ಕರ್ನಾಟಕ

ಗರ್ಭಿಣಿಯ ಬಲಿ ಪಡೆದ ನರಭಕ್ಷಕ ಹುಲಿ ಬೇಟೆಗೆ 220 ಸಿಬ್ಬಂದಿ

Pinterest LinkedIn Tumblr

kljhgdjhgjfj-fshdfhj(1)

ಖಾನಾಪುರ: ಗರ್ಭಿಣಿಯನ್ನು ಬಲಿ ಪಡೆದ ನರಭಕ್ಷಕ ಹುಲಿ ಸೆರೆಹಿಡಿಯಲು ತಾಲ್ಲೂಕಿನ ಜಾಂಬೋಟಿ ವಲಯದ ಒಂಬತ್ತು ಗ್ರಾಮಗಳ ಸುತ್ತಮುತ್ತಲಿನ ಕಾಡಿನಲ್ಲಿ ಶುಕ್ರವಾರ ಕಾರ್ಯಾ­ಚರಣೆಯನ್ನು ಅರಣ್ಯ ಇಲಾಖೆ ಪ್ರಾರಂಭಿಸಿದೆ.

ಇದಕ್ಕಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳ 220ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಂಬೋಟಿ ಹಾಗೂ ಸುತ್ತಲಿನ ಕಾಡಿನಲ್ಲಿ ಬೀಡು ಬಿಟ್ಟಿದ್ದಾರೆ. ಬೆಳಗಾವಿ, ಬಾಗಲ­ಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಂದ ಬಂದಿರುವ ಅರಣ್ಯ ಇಲಾಖೆ  ಅಧಿಕಾರಿಗಳು ಹಾಗೂ ಸಿಬ್ಬಂದಿಯ 10ಕ್ಕೂ ಹೆಚ್ಚು ತಂಡ­ಗಳು, ಬೆಂಗಳೂರಿನಿಂದ ಬಂದಿರುವ ಪರಿಣತ ಶೂಟರ್ಸ್, ಪಶುವೈದ್ಯರು, ಅರಿವಳಿಕೆ ತಜ್ಞರು ಹಾಗೂ ಬೆಳಗಾವಿಯ ನಾಗರಿಕ ಹಾಗೂ ಸಶಸ್ತ್ರ ಪೊಲೀಸರನ್ನೊಳಗೊಂಡ 10 ತಂಡಗಳಲ್ಲಿ ಕಾರ್ಯಾಚರಣೆ ಆರಂಭವಾಗಿದೆ.

ಗುರುವಾರ ನಸುಕಿನಲ್ಲಿ ತಾಲ್ಲೂಕಿನ ದಾರೋಳಿ ಸಮೀಪ ಕುದುರೆಯೊಂದನ್ನು ಬೇಟೆಯಾಡಿ ಅರ್ಧದಷ್ಟು ಮಾಂಸ ತಿಂದು ಹೋಗಿದ್ದ ಹುಲಿ, ಶುಕ್ರವಾರ ಮತ್ತೆ ಬಂದು ಅಳಿದುಳಿದ ಕುದುರೆ ಮಾಂಸವನ್ನು ಭಕ್ಷಿಸಿದೆ. ಈ ಸ್ಥಳದಲ್ಲಿ ಶುಕ್ರವಾರ ಮಧ್ಯಾಹ್ನ ಹುಲಿಗಾಗಿ ಶೋಧ ನಡೆಸಿದ ಅಧಿಕಾರಿಗಳು, ರಾತ್ರಿ ಮತ್ತೆ ಇಲ್ಲಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿ ಈ ಸ್ಥಳದಲ್ಲಿ ಕುರಿಯೊಂದನ್ನು ಬೋನಿನಲ್ಲಿ­ಡಲಾಗಿದೆ. ಶುಕ್ರವಾರ ಬೆಳಿಗ್ಗೆ ಓಲಮನಿ ಗ್ರಾಮದ ಬಳಿ ಒಂದು ಹುಲಿ ರಸ್ತೆ ದಾಟಿದ್ದನ್ನು ಸ್ಥಳೀಯರು ಸ್ಪಷ್ಟಪಡಿ­ಸಿದ್ದಾರೆ. ಅರಣ್ಯ ಇಲಾಖೆಯ ತಂಡ ಓಲಮನಿ ಹಾಗೂ ಉಚವಡೆ ಅರಣ್ಯದಲ್ಲಿ ಹುಲಿಗಾಗಿ ಶೋಧ ಕಾರ್ಯ ನಡೆಸಿದೆ.

