ಕರ್ನಾಟಕ

ಪ್ರಧಾನಿ ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ: ಮೊಬೈಲ್ ಒನ್‌ಗೆ ಚಾಲನೆ ಸಮಾರಂಭದಲ್ಲಿ ಸಿದ್ದರಾಮಯ್ಯ ಹೇಳಿಕೆ

Pinterest LinkedIn Tumblr

pvec09BRYo-Mobile-MSM-06

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೊಬೈಲ್ ಆಡಳಿತದ ಕುರಿತು ಹೇಳಿದ ಮಾತನ್ನು ರಾಜ್ಯ ಸರಕಾರ ಸಾಕಾರಗೊಳಿಸಿದ್ದು, ಡಿಜಿಟಲ್ ಇಂಡಿಯಾ ಸಾಕಾರಕ್ಕೆ ಕರ್ನಾಟಕ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸೋಮವಾರ ನಡೆದ ಕರ್ನಾಟಕ ಮೊಬೈಲ್ ಒನ್ ಸೇವೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಮ್ಮುಖದಲ್ಲಿ ಮಾತನಾಡಿದ ಅವರು ”ಪ್ರಧಾನಿ ಮಾತಿಗೆ ಸ್ಪಂದಿಸಿ, ಮೊಬೈಲ್ ಆಡಳಿತವನ್ನು ದೇಶದಲ್ಲಿಯೇ ಮೊದಲ ಬಾರಿಗೆ ಅನುಷ್ಠಾನ ಮಾಡಿದ್ದೇವೆ. ಡಿಜಿಟಿಟಲ್ ಇಂಡಿಯಾ ಬೆಂಗಳೂರಿನಿಂದಲೇ ಆರಂಭವಾಗಿದ್ದು, ಇದನ್ನು ಉಳಿದ ರಾಜ್ಯಗಳು ಅನುಸರಿಸುತ್ತೇವೆ ಎಂಬ ಭರವಸೆ ಇದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

”ಮೊಬೈಲ್ ಆಡಳಿತವು ತಮ್ಮ ಪಾಲಿಗೆ ತಂತ್ರಜ್ಞಾನವನ್ನು ಆದಾಯ ಮೂಲವಾಗಿಸುವ ದಾರಿಯಲ್ಲ. ಅದೊಂದು ಜವಾಬ್ದಾರಿಯುತ ಜನೋಪಕಾರಿ ಆಡಳಿತಕ್ಕೆ ದಾರಿಯಾಗಬೇಕು. ನಾಗರಿಕರಿಗೆ ನಾವು ನೀಡುವ ಭರವಸೆಯನ್ನು ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಿಸುವ ಉತ್ತಮ ಆಡಳಿತವಾಗಿ ಪರಿವರ್ತನೆಯಾಗಬೇಕು,” ಎಂದರು.

