ಕರ್ನಾಟಕ

ಸಾವಿರ ಗ್ರಾಮ ‘ಬಯಲು ಬಹಿರ್ದೆಸೆ ಮುಕ್ತ’: ಜನವರಿ 26ಕ್ಕೆ ಘೋಷಣೆ: ಸಚಿವ ಎಚ್‌.ಕೆ.ಪಾಟೀಲ

Pinterest LinkedIn Tumblr

patil

ಬೆಂಗಳೂರು: ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ರಾಜ್ಯದ ಸಾವಿರ ಗ್ರಾಮಗಳನ್ನು ‘ಬಯಲು ಬಹಿರ್ದೆಸೆ ಮುಕ್ತ ಗ್ರಾಮ’ಗಳೆಂದು ಘೋಷಿಸಲಾಗುವುದು ಎಂದು ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿಗಳು, ಉಪಕಾರ್ಯ­ದರ್ಶಿಗಳು ಮತ್ತು ಮುಖ್ಯ ಲೆಕ್ಕಾಧಿಕಾರಿ­ಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತ­ನಾಡಿದ ಅವರು, ಜನವರಿ 25ರ ಒಳಗಾಗಿ ಈ ಗ್ರಾಮಗಳಿಗೆ ಸಾಮಾಜಿಕ ಲೆಕ್ಕ­ಪರಿಶೋಧನಾ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ. ಶೌಚಾಲಯ ನಿರ್ಮಾಣದಲ್ಲಿ ಶೇಕಡ 100ರಷ್ಟು ಪ್ರಗತಿ ಸಾಧಿಸಿರುವ ಗ್ರಾಮಗಳನ್ನು ಗುರುತಿಸಿ, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲಾಗುವುದು ಎಂದರು.

10 ಲಕ್ಷ ಶೌಚಾಲಯ ನಿರ್ಮಾಣ ಖಚಿತ: 2018ರ ಒಳಗಾಗಿ ಕರ್ನಾಟಕವನ್ನು ‘ಬಯಲು ಬಹಿರ್ದೆಸೆ ಮುಕ್ತ’ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಈ ವರ್ಷ ರಾಜ್ಯ­ದಾದ್ಯಂತ ನಿರ್ಮಿಸಲು 10 ಲಕ್ಷ ಶೌಚಾಲಯಗಳ ನಿರ್ಮಿಸುವ ಗುರಿ ತಲುಪುವ ವಿಶ್ವಾಸ  ವ್ಯಕ್ತಪಡಿಸಿದರು.

‘ಒಂಬತ್ತು ತಿಂಗಳ ಅವಧಿಯಲ್ಲಿ 5.1 ಲಕ್ಷ ಶೌಚಾಲಯಗಳನ್ನು ನಿರ್ಮಿಸ­ಲಾಗಿದ್ದು, ಉಳಿದ ಶೌಚಾಲಯಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಮೂರು ತಿಂಗಳಲ್ಲಿ ಅವುಗಳೂ ಪೂರ್ಣ­ಗೊಳ್ಳಲಿವೆ’ ಎಂದು ಹೇಳಿದರು.

ಗ್ರಾಮಪಂಚಾಯತಿ ನೌಕರರ ಕಾಯಂ: ‘ಬೆಂಗಳೂರಿನಲ್ಲಿ ನಡೆದಿದ್ದ ವಿಧಾನ ಮಂಡಲ ಅಧಿವೇಶನದಲ್ಲಿ ಗ್ರಾಮಪಂಚಾಯಿತಿ ನೌಕರರ ಸೇವೆಯನ್ನು ಕಾಯಂಗೊಳಿಸುವುದಾಗಿ ಭರವಸೆ ನೀಡಿದ್ದೆ. ಅದೇ ರೀತಿ 27 ಸಾವಿರ ನೌಕರರ ಸೇವೆ ಕಾಯಂ­ಗೊಳಿಸಲಾಗಿದೆ’ ಎಂದು ಅವರು ಹೇಳಿದರು.

