ಕರ್ನಾಟಕ

ಹವ್ಯಕ ಸಮುದಾಯದವರ ಸಮಾನ ಮನಸ್ಕರ ಧರ್ಮಸಭೆ: ರಾಘವೇಶ್ವರಶ್ರೀ ವಿರುದ್ಧ ಅಸಮಾಧಾನ ಸ್ಫೋಟ: ಮಠದ ಅವ್ಯವಸ್ಥೆ ಸರಿಪಡಿಸಲು ಬಲಿಷ್ಠ ವೇದಿಕೆ ರಚನೆಗೆ ನಿರ್ಧಾರ

Pinterest LinkedIn Tumblr

pvec18BRY-ragveswar-Guru-1

ಸಾಗರ: ರಾಮಚಂದ್ರಾಪುರ ಮಠದ ರಾಘ­ವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿರುವ ಕಾರಣ ಗುರುವಾರ ಇಲ್ಲಿ ನಡೆದ ಹವ್ಯಕ ಸಮುದಾಯದವರ ಸಮಾನ ಮನಸ್ಕರ ಧರ್ಮಸಭೆಯಲ್ಲಿ ಶ್ರೀಗಳ ವಿರುದ್ಧ ಸಮುದಾಯದ ಅಸಮಾಧಾನ ಬಹಿರಂಗವಾಗಿ ಸ್ಫೋಟ­ಗೊಂಡಿದೆ.

ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಅವರ ಅಧ್ಯಕ್ಷತೆ­ಯಲ್ಲಿ ನಡೆದ ಸಭೆ­ಯಲ್ಲಿ ಮಠದ ಅವ್ಯವಸ್ಥೆ ಸರಿ­ಪಡಿಸಲು ಹವ್ಯಕ ಸಮುದಾಯದ ಎಲ್ಲರನ್ನೂ ಒಳ­ಗೊಂಡಂತೆ ಬಲಿಷ್ಠ ವೇದಿಕೆ ರೂಪಿ­ಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಶ್ರೀನಿವಾಸ್ ಮಾತನಾಡಿ, ಮಠದ ಪೀಠಕ್ಕೆ ತೊಂದರೆ ಕೊಡುವ ಉದ್ದೇಶ ಯಾರಿಗೂ ಇಲ್ಲ. ಇಷ್ಟು ದಿನ ರಾಘವೇಶ್ವರ ಶ್ರೀಗಳ ವಿರುದ್ಧ ಗಂಭೀರ ಆರೋಪ ಬಂದರೂ ಸಮಾಜ­ಬಾಂಧ­ವರು ಸಹಿಸಿಕೊಂಡಿದ್ದರು. ಆದರೆ ಮಠ ಅಥವಾ ಪೀಠಕ್ಕಿಂತ ವ್ಯಕ್ತಿ ದೊಡ್ಡವರಲ್ಲ ಎಂದರು.

ರಾಘವೇಶ್ವರ ಶ್ರೀಗಳ ಬಗ್ಗೆ ಯಾರಿಗೂ ವೈಯುಕ್ತಿಕ ದ್ವೇಷವಿಲ್ಲ. ಆದರೆ ಅವರು ತಾವು ಹೇಳಿ­ದ್ದನ್ನು ಯೋಚನೆ ಮಾಡದೆ ಕೇಳುವ ವ್ಯಕ್ತಿ­ಗಳನ್ನು, ಉದ್ಯಮಿ­ಗಳನ್ನು, ರಾಜಕೀಯವಾಗಿ ವಿಶೇಷವಾಗಿ ಅಧಿಕಾರ ಹೊಂದಿ­ದವರನ್ನು ಮಾತ್ರ ಹತ್ತಿರ ಇಟ್ಟುಕೊಂಡಿ­ದ್ದಾರೆ. ಈ ಕಾರಣ­ದಿಂದಲೇ ಇಷ್ಟೆಲ್ಲಾ ನಡೆಯಬಾರದ  ಬೆಳವಣಿಗೆಯಾಗಿದೆ ಎಂದು ದೂರಿದರು.