”ಸರಕಾರದ ಆಡಳಿತ ನಿಮ್ಮ ಬೆರಳ ತುದಿಯಲ್ಲಿ ಎಂಬ ಶೀರ್ಷಿಕೆಯಡಿ *161 ಸ್ಲಾಷ್ ಒತ್ತಿದರೆ ಸರಕಾರದ ಸಾವಿರಾರು ಸೇವೆಗಳ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಮೊಬೈಲ್ ಆ್ಯಪ್ಸ್ ಬಳಸಿ ದೇಶ-ವಿದೇಶದ ಯಾವುದೇ ಮೂಲೆಯಲ್ಲಿ ಕುಳಿತು ಕರ್ನಾಟಕದ ಸರಕಾರದ ಸೇವೆ ಪಡೆಯಬಹುದು. ಬಸ್, ರೈಲು ಟಿಕೆಟ್, ಮುಂಗಡ ಬುಕ್ಕಿಂಗ್, ಪಾಸ್‌ಪೋರ್ಟ್ ಸೇವೆಯ ವಿವರ, ಆದಾಯ ತೆರಿಗೆ ಪಾವತಿ, ವಿದ್ಯುತ್ ಬಿಲ್ ಪಾವತಿ ಮಾಡಬಹುದು. ಎಂ-ಪವರ್ ಆ್ಯಪ್ಸ್ ಡೌನ್‌ಲೋಡ್ ಮಾಡಿಕೊಂಡರೆ ಅದರಲ್ಲಿ ಸೇಫ್ ಬಟನ್ ಒತ್ತಿದರೆ ದುಷ್ಕರ್ಮಿಗಳ ಆಕ್ರಮಣಕ್ಕೆ ತುತ್ತಾದ ಯುವತಿ, ಮಹಿಳೆಯರು ತಮ್ಮ ಬಂಧುಗಳ ಮೊಬೈಲ್‌ಗೆ ಸಂದೇಶ ಹೋಗಿ, ಯುವತಿ ಯಾವ ಜಾಗದಲ್ಲಿದ್ದಾಳೆ ಎಂಬ ಮಾಹಿತಿಯೂ ರವಾನೆಯಾಗುತ್ತದೆ. ಮುಂದಿನ ದಿನಗಳಲ್ಲಿ ಮೆಟ್ರೊ, ನ್ಯಾಯಾಂಗದ ಸೇವೆಗಳನ್ನು ಒದಗಿಸುವ ಆಶಯ ಸರಕಾರದ್ದಾಗಿದೆ,” ಎಂದರು.

MOBILE_ONE1_2237277f”ಸರಕಾರಿ ಸೇವೆಗಳು ಮಾತ್ರವಲ್ಲದೆ ಖಾಸಗಿ ವಲಯದ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಿದ್ದೇವೆ. ಮೊಬೈಲ್ ಆಡಳಿತ ಮೂಲಕ ಅನ್ವೇಷಣಾತ್ಮಕ ಆಸಕ್ತಿ, ಪ್ರವೃತ್ತಿ ಹೊಂದಿರುವ ಯುವ ಸಮುದಾಯವನ್ನೂ ಪ್ರೋತ್ಸಾಹಿಸುವ ಉಪಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಐಟಿ, ಜ್ಞಾನ(ನಾಲೆಡ್ಜ್)ದ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿರುವ ಕರ್ನಾಟಕವು ಭಾರತದ ಸ್ಟಾರ್ಟ್‌ಅಪ್ ರಾಜಧಾನಿಯಾಗಿ ಹೊರಹೊಮ್ಮಲಿರುವುದರ ಬಗ್ಗೆ ಯಾವುದೇ ಸಂದೇಹ ಬೇಡ,” ಎಂದು ಹೇಳಿದರು.
**

ಸಿದ್ದರಾಮಯ್ಯ ಆಡಳಿತಕ್ಕೆ ರಾಜ್ಯಪಾಲರ ಮೆಚ್ಚುಗೆ
ಬೆಂಗಳೂರು: ಮೊಬೈಲ್ ಆಡಳಿತದ ಮೂಲಕ ರಾಜ್ಯದ ಜನತೆಯಲ್ಲಿದ್ದ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಅದ್ವೀತಿಯ ಸಾಧನೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಮುಕ್ತಕಂಠದಿಂದ ಶ್ಲಾಘಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ರಾಜ್ಯ ಸರಕಾರ ಸೋಮವಾರ ಏರ್ಪಡಿಸಿದ್ದ ಮೊಬೈಲ್ ಆಡಳಿತಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಮ್ಮುಖದಲ್ಲಿ ಮಾತನಾಡಿದ ವಾಲಾ ಅವರು ಸಿದ್ದರಾಮಯ್ಯ ಅವರ ಕಡೆಗೆ ಪದೇಪದೆ ಕೈತೋರುತ್ತಾ, ಮನಸಾರೆ ಹೊಗಳಿದರು. ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸರಕಾರದ ಕಾರ್ಯವೈಖರಿ ಕುರಿತು ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಭಾವನೆ ಹಂಚಿಕೊಂಡ ವಾಲಾ, 20ಕ್ಕೂ ಹೆಚ್ಚು ಬಾರಿ ಸಿದ್ದರಾಮಯ್ಯ ಹೆಸರನ್ನು ಉಲ್ಲೇಖಿಸಿದರು.