ಶೈಕ್ಷಣಿಕ ಅರ್ಹತೆ ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ನೌಕರರ ಸೇವೆ­ಯನ್ನು ಕಾಯಂಗೊಳಿಸಲು ಸಾಧ್ಯ­ವಾಗಿರ­ಲಿಲ್ಲ. ಈ ವಿಚಾರದಲ್ಲಿ ವಿವೇಚನೆ­ಯಿಂದ ವರ್ತಿಸಿ, ಶೈಕ್ಷಣಿಕ ಅರ್ಹತೆ ಸೇರಿದಂತೆ ಕೆಲವು ನಿಯಮಗಳಿಗೆ ವಿನಾಯಿತಿ ನೀಡಲಾಗಿದೆ ಎಂದರು.
ಈಗಾಗಲೇ 11,648 ನೌಕರರ ಸೇವೆ  ಕಾಯಂಗೊಳಿಸಲಾಗಿದೆ. 11,239 ನೌಕರರಿಗೆ ಕನಿಷ್ಠ ಕೂಲಿ ನೀಡಲು ಅನುಮೋದನೆ ನೀಡಲಾಗಿದೆ ಎಂದರು.

ಡಾಟಾ ಎಂಟ್ರಿ ಆಪರೇಟರ್‌ ನೇಮಕ: ‘ಶೈಕ್ಷಣಿಕ ಅರ್ಹತೆಯ ಕಾರಣಕ್ಕೆ ಡಾಟಾ ಎಂಟ್ರಿ ಆಪರೇಟರ್‌ಗಳ ನೇಮಕಕ್ಕೂ ಅಡಚಣೆಯಾಗಿತ್ತು. ಈ ಸಭೆಯಲ್ಲಿ ಇದಕ್ಕೂ ಸ್ಪಷ್ಟನೆ ನೀಡಿ ನಾಲ್ಕು ಸಾವಿರ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಲು ಒಪ್ಪಿಗೆ ಸೂಚಿಸಲಾಗಿದೆ’ ಎಂದರು.

ಅನುದಾನ ಕಡಿತ ಮಾಡದಂತೆ ಒತ್ತಾಯ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಾಗಿ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಈ ವರ್ಷ ರೂ 1,200 ಕೋಟಿ ಕಡಿತ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ನೀಡಲು, ಅಭಿವೃದ್ಧಿ ಕೆಲಸಗಳಿಗೆ ತೊಂದರೆ­ಯಾಗಲಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ಕಳವಳ ವ್ಯಕ್ತ ಪಡಿಸಿದರು.

ನೆರೆಯ ಆಂಧ್ರಪ್ರದೇಶಕ್ಕೆ ರೂ4,200 ಕೋಟಿಯಷ್ಟು ಪೂರ್ಣ ಅನುದಾನ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ. ರಾಜ್ಯಕ್ಕೆ ಈ ವರ್ಷ ರೂ3,150 ಕೋಟಿ ನೀಡಬೇಕಿತ್ತು. ಆದರೆ, ಕಾರಣವಿಲ್ಲದೆ ರೂ 1,200 ಕೋಟಿ ಕಡಿತ ಮಾಡಲು ಹೊರಟಿದೆ. ಜನವರಿ 3 ಅಥವಾ 4ರಂದು ದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ ಬೀರೇಂದರ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಕೇಂದ್ರ ಅನುಸರಿಸುತ್ತಿರುವ ಮಲತಾಯಿ ಧೋರಣೆಯನ್ನು ಅವರ ಗಮನಕ್ಕೆ  ತರಲಾಗುವುದು ಎಂದು ಹೇಳಿದರು.

ಜನವರಿ 6ರಂದು ತಿರುವನಂತ­ಪುರದಲ್ಲಿ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಸಭೆ ನಡೆಯಲಿದ್ದು, ಅಲ್ಲೂ ಈ ವಿಷಯ ಪ್ರಸ್ತಾಪಿಸಲಾಗುವುದು ಎಂದು ಸಚಿವರು ತಿಳಿಸಿದರು.

Write A Comment