ್ಲಿ ಪುರುಷರಿ­ಗಿಂತ ಮಹಿಳೆಯರೇ ಹೋರಾಟದಲ್ಲಿ ಮುಂದು.

* ಸಂತ್ರಸ್ತರ ಪುನರ್ವಸತಿಗೆ ನಡೆಸಿದ ಪ್ರಯತ್ನಗಳು?
ಸಂತ್ರಸ್ತರ ಪುನರ್ವಸತಿಗೆ ನಿರಂತರ­ವಾಗಿ ಚಳವಳಿ ನಡೆಸುತ್ತಲೇ ಇದ್ದೇವೆ. ಆದರೂ ಇದುವರೆಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಪುಣೆ, ಖಾನಾಪುರ, ಚೆನ್ನೈನಲ್ಲಿ ಇಂತಹುದೇ ಘಟಕಗಳನ್ನು ಸ್ಥಾಪಿಸಲು ಡವ್‌ ಕಂಪೆನಿ ನಡೆಸಿದ ಯತ್ನಗಳ ವಿರುದ್ಧ ಹೋರಾಡಿದ್ದಕ್ಕೆ ನಮ್ಮಗಳ ಮೇಲೆಯೇ ಕೇಸುಗಳನ್ನು ದಾಖಲಿಸಲಾಯಿತು.

* ಜನಸಾಮಾನ್ಯರ ಪ್ರತಿಕ್ರಿಯೆ ಹೇಗಿದೆ?
ನಮ್ಮ ನೋವುಗಳಿಗೆ ಜನಸಾಮಾ­ನ್ಯರು ಸ್ಪಂದಿಸಿದ್ದಾರೆಯೇ ಹೊರತು, ಪಕ್ಷಗಳಿಂದ, ದುರಂತಕ್ಕೆ ಕಾರಣವಾದ ಕಂಪೆನಿಯಿಂದ ಯಾವುದೇ ನ್ಯಾಯ ಸಿಕ್ಕಿಲ್ಲ. ಮಹಿಳೆಯರು ಒಗ್ಗಟ್ಟಿನಿಂದ ಇದ್ದಲ್ಲಿ ಯಾವುದೇ ಜನವಿರೋಧಿ ಕಾನೂನನ್ನು ಜಾರಿ ಮಾಡಲು ಸಾಧ್ಯವಾಗುವುದಿಲ್ಲ. ನೆಲ, ಜಲ, ಪರಿಸರವನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಇಲ್ಲಿನ ಮಹಿಳೆಯರ ಆಶಯವೂ ಇದೇ ಆಗಿದ್ದು, ನಮ್ಮ ಹೋರಾಟಕ್ಕೆ ಇನ್ನೂ ಬಲ ಬಂದಂತಾಗಿದೆ.

ಕಂಪೆನಿ ನೆಲಸಮ ಮಾಡಲು ಬಿಡಲ್ಲ
ಸರ್ಕಾರ ಇದುವರೆಗೆ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದ ಕಾರಣ ಅಂತರ್ಜಲವೇ ನಮಗೆ ಆಧಾರ. ಒಮ್ಮೆ ಕೊಳವೆ ಬಾವಿ ಕೊರೆ­ಯುವಾಗ ಕಪ್ಪನೆ ನೀರು ಚಿಮ್ಮಿತು. ಇದರಿಂದ ಎಲ್ಲರೂ ಆತಂಕಕ್ಕೆ ಒಳಗಾ­ಗಿದ್ದೆವು. ದುರಂತದ ಬಳಿಕ ಕಂಪೆನಿ ಸುಮಾರು ಐದು ಸಾವಿರ ಟನ್‌ ವಿಷಾನಿ­ಲವನ್ನು ಕಾರ್ಖಾನೆಯ ತಳ­ಭಾಗ­ದಲ್ಲಿ ಹೂತಿದ್ದೇ ಮಣ್ಣು, ಅಂತರ್ಜಲ ವಿಷಮಯ­ವಾಗಲು ಕಾರ­ಣವೆಂದು ಆ ನಂತರ ತಿಳಿಯಿತು. ಆದರೆ ಸರ್ಕಾರ ಮಾತ್ರ ಕಂಪೆನಿಗೆ ಪೂರಕವಾಗಿಯೇ ನಡೆದು­ಕೊಂಡಿತು. ದುರಂತದ ನೆನಪನ್ನು ಅಳಿಸಿಹಾಕಲು ಕಾರ್ಖಾನೆಯನ್ನೇ ನೆಲಸಮ­ಗೊಳಿ­­ಸಲು ಯತ್ನಿಸಿತು. ಆದರೆ ನಾವು ಅದಕ್ಕೆ ಅವಕಾಶ ನೀಡ­ಲಿಲ್ಲ. ಅದರ ವಿರುದ್ಧ ಹೋರಾಡಿದೆವು. ಭೋಪಾ­ಲ್‌ಗೆ ಭೇಟಿ ನೀಡುವವರಿಗೆ ದುರಂತದ ಬಗ್ಗೆ, ನಮ್ಮಗಳ ಸ್ಥಿತಿಗತಿಯ ಬಗ್ಗೆ, ಭವಿಷ್ಯದಲ್ಲಿ ಇಂತಹದೊಂದು ದುರಂತ ನಡೆಯದಂತೆ ಎಚ್ಚರ ವಹಿಸುವ ಬಗ್ಗೆ ತಿಳಿಸುವುದು ನಮ್ಮ ಗುರಿ. ಹೀಗಾಗಿ ಕಾರ್ಖಾನೆಯ ಪಕ್ಕದಲ್ಲಿಯೇ ವಸ್ತು­ಸಂಗ್ರಹಾಲಯವನ್ನು ಮಾಡಿದ್ದೇವೆ. ಅಲ್ಲಿ ಘಟನೆಯ ಎಲ್ಲ ಚಿತ್ರಣಗಳನ್ನು ನೀಡಿದ್ದೇವೆ. ಮೃತರ ಉಡುಪು, ಮಾಂಗಲ್ಯ ಸರ, ಚಪ್ಪಲಿ, ಸಾಮಾನುಗಳನ್ನು ರಕ್ಷಿಸಿ ಇಟ್ಟಿದ್ದೇವೆ.

Write A Comment