ಸತ್ಯ ಮರೆಮಾಚುವ ಶ್ರೀಗಳು: ಏಕಾಂತ ಸೇವೆ ಹೆಸರಿನಲ್ಲಿ ಶ್ರೀಗಳಿಂದ ಹೆಣ್ಣು ಮಕ್ಕಳ ವಿಷಯದಲ್ಲಿ ಆಗಬಾ­ರದ್ದು ಆಗುತ್ತಿದೆ ಎಂದು ಶ್ರೀಗಳ ಪರಮಾಪ್ತರೇ ಖಾಸಗಿಯಾಗಿ ಒಪ್ಪಿಕೊ­ಳ್ಳುತ್ತಾರೆ. ಇದು ಸರಿಯಲ್ಲ ಎಂದು ಶ್ರೀಗಳಿಗೆ ಹೇಳಿದವರಿಗೆ ಅವರು ‘ನಾನು ಶ್ರೀರಾಮನ ಇಚ್ಛೆ­ಯಿಂದ ಇದನ್ನೆಲ್ಲಾ ಮಾಡುತ್ತಿ­ದ್ದೇನೆ. ನಾನೇ ಶ್ರೀರಾಮ’ ಎಂದು ಹೇಳುವ ಮೂಲಕ ಸತ್ಯ ಮರೆ­ಮಾಚಿದ್ದಾರೆ ಎಂದು ಆರೋಪಿಸಿದರು.

ಪ್ರೇಮಲತಾ ದಂಪತಿಯಿಂದ ಮಠಕ್ಕೆ ಬೆದರಿಕೆ ಕರೆ ಬಂದಿದೆ ಎಂದಾಗಲೇ ಶ್ರೀಗಳು ಮಠಕ್ಕೆ ಸಂಬಂಧಪಟ್ಟಂತೆ ಇರುವ 28 ಹಿರಿಯ ಸದಸ್ಯರ ಸಮಾಲೋಚನಾ ಸಭೆ ಕರೆಯಬೇಕಿತ್ತು. ಹಾಗೆ ಮಾಡದೆ ಮಠದ ಪ್ರಭಾವ ಬಳಸಿ 21 ದಿನ ಪ್ರೇಮಲತಾ ದಂಪತಿ ಜೈಲಿನಲ್ಲಿ ಇರುವಂತೆ ಮಾಡ­ಲಾಯಿತು. ಪೀಠದ ಮರ್ಯಾದೆ ಬೀದಿಗೆ ಬರಲು ಈ ಘಟನೆಯೇ ಕಾರಣ ಎಂದು ವಿಶ್ಲೇಷಿಸಿದರು.

ಪ್ರೇಮಲತಾ ಅವರ ವಿಷಯಕ್ಕೆ ಸಂಬಂಧಿ­ಸಿದಂತೆ ಹಂಚಿಕೊಳ್ಳಲಾಗದ ಯಾವುದೋ ಗುಟ್ಟು ಶ್ರೀಗಳ ಬಳಿ ಇರುವುದರಿಂದಲೇ ಅವರು ಮಠದ ಹಿರಿಯರ ಸಮಿತಿ ಸಭೆ ಕರೆದಿಲ್ಲ. ಪರಾಕ್ರಮ, ಬುದ್ಧಿವಂತಿಕೆ­ಗಿಂತ ಪ್ರಾಮಾ­ಣಿಕತೆ ಮತ್ತು ವಿವೇಕಕ್ಕೆ ಹೆಚ್ಚು ಬೆಲೆ ಎಂದು ನಮ್ಮ ಪುರಾಣ ಹೇಳಿರುವುದನ್ನು ಮಠ ಪಾಲಿಸಿದ್ದರೆ ಮಠಕ್ಕೆ ಇಂತಹ ದುರ್ಗತಿ ಬರುತ್ತಿರಲಿಲ್ಲ ಎಂದು ಅಭಿಪ್ರಾಯ­ಪಟ್ಟರು.

ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಅಶೋಕ್‌ ಜಿ.ಭಟ್ ಮಾತನಾಡಿ ರಾಮಚಂದ್ರಾಪುರ ಮಠಕ್ಕೆ ವಿಶಿಷ್ಟ ಸ್ಥಾನ ಬಂದದ್ದು ರಾಘವೇಶ್ವರ ಶ್ರೀಗಳಿಂದ ಎನ್ನುವ ಮಾತು ಸುಳ್ಳಲ್ಲ. ಆದರೆ ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದ ಮಾತ್ರಕ್ಕೆ ಅವರ ತಪ್ಪುಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಡಿಎನ್‌ಎ ಸಾಕ್ಷ್ಯ: ಶ್ರೀಗಳ ಮೇಲೆ ಬಂದಿರುವ ಅತ್ಯಾ­ಚಾರದ ಆರೋಪ ನಿಜವೊ, ಸುಳ್ಳೊ ಎಂಬುದನ್ನು ನ್ಯಾಯಾ­­ಲಯ ತೀರ್ಮಾ­ನಿಸುತ್ತದೆ. ಇದೀಗ ನ್ಯಾಯಾ­­ಲಯದ ಮುಂದಿರುವ ಡಿಎನ್ಎ ವರದಿ ಗಮನಿ­ಸಿ­ದರೆ ಅನಾಚಾರ ನಡೆದಿದೆ ಎಂದು ಮೇಲ್ನೋ­ಟಕ್ಕೆ ಸ್ಪಷ್ಟವಾಗುತ್ತದೆ. ಡಿಎನ್ಎ ಪರೀಕ್ಷೆ ಕೂಡ ಸುಳ್ಳು, ರಾಜಕೀಯ ಪ್ರೇರಿತ ಎನ್ನುವುದು ಮೌಢ್ಯದ ಪರಮಾವಧಿಯಾಗುತ್ತದೆ ಎಂದರು.

ಉಡುಪಿಯ ವಿದ್ಯಾಭೂಷಣ ತೀರ್ಥ ಸ್ವಾಮೀಜಿ, ಈ ಹಿಂದೆ ಇಂದ್ರಿಯ ನಿಗ್ರಹ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಪೀಠ ತ್ಯಾಗ ಮಾಡಿದರು. ರಾಮ­ಚಂದ್ರಾಪುರ ಮಠದ ಶ್ರೀಗಳು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಹವ್ಯಕ ಸಮಾಜ ಕೂಡ ಈ ದಿಕ್ಕಿನಲ್ಲಿ ಯೋಚನೆ ಮಾಡದೆ ಇದ್ದರೆ ಮುಂದಿನ ಪೀಳಿಗೆಗೆ ಉಪ­ದೇಶ ಮಾಡುವ ಹಕ್ಕು ಕಳೆದುಕೊಳ್ಳುತ್ತದೆ ಎಂದರು.

ಶಿರಸಿಯ ಸಚ್ಚಿದಾನಂದ ಹೆಗಡೆ, ಹುಬ್ಬಳ್ಳಿಯ ಸಿ.ಬಿ.ಎಲ್.ಹೆಗಡೆ, ಕುಮಟಾದ ಡಾ.ಟಿ.ಟಿ.­ಹೆಗಡೆ, ಸೀತಾರಾಮರಾವ್‌ ಹೊಸ­ಬಾಳೆ, ಸಿ.­ಗೋಪಾ­ಲ­ಕೃಷ್ಣ ರಾವ್, ಸುಶಾಂತ್‌ ಪುತ್ತೂರು, ಇಂದಿರಾ ಮೋಹನ್ ಹೆಗಡೆ ವೇದಿಕೆಯಲ್ಲಿದ್ದರು. ಮಂಜುನಾಥ್‌ ಹೆಗಡೆ ಹೊಸಬಾಳೆ ನಿರೂಪಿಸಿದರು.

Write A Comment