 

ರಾಜ್ಯದ ಜನತೆಯಲ್ಲಿದ್ದ ಅಪಾರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಹುರಿದುಂಬಿಸಿ, ಇಂತಹದೊಂದು ಯೋಜನೆಯನ್ನು ಸಾಕಾರಗೊಳಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. ಈ ಮಟ್ಟಕ್ಕೇರುವ ಸಾಧನೆಯನ್ನು ಹಿಂದೆ ಯಾರೂ ಮಾಡಿರಲಿಲ್ಲ ಎಂದು ಕೊಂಡಾಡಿದರು.

ಮೊಬೈಲ್ ಆಡಳಿತದಲ್ಲಿ ಮಾಹಿತಿ ಇದೆ. ಅದನ್ನು ಉನ್ನತೀಕರಿಸಿ ಅದರ ಫಲ ರಾಜ್ಯದ ಜನತೆಗೆ ಸಿಗುವಂತಾಗಲಿ ಎಂದು ಆಶಿಸಿದರು. ”ಪ್ರಧಾನಮಂತ್ರಿಯವರು ಡಿಜಿಟಲ್ ಇಂಡಿಯಾ ಘೋಷಣೆ ಮಾಡಿದ್ದರು. ಇಲ್ಲಿ ಅದು ವಾಸ್ತವವಾಗಿದೆ. ಇದನ್ನು ಬಳಸಿ ದೇಶವನ್ನು, ರಾಜ್ಯವನ್ನು ಕಟ್ಟೋಣ,” ಎಂದರು.

ಕಾರ್ಯಕ್ರಮದ ಆರಂಭದಲ್ಲಿ 3ಡಿ ಹಾಲೋಗ್ರಾಮ್ ಬಳಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಿಂದ ಹೊರಬಂದು ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ 3ಡಿ ಎಫೆಕ್ಟ್‌ನ್ನು ವಿಶೇಷವಾಗಿ ಪ್ರಸ್ತಾಪಿಸಿದ ವಾಲಾ ”ಇದು ಅಚ್ಚರಿಯ ಮೂಡಿಸುವ ತಂತ್ರಜ್ಞಾನ. ವಿಧಾನಸೌಧದಿಂದಲೇ ರಾಜ್ಯದ ಜನತೆಯನ್ನು ತಲುಪಬಹುದು ಎಂಬುದನ್ನು 3ಡಿ ಎಫೆಕ್ಟ್ ತೋರಿಸಿಕೊಟ್ಟಿದೆ. ಇದನ್ನು ಬಳಸಿ ಉತ್ತಮ ಆಡಳಿತ ನೀಡಲಿ,” ಎಂದು ಹಾರೈಸಿದರು.
**

ಗಮನ ಸೆಳೆದ ಹೈಟೆಕ್ ಕಾರ್ಯಕ್ರಮ
ಬೆಂಗಳೂರು: ಮೊಬೈಲ್ ಆಡಳಿತಕ್ಕೆ ಚಾಲನೆ ಕಾರ್ಯಕ್ರಮ ಕರ್ನಾಟಕವು ಐಟಿ ಕ್ಷೇತ್ರದಲ್ಲಿ ಹಾಕಿಕೊಟ್ಟಿರುವ ಹೆದ್ದಾರಿಯನ್ನು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಸೇರಿದಂತೆ ಸಭಿಕರ ಮುಂದೆ ಬಿಂಬಿಸುವಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮಕ್ಕೆ ಮುನ್ನ ಇ-ಆಡಳಿತ ಇಲಾಖೆ ಪ್ರಸ್ತುತ ಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ 3 ಡಿ ಹಾಲೋಗ್ರಫಿ ಕಾರ್ಯಕ್ರಮವನ್ನು ಕಂಡವರು ನಿಬ್ಬೆರಗಾದರು. ಬಾಲಕನೊಬ್ಬ ರಾಷ್ಟ್ರಧ್ವಜದ ಬಣ್ಣಗಳಿರುವ ಬಲೂನುಗಳನ್ನು ಹಾರಿಬಿಡುವುದನ್ನು 3ಡಿ ಎಫೆಕ್ಟ್‌ನಲ್ಲಿ ಪ್ರದರ್ಶಿಸಲಾಯಿತು.