ಹುಲಿ ಪತ್ತೆ ಹಾಗೂ ಸೆರೆ ಹಿಡಿಯಲು ದಾರೋಳಿ, ಮುಡುಗೈ, ಮುಗವಡೆ, ಕಬನಾಳಿ ಸುತ್ತಮುತ್ತ ತಂಡಗಳು ಬೀಡುಬಿಟ್ಟಿವೆ.
ಹುಲಿಯ ಚಲನವಲನದ ಬಗ್ಗೆ ಮಾಹಿತಿ ಪಡೆಯಲು ಜಾಂಬೋಟಿಯ ವಿಶ್ರಾಂತಿಧಾಮದಲ್ಲಿ ತಾತ್ಕಾಲಿಕವಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಜೊತೆಗೆ ಹುಲಿ ಬಗ್ಗೆ ಸಂದೇಶ ರವಾನಿಸಿದ ಸ್ಥಳಗಳಿಗೆ ತ್ವರಿತವಾಗಿ ತೆರಳಲು ನಾಲ್ಕು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.

ವಿಶೇಷ ಕಾರ್ಯಪಡೆಯ ಅಧಿಕಾರಿ­ಗಳು ಹಾಗೂ ವಿಶೇಷ ಪರಿಣತ ಸೋಲಿ­ಗರು ಶುಕ್ರವಾರ ಸಂಜೆ ಬಂಡೀಪುರ, ನಾಗರಹೊಳೆ, ಮಹದೇಶ್ವರ ಬೆಟ್ಟ ಹಾಗೂ ಬಿಳಗಿರಿ­ರಂಗನ ಬೆಟ್ಟ ಅರಣ್ಯದಿಂದ ಹೊರಟಿದ್ದು ಶನಿವಾರ ಮುಂಜಾನೆ ಜಾಂಬೋಟಿ ಸೇರಲಿದ್ದಾರೆ. ಅಗತ್ಯ ಬಿದ್ದರೆ ಮೈಸೂರು ಜಿಲ್ಲೆಯ ಸಾಂಪ್ರದಾಯಿಕ ಸೋಲಿಗರ ತಂಡವೂ  ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಂಡೇಲಿಯ ಅಣಶಿ ಅರಣ್ಯದಿಂದ ಒಂದು ಪಳಗಿದ ಆನೆಯನ್ನು ತರಿಸಿ­ಕೊಳ್ಳಲಾಗಿದೆ. ಆನೆಯ ಮೇಲೆ ಕುಳಿತು ಪರಿಣತ ಶೂಟರ್ಸ್ ಹಾಗೂ ಅರಿವಳಿಕೆ ತಜ್ಞರು ಕಾರ್ಯಾಚರಣೆ ನಡೆಸಲಿ­ದ್ದಾರೆ, ಹುಲಿ ಬಂಧನಕ್ಕೆ ದಾಂಡೇಲಿ­ಯಿಂದ ಮೂರು ಬೋನು­ಗಳನ್ನು ತರಿಸ­ಲಾಗಿದ್ದು, ಈ ಬೋನುಗಳಲ್ಲಿ ಕುರಿ­ಗಳನ್ನು ಕಟ್ಟಿಹಾಕಿ ಹುಲಿ ಪತ್ತೆಗೆ ಜಾಲ ಬೀಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ನೇರಸಾ ಬಳಿ ಸುಳಿವು
ತಾಲ್ಲೂಕಿನ ನೇರಸಾ ಗ್ರಾಮದ ಹೊರವಲಯದಲ್ಲಿರುವ ಗೌಳಿ­ವಾಡಾ ಪ್ರದೇಶದಲ್ಲಿ ಶುಕ್ರವಾರ ಸಂಜೆ ಹುಲಿಯೊಂದು ಕಾಣಿಸಿ­ಕೊಂಡಿದೆ ಎಂಬ ಮಾಹಿತಿಯನ್ನು ಸ್ಥಳೀಯರು ಅರಣ್ಯ ಇಲಾಖೆಗೆ ನೀಡಿದ್ದಾರೆ. ಮಾಹಿತಿ ಆಧರಿಸಿ ಅಧಿಕಾರಿಗಳು ಆ ಪ್ರದೇಶದಲ್ಲಿ ಶೋಧನೆ ನಡೆಸಿದರು.

Write A Comment