ಕಾಣದ ಕನ್ನಡ
ಕಾರ್ಯಕ್ರಮದಲ್ಲಿ ಕನ್ನಡ ಮಾತ್ರ ಎಲ್ಲಿಯೂ ಕಾಣಲಿಲ್ಲ. ವೇದಿಕೆಯೇ ಮೇಲೆ ಅಳವಡಿಸಲಾಗಿದ್ದ ಫಲಕಗಳಲ್ಲಿ, ಕರ್ನಾಟಕ ಸರಕಾರದ ಚಿಹ್ನೆಯಲ್ಲಿ ಕೂಡ ಕನ್ನಡದ ಅಕ್ಷರಗಳು ಇರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3ಡಿ ಹಾಲೋಗ್ರಫಿಯಲ್ಲಿ ಮೊದಲು ಕನ್ನಡದಲ್ಲಿ ಹಾಗೂ ಆ ಬಳಿಕ ಇಂಗ್ಲಿಷ್‌ನಲ್ಲಿ ರಾಜ್ಯದ ಜನತೆಗೆ ಸಂದೇಶ ರವಾನಿಸುವಂತೆ ಸಿದ್ಧಪಡಿಸಲಾಗಿತ್ತು.

ಐಟಿ-ಬಿಟಿ ಸಚಿವ ಎಸ್.ಆರ್. ಪಾಟೀಲ್ ಪಾಲ್ಗೊಂಡಿರಲಿಲ್ಲ. ವೇದಿಕೆಯ ಮೇಲೆ ಐಟಿ-ಬಿಟಿ, ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ವಿಜೃಂಭಿಸಿದರು. ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಕೂಡ ವೇದಿಕೆ ಏರಲು ಅವಕಾಶ ಇರಲಿಲ್ಲ.

ವಂದನಾರ್ಪಣೆ ಮಾಡಿದ ಶ್ರೀವತ್ಸ ಕೃಷ್ಣ ಅವರು ತಮ್ಮ ತಾಯಿ ಹಾಗೂ ಪತ್ನಿಯ ಸೇವೆಯನ್ನು ಸ್ಮರಿಸಿದರಾದರೂ, ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ವಂದನೆ ಅರ್ಪಿಸುವುದನ್ನು ಮರೆತುಬಿಟ್ಟರು.

ಟ್ರಾಫಿಕ್ ಜಾಮ್ ಇಲ್ಲ
ರಾಷ್ಟ್ರಪತಿಗಳು ಬೆಂಗಳೂರಿಗೆ ಭೇಟಿ ನೀಡಿದರೂ ಅವರು ಹೆಲಿಕಾಪ್ಟರ್‌ನಲ್ಲಿಯೇ ಪ್ರಯಾಣಿಸಿದ್ದರಿಂದಾಗಿ ಎಲ್ಲಿಯೂ ವಾಹನ ಸಂಚಾರಕ್ಕೆ ಅಡ್ಡಿಯಾಗಲಿಲ್ಲ. ಯಲಹಂಕ ವಾಯುನೆಲೆಗೆ ಬಂದಿಳಿದ ಮುಖರ್ಜಿ, ಮುಖ್ಯಮಂತ್ರಿ ಜತೆಗೆ ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದ ಹೆಲಿಪ್ಯಾಡ್‌ಗೆ ಬಂದಿಳಿದರು. ರಸ್ತೆ ಮೂಲಕ ರಾಷ್ಟ್ರಪತಿ ಸಂಚರಿಸದೆ ಇದ್ದುದರಿಂದ ಎಲ್ಲಿಯೂ ವಾಹನ ಸಂಚಾರಕ್ಕೆ ತೊಂದರೆಯಾಗಲಿಲ್ಲ.

Write A Comment